ಕನ್ನಡಪ್ರಭ ವಾರ್ತೆ ಮಂಡ್ಯ
ಗುರುದೇವ ರಂಗದೊಳಗೆ ವಿಜೃಂಭಿಸಿದ ನಾಟ್ಯವೈಭವ. ಭಾವ, ರಾಗ, ತಾಳಗಳೊಂದಿಗೆ ಕಲಾವಿದರು ಪ್ರಸ್ತುತಪಡಿಸಿದ ಭರತನಾಟ್ಯ ರೂಪಕಗಳು ಅಲ್ಲೊಂದು ನೃತ್ಯಲೋಕವನ್ನೇ ಸೃಷ್ಟಿಸಿತ್ತು. ನೋಡುಗರ ಮೈ- ಮನಗಳನ್ನು ಹದವಾಗಿಸಿ ಧನ್ಯತಾಭಾವ ಮೂಡುವಂತೆ ಮಾಡಿತು. ಎರಡು ದಿನಗಳ ಕಾಲ ನಡೆದ ಗುರುದೇವೋತ್ಸವ ಶನಿವಾರ ನೃತ್ಯಾಂಜಲಿಯೊಂದಿಗೆ ಅಂತಿಮ ತೆರೆ ಬಿದ್ದಿತು.ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಆಯೋಜನೆಗೊಂಡಿದ್ದ ಗುರುದೇವೋತ್ಸವ ಶಾಸ್ತ್ರೀಯ ನೃತ್ಯಗಳ ರಾಷ್ಟ್ರೀಯ ಹಬ್ಬ ಅದ್ಧೂರಿಯಾಗಿ ಮೂಡಿಬಂದಿತು. ಆರಂಭದಲ್ಲಿ ವಿನಾಯಕ ಪುಷ್ಪಾಂಜಲಿ, ವೆಂಕಟಾಚಲ ನಿಲಯಂ, ಕನಕದಾಸರು, ಪುರಂದರದಾಸರ ಕೀರ್ತನೆಗಳು, ಶ್ರೀರಾಮ- ಕೃಷ್ಣ, ಶ್ರೀ ಸುಬ್ರಹ್ಮಣ್ಯ, ದೇವಿಯನ್ನು ಕುರಿತಾದ ಕೀರ್ತನಗಳಿಗೆ ಕಲಾವಿದರ ನಾಟ್ಯಪ್ರದರ್ಶನ ಮನಸೂರೆಗೊಂಡಿತು. ರಸ- ಭಾವಗಳನ್ನೆಲ್ಲಾ ಒಂದಾಗಿಸಿಕೊಂಡು ಅಂತರಂಗದ ಆನಂದವನ್ನು ನಾಟ್ಯದ ಮೂಲಕ ಹೊರತಂದ ಕಲಾವಿದರು ಅದನ್ನು ಆಸ್ವಾಧಿಸುವವರ ಅಂತರಂಗಕ್ಕೂ ಮುದವನ್ನು ಉಂಟುಮಾಡಿದರು.
ಅತ್ಯುತ್ತಮ ರಂಗಸಜ್ಜಿಕೆಯೊಂದಿಗೆ, ಧ್ವನಿ- ಬೆಳಕುಗಳ ಸಂಯೋಜನೆಯೊಂದಿಗೆ ಮೂಡಿಬಂದ ಭರತನಾಟ್ಯ ರೂಪಕಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಕಲಾವಿದರ ನಾಟ್ಯ ಪ್ರದರ್ಶನವನ್ನು ನೆರೆದಿದ್ದ ಪ್ರೇಕ್ಷಕರಲ್ಲಿ ಅನೇಕರು ಮೊಬೈಲ್‌ಗಳಲ್ಲಿ ಸೆರೆಹಿಡಿದರು. ಮಕ್ಕಳ ಕಲಾಪ್ರೌಢಿಮೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ನಾಟ್ಯಪ್ರದರ್ಶನವನ್ನು ನೋಡಿ ಆನಂದಿಸಿದರು.ಹಿಂದೂಸ್ತಾನಿ ಕಲಾವಿದೆ, ಕಲಾವಿಮರ್ಶಕಿ ಡಾ.ಮಣಿಕ್ ಬೆಂಗೇರಿ ಮಾತನಾಡಿ, ಭಾರತೀಯ ಕಲೆ, ಸಂಸ್ಕೃತಿ, ಪರಂಪರೆ ಅನಂತವಾದುದು. ಈ ಅನಂತವಾದುದನ್ನು ಪಡೆದುಕೊಳ್ಳುವುದು ನಮಗೆ ದೇವರು ಕೊಟ್ಟಿರುವ ವರ. ಕಲೆಯನ್ನು ಉಳಿಸಿ ಬೆಳೆಸಿಕೊಂಡು ಸಾಧನೆಯತ್ತ ಮುನ್ನಡೆದು ಕಲೆಗೆ ಹಾಗೂ ನಮ್ಮ ಪರಂಪರೆಯ ಶ್ರೀಮಂತಿಕೆಯನ್ನು ಹೆಚ್ಚಿಸುವುದು ಕಲಾವಿದರಾದವರ ಕರ್ತವ್ಯ ಎಂದು ಹೇಳಿದರು.
ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಕಲೆ ಒಮ್ಮೆ ಕೈ ಹಿಡಿದರೆ ಅದು ಕಲಾವಿದರನ್ನೂ ಎಂದಿಗೂ ಬಿಡುವುದಿಲ್ಲ. ಹಣ, ಹೆಸರು, ಕೀರ್ತಿಯನ್ನು ತಂದುಕೊಡುವುದಲ್ಲದೆ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ. ಕಲಾವಿದರಾದ ನಾವು ಕಲೆಯನ್ನು ಪ್ರೀತಿಸಬೇಕು. ಗೌರವಿಸಬೇಕು. ಪ್ರೋತ್ಸಾಹಿಸಬೇಕು. ನಾಟ್ಯಕಲೆಯನ್ನು ಪೋಷಣೆ ಮಾಡುವುದರಿಂದ ಇನ್ನಷ್ಟು ಎತ್ತರಕ್ಕೆ ಬೆಳೆಸುವುದಕ್ಕೆ, ಬೆಳೆಯುವುದಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬೆಂಗಳೂರಿನ ಅನನ್ಯ ಕಲ್ಚರಲ್ ಅಕಾಡೆಮಿ ಸಂಸ್ಥಾಪಕ ಡಾ.ಆರ್.ವಿ.ರಾಘವೇಂದ್ರ ಅವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಡಿ.ದಿನೇಶ್‌ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಎಲ್.ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಗುರುದೇವ ಲಲಿತಕಲಾ ಅಕಾಡೆಮಿಯ ನಿರ್ದೇಶಕಿ ಡಾ.ಚೇತನಾ, ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ ಅವರು ಹಾಜರಿದ್ದರು.
ಬೆಂಗಳೂರಿನ ಪುಷ್ಕರ ಫರ್ಫಾರ್ಮಿಂಗ್ ಆರ್ಟ್ಸ್‌ನ ಡಾ.ಸಹನಾ ಶಿಷ್ಯವೃಂದದವರು ಗುರು ಡಾ.ಚೇತನಾ ರಾಧಾಕೃಷ್ಣರವರ ಮಾರ್ಗದರ್ಶನದಲ್ಲಿ ನೃತ್ಯ ಕಾರ್ಯಾಗಾರದಲ್ಲಿ ಕಲಿತ ಕೃತಿಯೊಂದನ್ನು ಅದ್ಭುತವಾಗಿ ಪ್ರದರ್ಶಿಸಿದರು. ಆ ಕಲಾವಿದರಿಗೆ ನೆನಪಿನ ಕಾಣಿಕೆಯನ್ನು ನೀಡುವುದರ ಜೊತೆಗೆ ಡಾ.ಸಹನಾ ಅವರನ್ನು ಅಭಿನಂದಿಸಲಾಯಿತು. ಪ್ರೀತಿ ಅವರು ಪ್ರಸ್ತುತಪಡಿಸಿದ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ಅಮೋಘವಾಗಿ ಮೂಡಿಬಂದಿತು. ಗುರುದೇವ ಲಲಿತಕಲಾ ಅಕಾಡೆಮಿ ನಿರ್ದೇಶಕಿ ಡಾ.ಚೇತನಾ ಅವರು ಕೂಡ ಆಕರ್ಷಕವಾಗಿ ಏಕವ್ಯಕ್ತಿ ಭರತನಾಟ್ಯ ಪ್ರದರ್ಶಿಸಿ ಎಲ್ಲರ ಮನಸೂರೆಗೊಂಡರು. ಹಿರಿಯ ಶಿಷ್ಯವೃಂದದವರು ಭರತನಾಟ್ಯ ಮಾರ್ಗ ಪ್ರಸ್ತುತಿ ಅತ್ಯುತ್ತಮವಾಗಿ ಪ್ರದರ್ಶನಗೊಂಡಿತು.