ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿ ಮಂಡಿಸಿದ 2024-25ನೇ ಸಾಲಿನ ಆಯವ್ಯಯಕ್ಕೆ ರಾಜ್ಯ ಸರ್ಕಾರವೂ ಹೆಚ್ಚುವರಿಯಾಗಿ 645 ಕೋಟಿ ರು. ಮೊತ್ತದ ಯೋಜನೆಗಳನ್ನು ಸೇರ್ಪಡೆಗೊಳಿಸಿ ಬರೋಬ್ಬರಿ 13,014 ಕೋಟಿ ರು. ಗಾತ್ರದ ಆಯವ್ಯಯಕ್ಕೆ ಅನುಮೋದನೆ ನೀಡಿದೆ.
ಕಳೆದ ಫೆ.29 ರಂದು ಬಿಬಿಎಂಪಿಯ ಅಧಿಕಾರಿಗಳು 2024-25ನೇ ಸಾಲಿನ ಬಿಬಿಎಂಪಿಯ ಆಯವ್ಯಯ ಮಂಡನೆ ಮಾಡಿದ್ದರು. ಈ ವೇಳೆ ಒಟ್ಟು 12,369 ಕೋಟಿ ರು. ಗಾತ್ರದ ಬಜೆಟ್ ಮಂಡನೆ ಮಾಡಿ ರಾಜ್ಯ ಸರ್ಕಾರದ ಅನುಮೋದನೆ ಕಳುಹಿಸಲಾಗಿತ್ತು.
ರಾಜ್ಯ ಸರ್ಕಾರವೂ ಇದೀಗ ಬಿಬಿಎಂಪಿಗೆಯ ಆಯವ್ಯಯಕ್ಕೆ ಹೆಚ್ಚುವರಿಯಾಗಿ 645 ಕೋಟಿ ರು. ಮೊತ್ತದ ವಿವಿಧ ಯೋಜನೆ ಮತ್ತು ಕಾಮಗಾರಿಗಳನ್ನು ಸೇರ್ಪಡೆಗೊಳಿಸಿ ಬಿಬಿಎಂಪಿ ಬಜೆಟ್ ಗಾತ್ರವನ್ನು 13,014 ಕೋಟಿ ರು.ಗೆ ಹೆಚ್ಚಿಸಿ ಅನುಮೋದನೆ ನೀಡಿ ಆದೇಶಿಸಿದೆ.
ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾದ 645 ಕೋಟಿ ರು. ವೆಚ್ಚದ ಕಾಮಗಾರಿಗಳನ್ನು ಬಿಬಿಎಂಪಿ ಆದಾಯದಲ್ಲಿ ಕೈಗೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.
ಯಾವ ಯೋಜನೆಗೆ ಈ ₹645 ಕೋಟಿ?
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಗೆ 1000 ಕೋಟಿ ರು. ಬದಲಿಗೆ 1200 ಕೋಟಿ ರು. ಅನುದಾನ ನಿಗದಿ ಪಡಿಸಲಾಗಿದೆ. ಮೇಯರ್ ವಿವೇಚನೆಯ ಅನುದಾನದ ಕೋಟಾವನ್ನು 50 ಕೋಟಿ ರು.ನಿಂದ 100 ಕೋಟಿ ರು.ಗೆ ಹೆಚ್ಚಿಸಲಾಗಿದೆ.
ಮುಖ್ಯ ಆಯುಕ್ತರ ವಿವೇಚನೆಯ ಅನುದಾನದ ಕೋನ್ವನ್ನು 25 ಕೋಟಿ ರು.ನಿಂದ 50 ಕೋಟಿ ರು.ಗೆ ಏರಿಕೆ ಮಾಡಲಾಗಿದೆ.
ತೆರಿಗೆ ವಿಧಿಸುವಿಕೆ ಮತ್ತು ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿಯ ವಿವೇಚನೆಯ ಅನುದಾನದ ಕೋಟಾವನ್ನು 15 ಕೋಟಿ ರು.ನಿಂದ 25 ಕೋಟಿ ರು.ಗೆ ಹೆಚ್ಚಿಸಲಾಗಿದೆ.
ಇನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರ ವಿವೇಚನಾ ಅನುದಾನವನ್ನು 100 ಕೋಟಿ ರು.ನಿಂದ 250 ಕೋಟಿ ರು.ಗೆ ಹೆಚ್ಚಿಸಲಾಗಿದೆ.
ಸರ್ಕಾರದ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಗೆ ಬಿಬಿಎಂಪಿಯ ವಂತಿಕೆಯ ನಿಧಿಗೆ 100 ಕೋಟಿ ರು., ಹಲಸೂರು ಕೆರೆ ಅಭಿವೃದ್ಧಿಗೆ 20 ಕೋಟಿ ರು. ರಸೆಲ್ ಮಾರುಕಟ್ಟೆ ಅಭಿವೃದ್ಧಿಗೆ 40 ಕೋಟಿ ರು. ಹಾಗೂ ಬಿಬಿಎಂಪಿ ಆಸ್ಪತ್ರೆಗಳ ಅಭಿವೃದ್ಧಿಗೆ 150 ಕೋಟಿ ರು. ಅನುದಾನ ನಿಗದಿ ಪಡಿಸಿ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.