ವಿಬಿ-ಜಿ ರಾಮ-ಜಿ ಜಾಗೃತಿ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ
ವಿಬಿ-ಜಿ ರಾಮ-ಜಿ ಯೋಜನೆಯಲ್ಲಿ ರಾಮನ ಹೆಸರು ಬಂದಿರುವುದಕ್ಕೆ ಕಾಂಗ್ರೆಸಿಗರ ಹೊಟ್ಟೆಯಲ್ಲಿ ಬೆಂಕಿ ಬಿದ್ದಿದೆ. ಕಾಂಗ್ರೆಸ್ ಕ್ಷುಲ್ಲಕ ರಾಜಕಾರಣ ಬಿಟ್ಟು, ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು.
ಪಟ್ಟಣದ ಅಡಕೆ ಭವನದಲ್ಲಿ ಬಿಜೆಪಿ ಯಲ್ಲಾಪುರ ಮಂಡಲ ಹಮ್ಮಿಕೊಂಡಿದ್ದ ವಿಬಿ-ಜಿ ರಾಮ-ಜಿ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಗಾಂಧಿ ಕುಟುಂಬದ ಓಕೈಕೆಗಾಗಿ ಗಾಂಧಿ ಹೆಸರು ಬಳಸಿಕೊಂಡು ಯೋಜನೆಯನ್ನು ಕಾಂಗ್ರೆಸಿಗರು ಟೀಕೆ ಮಾಡುತ್ತಿದ್ದಾರೆ. ಅಧಿವೇಶನದಲ್ಲಿ ಕಾಂಗ್ರೆಸ್‌ನ ಜನಪ್ರತಿನಿಧಿಗಳು ಹುಚ್ಚಾಟ ನಡೆಸುತ್ತಿದ್ದಾರೆ. ಗ್ಯಾರಂಟಿ ಹೆಸರಲ್ಲಿ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಹಾಗಾಗಿ ಸ್ಥಳೀಯ ಸಂಸ್ಥೆಯ ಚುನಾವಣೆ ನಡೆಸಲೂ ಅವರಲ್ಲಿ ಹಣ ಇಲ್ಲ ಎಂದು ವ್ಯಂಗ್ಯವಾಡಿದರು.
ಪಕ್ಷದ ಕಾರ್ಯಗಳಿಗೆ, ಕಾರ್ಯಕರ್ತರಿಗೆ ಮನ್ನಣೆ ನೀಡುವ ನಾಯಕರನ್ನು ಸದಾ ಸ್ಮರಿಸಬೇಕು. ಪಕ್ಷವನ್ನು, ಕಾರ್ಯಕರ್ತರನ್ನು ಕಡೆಗಣಿಸಿ, ನೋವು ನೀಡಿ ತಮ್ಮ ಲಾಭದ ಉದ್ದೇಶದೊಂದಿಗೆ ಹೋದವರನ್ನು ನಾವು ಮತ್ತೆ ಮತ್ತೆ ನೆನಪಿಸಬಾರದು. ನಾವು ಮಾಡಬೇಕಾದ ಕಾರ್ಯಗಳತ್ತ ಗಮನ ಹರಿಸಿ, ಸಂಘಟನೆ ಬಲಗೊಳಿಸಬೇಕೆಂದು ಶಾಸಕ ಶಿವರಾಮ ಹೆಬ್ಬಾರ್ ಅವರ ಹೆಸರು ಹೇಳದೇ ಟಾಂಗ್ ನೀಡಿದರು.
ಸಂತ ಗುರು ರವಿದಾಸರ ಜಯಂತಿ ಕುರಿತು ಮಾವಿನಮನೆ ಗ್ರಾಪಂ ಸದಸ್ಯ ದೀಪಕ ಭಟ್ಟ, ವಿಬಿ-ಜಿ ರಾಮ-ಜಿ ಯೋಜನೆಯ ಸಂಚಾಲಕ ಗಣೇಶ ಹೆಗಡೆ ಮಾತನಾಡಿದರು.