ಸೊರಬ: ಸೇವೆ ಎನ್ನುವುದು ತೋರಿಕೆಯ ವಸ್ತುವಾಗದೇ ಹೃದಯದ ಅಂತರಾಳದಿಂದ ಮಾಡಬೇಕೆನ್ನುವ ಇಚ್ಛಾಶಕ್ತಿ ಹೊಂದಿದಾಗ ಸೇವಾ ಮನೋಭಾವಕ್ಕೊಂದು ಅರ್ಥ ಮೂಡುತ್ತದೆ ಎಂದು ಸಮಾಜ ಚಿಂತಕ ಶಂಕರ್ ಶೇಟ್ ಹೇಳಿದರು.ಶುಕ್ರವಾರ ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಉಳ್ಳವರು ಸಮಾಜ ಸೇವೆಗಾಗಿಯೇ ಗಳಿಸಿದ್ದರಲ್ಲಿ ಒಂದಿಷ್ಟನ್ನು ತೆಗೆದಿಟ್ಟರೆ ಸಮಾಜ ಗುರ್ತಿಸುತ್ತದೆ ಮತ್ತು ತಮ್ಮ ನಂತರದ ದಿನಗಳಲ್ಲಿ ತಾವು ನೀಡಿದ ಕೊಡುಗೆಗಳು ನೆನಪಿಸುತ್ತವೆ. ಆದ್ದರಿಂದ ಅಲ್ಪಾಯುಷ್ಯ ಮನುಷ್ಯನ ಬದುಕಿನಲ್ಲಿ ಸೇವಾ ಮನೋಭಾವವನ್ನು ಯಾರು ರೂಢಿಸಿಕೊಳ್ಳುತ್ತಾರೋ ಅವರಿಂದ ಸಮಾಜ ಉನ್ನತಿ ಸಾಧ್ಯವಾಗುತ್ತದೆ ಎಂದರು.ವೀರಶೈವ ಲಿಂಗಾಯತ ಸಮಾಜದ ಮಧ್ಯ ಕರ್ನಾಟಕ ಪ್ರಾಂತ್ಯದ ಅಧ್ಯಕ್ಷ ಸಿ.ಪಿ.ಈರೇಶ್ ಗೌಡ ಮಾತನಾಡಿ, ದಾನ ಧರ್ಮವೇನ್ನುವುದು ನಮ್ಮ ಮನಸಿನ ಅಂತಾರಾಳದಿಂದ ಬರಬೇಕು. ವಿಶೇಷ ಚೇತನವುಳ್ಳ ಮಕ್ಕಳ ಸೇವೆ ಮಾಡುವುದು ಎಂದರೆ ಅದು ದೇವರ ಸೇವೆಯೇ ಸರಿ. ಇಂಥ ಮಕ್ಕಳನ್ನು ಯಾವುದೇ ತಾರತಮ್ಯ ಇಲ್ಲದೇ ಪ್ರೀತಿ, ವಿಶ್ವಾಸ ಮತ್ತು ಕಾಳಜಿಯಿಂದ ನೋಡಿಕೊಳ್ಳುವ ಶಿಕ್ಷಕ ಮತ್ತು ಶಿಕ್ಷಕಿಯರ ಸಾಧನೆ ಎಲ್ಲಾ ಕರ್ತವ್ಯಗಳಿಗಿಂತ ಮೀಗಿಲು ಎಂದು ಹೇಳಿದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮತ್ತು ಸೇವೆ ಸಲ್ಲಿಸಿದ ಹಾಗೂ ಶಾಲೆಗೆ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ನಂತರ ಕೆನರಾ ಬ್ಯಾಂಕ್ ಸೊರಬ ಶಾಖೆ ವತಿಯಿಂದ ರೌಂಡ್ ಡೆಸ್ಕ್ ಕೊಡುಗೆಯಾಗಿ ನೀಡಲಾಯಿತು.ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯ ಅಧ್ಯಕ್ಷ ಎಚ್.ದೇವರಾಜ್ ಹುಲ್ತಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಜಿ.ಬಿ.ರಾಮಪ್ಪ, ರೂಪ, ಜಯಲಕ್ಷ್ಮಿ, ಉಮೇಶ್ ರಾಠೋಡ್, ಡಾ.ನವೀನ್ ಕುಳಗದ್, ಬಸಮ್ಮ, ಕೆನರಾ ಬ್ಯಾಂಕ್ ಸೊರಬ ಶಾಖೆಯ ಪ್ರಬಂಧಕ ಮಂಜುನಾಥ ಮತ್ತಿತರರಿದ್ದರು.
ರವೀಂದ್ರ ಎಸ್. ಸ್ವಾಗತಿಸಿದರು. ಶಿಕ್ಷಕ ಕೆ.ಬಿ.ಪುಟ್ಟರಾಜು ಪ್ರಾಸ್ತವಿಕವಾಗಿ ಮಾತನಾಡಿದರು. ವಾರ್ಷಿಕ ವರದಿ ಆರ್.ಪಲ್ಲವಿ ಓದಿದರು. ಗಾಯತ್ರಿ ನಾಯಕ್ ಬಹುಮಾನ ವಿತರಿಸಿದರು. ಸುವರ್ಣ ಎಚ್.ಆರ್.ನಿರೂಪಣೆ ಮಾಡಿದರು. ಮಂಗಳ ಎಸ್.ಪೂಜಾರ್ ವಂದಿಸಿದರು.