ರೈತರ ಬೆನ್ನಿಗೆ ರಾಜ್ಯ ಸರ್ಕಾರ ಸದಾ ನಿಲ್ಲುತ್ತದೆ: ಎನ್. ಚಲುವರಾಯಸ್ವಾಮಿ

KannadaprabhaNewsNetwork |  
Published : Oct 24, 2026, 01:45 AM IST
23ಕೆಎಂಎನ್ ಡಿ17 | Kannada Prabha

ಸಾರಾಂಶ

​ಕಬ್ಬಿಗೆ ನೀಡಬೇಕಿರುವ ₹100 ಪ್ರೋತ್ಸಾಹ ಧನದಲ್ಲಿ ಸಕ್ಕರೆ ಕಾರ್ಖಾನೆಗಳು ₹50 ಹಾಗೂ ರಾಜ್ಯ ಸರ್ಕಾರ ₹50 ನೀಡಬೇಕಿದೆ. ರಾಜ್ಯ ಸರ್ಕಾರ ತನ್ನ ಪಾಲನ್ನು ನೀಡುತ್ತಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿವೆ. ಈ ತಡೆಯಾಜ್ಞೆ ರದ್ದುಗೊಳಿಸಲು ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದೆ ಎಂದು ವಿವರಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

​ರೈತರ ಬೆನ್ನಿಗೆ ರಾಜ್ಯ ಸರ್ಕಾರ ಸದಾ ನಿಲ್ಲುತ್ತದೆ. ನಿಮಗೆ ಶಕ್ತಿ ನೀಡುವ ಕೆಲಸದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಶ್ವಾಸನೆ ನೀಡಿದರು.

ತಾಲೂಕಿನ ಗಣಂಗೂರು ಬಳಿಯ ಬೆಂಗಳೂರು- ಮೈಸೂರು ಹೆದ್ದಾರಿಯ ಟೋಲ್ ಪ್ಲಾಜಾದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿ, ಎಲ್ಲ ಪಕ್ಷಗಳು ಒಟ್ಟಾಗಿ ಕೇಂದ್ರ ಸರ್ಕಾರದ ಮುಂದೆ ರೈತರ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

​ರೈತರ ಬಹುತೇಕ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕು. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯರ ಅವಧಿಯಲ್ಲಿ ಕೇಂದ್ರ ಸರ್ಕಾರದ ಬಳಿ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಮೆಟ್ರೋ, ಜೆಜೆಎಂ ಅನುದಾನ, ಜಿಎಸ್‌ಟಿ ಹಣವನ್ನು ಸಹ ಕೇಂದ್ರ ಸರ್ಕಾರ ನೀಡುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ತಿಳಿಸಿದರು.

ನೆರೆಯ ರಾಜ್ಯಗಳಿಗೆ ನೀಡುವ ಪ್ರಾಮುಖ್ಯತೆಯನ್ನು ನಮ್ಮ ರಾಜ್ಯಕ್ಕೆ ನೀಡುತ್ತಿಲ್ಲ. ಕೇಂದ್ರದ ಮಲತಾಯಿ ಧೋರಣೆಯಿಂದಾಗಿ ರೈತರ ಸಮಸ್ಯೆಗಳು ಇನ್ನಷ್ಟು ಜಟಿಲಗೊಳ್ಳುತ್ತಿವೆ ಎಂದು ಅಸಮಾಧಾನ ಹೊರಹಾಕಿದರು.

​ಹಾಲಿನ ದರ ಏರಿಕೆ ಸಂಬಂಧ ಈಗಾಗಲೇ ಸಂಪುಟದಲ್ಲಿ (ಕ್ಯಾಬಿನೆಟ್) ಅನುಮೋದನೆ ದೊರೆತಿದೆ. ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ತಕ್ಷಣವೇ ಹಾಲಿನ ದರ ಏರಿಕೆಯಾಗಲಿದೆ. ​ಯಾವ ಬೆಳೆಗೆ ಎಂಎಸ್‌ಪಿ ನೀಡಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡಲಿದೆ. ಹೀಗಾಗಿ ನಿಮ್ಮೆಲ್ಲರ ಸಹಕಾರವಿದ್ದರೆ ಕೇಂದ್ರದ ಮೇಲೆ ಇನ್ನಷ್ಟು ಒತ್ತಡ ಹೇರಿ, ಆದಷ್ಟು ಶೀಘ್ರ ರೈತರ ಸಮಸ್ಯೆಗಳನ್ನು ಪರಿಹರಿಸಲು ನಿರಂತರ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

​ನಿಮ್ಮೆಲ್ಲರ ಆಶೀರ್ವಾದದಿಂದ ನಾವು ಸರ್ಕಾರ ರಚಿಸಿದ್ದೇವೆ. ಇದಕ್ಕಾಗಿಯೇ ಬೆಳಗಾವಿಯಲ್ಲಿ ಈಗಾಗಲೇ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಎಲ್ಲ ಪಕ್ಷಗಳು ಒಟ್ಟಾಗಿ ರೈತರ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಮುಂದಿಡಲು ನಿರ್ಧರಿಸಲಾಗಿದೆ. ನಾವು ರೈತರೊಂದಿಗೆ ಸದಾ ನಿಲ್ಲುತ್ತೇವೆ ಎಂದರು.

​ಕಬ್ಬಿಗೆ ನೀಡಬೇಕಿರುವ ₹100 ಪ್ರೋತ್ಸಾಹ ಧನದಲ್ಲಿ ಸಕ್ಕರೆ ಕಾರ್ಖಾನೆಗಳು ₹50 ಹಾಗೂ ರಾಜ್ಯ ಸರ್ಕಾರ ₹50 ನೀಡಬೇಕಿದೆ. ರಾಜ್ಯ ಸರ್ಕಾರ ತನ್ನ ಪಾಲನ್ನು ನೀಡುತ್ತಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿವೆ. ಈ ತಡೆಯಾಜ್ಞೆ ರದ್ದುಗೊಳಿಸಲು ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದೆ ಎಂದು ವಿವರಿಸಿದರು.

ಅಕ್ಟೋಬರ್ 26 ರಂದು ರೈತರೊಂದಿಗೆ ಸಭೆ ನಡೆಸಿ ಅವರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಇಳುವರಿ ಕಡಿಮೆಯಾಗುತ್ತಿರುವ ಬಗ್ಗೆ ರೈತರೇ ಒಂದು ನಿರ್ಧಾರಕ್ಕೆ ಬರಬೇಕು. ಉತ್ತರ ಹಾಗೂ ದಕ್ಷಿಣ ಭಾರತ ಎಂಬ ಕೇಂದ್ರ ಸರ್ಕಾರದ ತಾರತಮ್ಯ ತೊಡೆದುಹಾಕಲು ನಾನು ನಿಮ್ಮೊಂದಿಗೆ ಹೋರಾಡುತ್ತೇನೆ ಎಂದು ಭರವಸೆ ನೀಡಿದರು.

​ಈ ವೇಳೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಪೋಷಕರು ಪಣ ತೊಡಬೇಕು: ನಯನಾ ಮೋಟಮ್ಮ
ಮತದಾನ ಕೇಂದ್ರಗಳಿಗೆ ಸಚಿವ ಕೆ.ಎಸ್.ಬಸವಂತಪ್ಪ ಭೇಟಿ