ತೈಲಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ । ಕಿವಿಯಲ್ಲಿ ಹೂ, ಎತ್ತಿನಬಂಡಿಯಲ್ಲಿ ಬೈಕ್ ಇಟ್ಟು ಮೆರವಣಿಗೆ, ಆಕ್ರೋಶಕನ್ನಡಪ್ರಭ ವಾರ್ತೆ ಕೊಪ್ಪಳ
ಬಿಜೆಪಿ ನಾಯಕರು ಎತ್ತಿನ ಬಂಡಿಯಲ್ಲಿ ಬೈಕ್ ಇಟ್ಟುಕೊಂಡು ಮೆರವಣಿಗೆ ಮಾಡುತ್ತಾ ಬಸವೇಶ್ವರ ವೃತ್ತಕ್ಕೆ ಆಗಮಿಸಿದರು. ತೈಲ ಬೆಲೆ ಏರಿಕೆಯಿಂದ ವಾಹನಗಳನ್ನು ಬಳಕೆ ಮಾಡುವುದು ಕಷ್ಟ ಸಾಧ್ಯವಾಗುತ್ತದೆ. ಹೀಗಾಗಿ, ಈ ಮೊದಲಿನಂತೆ ಎತ್ತಿನಬಂಡಿ ಬಳಕೆ ಮಾಡಬೇಕು ಎಂದು ವ್ಯಂಗ್ಯ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ನಾಯಕರು ಪ್ರತಿಭಟನೆ ಪ್ರಾರಂಭಿಸಿದ್ದರಿಂದ ಸಂಚಾರಕ್ಕೂ ಸಮಸ್ಯೆಯಾಗಿ, ವಾಹನಗಳ ದಟ್ಟಸಾಲು ನಿಂತಿತು. ಇದು ಸಂಚಾರಕ್ಕೆ ಸಮಸ್ಯೆಯಾಗಿದ್ದರಿಂದ ಅಲ್ಲಿಯೇ ಇದ್ದ ಪೊಲೀಸರು ವಾಹನಗಳಿಗೆ ನಿಧಾನಕ್ಕೆ ದಾರಿ ಮಾಡಿ, ಪಕ್ಕದಲ್ಲಿಯೇ ಕಳುಹಿಸಿದರು.ಇದರ ಮಧ್ಯೆ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿ, ತೈಲ ಬೆಲೆ ಏರಿಕೆಯನ್ನು ವಿರೋಧಿಸಿದರು.
ಪ್ರತಿಭಟನಾಕಾರರು ಕಿವಿಯಲ್ಲಿ ಹೂ ಇಟ್ಟುಕೊಂಡು ಬಂದಿದ್ದರು. ರಾಜ್ಯ ಸರ್ಕಾರ ಜನರ ಕಿವಿಯಲ್ಲಿ ಹೂ ಇಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿದರು.
ಇತಿಹಾಸದಲ್ಲಿಯೇ ರಾಜ್ಯ ಸರ್ಕಾರ ತೈಲ ಕರ ಹಾಕಿದ ಉದಾಹರಣೆ ಇಲ್ಲ. ಈಗಾಗಲೇ ಇರುವ ಕರವೇ ಹೆಚ್ಚಳವಾಗಿದ್ದು, ಇದನ್ನು ಪ್ರತ್ಯೇಕವಾಗಿ ರಾಜ್ಯ ಸರ್ಕಾರ ಹೆಚ್ಚಳ ಮಾಡುವುದು ಸರಿಯಲ್ಲ. ಕೂಡಲೇ ತೈಲಬೆಲೆ ಹೆಚ್ಚಳವನ್ನು ಕೈಬಿಟ್ಟು, ಮೊದಲಿನ ದರದಲ್ಲಿಯೇ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ವಿರೋಧಪಕ್ಷದ ಮುಖ್ಯಸಚೇತಕ ದೊಡ್ಡನಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು.