ಚಿತ್ರದುರ್ಗ: ರಾಜ್ಯದ ಕಾಂಗ್ರೆಸ್ ಮುಖಂಡರಿಗೆ ರಾಹುಲ್ ಗಾಂಧಿ ಪ್ರಧಾನಿಯಾಗವುದು ಬೇಕಿಲ್ಲ. ಅವರವರ ಕುರ್ಚಿ ಉಳಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಶಕ್ತಿ ಕೇಂದ್ರದ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುತುವರ್ಜಿವಹಿಸಿದ್ದರೆ. ಬೆಂಗಳೂರು ಗ್ರಾಮಾಂತರದಲ್ಲಿ ಸಹೋದರ ಡಿ.ಕೆ.ಸುರೇಶ್ ಗೆಲ್ಲಿಸಿಕೊಂಡು ಮರ್ಯಾದೆ ಉಳಿಸಿಕೊಳ್ಳಬೇಕೆಂಬ ದಿಕ್ಕಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಲೆ ಕೆಡಿಸಿಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅಳಿಯನ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಕಾಂಗ್ರೆಸ್‍ನವರಿಗೆ ತಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆಂಬ ವಿಶ್ವಾಸವಿಲ್ಲ ಎಂದು ವ್ಯಂಗ್ಯವಾಡಿದರು.
ದೇಶದೆಲ್ಲೆಡೆ ನರೇಂದ್ರ ಮೋದಿ ನಾಯಕತ್ವ ಜನ ಬಯಸುತ್ತಿದ್ದಾರೆ. ನಾಲ್ಕು ನೂರು ಸೀಟು ಬಂದರೂ ಸಾಕು. 399 ಸ್ಥಾನ ಗೆದ್ದರೂ ಮೋದಿ ಪ್ರಧಾನಿಯಾಗುವುದು ಖಚಿತ. ಕಳೆದ ಮೂರು ತಿಂಗಳಿನಿಂದಲೂ ಬಿಜೆಪಿ ಚುನಾವಣೆಗೆ ವ್ಯಾಪಕ ತಯಾರಿ ನಡೆಸುತ್ತಿದೆ. ಶಕ್ತಿ ಕೇಂದ್ರದ ಪ್ರಮುಖರು ಮನೆ ಮನೆಗೆ ಹೋಗಿ ಪಕ್ಷದ ಸಾಧನೆಗಳನ್ನು ತಿಳಿಸಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಲೋಕಸಭೆ ಕಳಿಸಿಕೊಡಿ ಎಂದು ವಿನಂತಿಸಿದರು.ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಬಿಜೆಪಿ ಹುಮ್ಮಸ್ಸಿನಿಂದ ಚುನಾವಣೆಗೆ ತಯಾರಾಗಿದೆ. ಈ ಚುನಾವಣೆಗೆ ವಿಶೇಷತೆಯಿದೆ. ಮತದಾನಕ್ಕೆ ಕೇವಲ ಒಂಬತ್ತು ದಿನಗಳ ಬಾಕಿಯಿರುವುದರಿಂದ ಅಭ್ಯರ್ಥಿ ಗೆಲುವಿಗೆ ಶಕ್ತಿ ಕೇಂದ್ರದ ಪ್ರಮುಖರು ಹಗಲು-ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ ಎಂದರು.
ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, 60 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್‍ನಲ್ಲಿ ದೇಶದ ಪ್ರಧಾನಿಯಾಗುವ ಯೋಗ್ಯತೆ ಯಾರಿಗೂ ಇಲ್ಲ. ಅನೇಕ ಹಗರಣಗಳಲ್ಲಿ ಸಿಕ್ಕಿಕೊಂಡು ಜೈಲಿಗೆ ಹೋಗಿ ಬಂದವರಿದ್ದಾರೆ. ಅನೇಕರು ಬೇಲ್‍ನಲ್ಲಿದ್ದಾರೆ. ಬಿಜೆಪಿ ಅಭಿವೃದ್ಧಿ ಕೆಲಸಗಳನ್ನು ಮನೆ ಮನೆಗೆ ತಿಳಿಸಿ ನನ್ನನ್ನು ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಕೋರಿದರು.ಶಾಸಕ ಎಂ.ಚಂದ್ರಪ್ಪ, ವಿಪ ಸದಸ್ಯರಾದ ಕೆ.ಎಸ್.ನವೀನ್, ಚಿದಾನಂದಗೌಡ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ , ತಿಪ್ಪೇಸ್ವಾಮಿ, ಎಸ್.ಲಿಂಗಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಸಂಪತ್ ಕುಮಾರ್, ಸುರೇಶ್ ಸಿದ್ದಾಪುರ, ನವೀನ್ ಚಾಲುಕ್ಯ, ಬಾಳೆಕಾಯಿ ರಾಂದಾಸ್ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.