ಕನ್ನಡಪ್ರಭ ವಾರ್ತೆ ಬೀದರ್
ಜಾನುವಾರುಗಳ ಬಗ್ಗೆ ಮಾಹಿತಿಯೇ ಇಲ್ಲದ ಸಚಿವರಿಗೆ ಪಶು ಸಂಗೋಪನಾ ಖಾತೆ ನೀಡಿದ್ದರಿಂದ ಇಲ್ಲಿಯವರೆಗೆ ಯಾವುದೇ ಪಶು ಆಸ್ಪತ್ರೆಗೆ ಭೇಟಿಯಾಗಲಿ ಅಥವಾ ಅಧಿಕಾರಿಗಳ ಸಭೆಯಾಗಲಿ ಮಾಡಿಲ್ಲ. ಹೀಗಾಗಿ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ ಅವರ ಖಾತೆ ಕೂಡಲೇ ಬದಲಾಯಿಸಬೇಕೆಂದು ಮಾಜಿ ಸಚಿವ ಹಾಗೂ ಶಾಸಕ ಪ್ರಭು ಚವ್ಹಾಣ್ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಎಸ್ವೈ ಹಾಗೂ ಬೊಮ್ಮಾಯಿಯವರ ಅವಧಿಯ ಸರ್ಕಾರದಲ್ಲಿ ಗೋಮಾತಾ ರಕ್ಷೆಗಾಗಿ ಅನೇಕ ಯೋಜನೆಗಳನ್ನು ತಂದಿದ್ದೇವೆ. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೂಕ ಪ್ರಾಣಿಗಳಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಇತಿಹಾಸದಲ್ಲಿಯೇ ಗೋಹತ್ಯೆ ಕಾನೂನು ಜಾರಿ ಮಾಡಿದ್ದೇನೆ. ಆದರೆ ಈಗ ಗೋವನ್ನು ಹಗಲಲ್ಲೆ ಕಡಿಯಲಾಗುತ್ತಿದೆ. ರೈತ ಪರ, ಜಾನುವಾರ ಪರ ಇದ್ದೇನೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ಅಂತಹ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ನನ್ನ ಅವಧಿಯಲ್ಲಿ ಪ್ರತಿ ಜಿಲ್ಲೆಗೊಂದು ಗೋಶಾಲೆ ಹೀಗೆ ರಾಜ್ಯದಲ್ಲಿ ಒಟ್ಟು 100 ಗೋಶಾಲೆ ಆರಂಭಿಸಿ ಅದಕ್ಕೆ ತಲಾ 1 ಕೋಟಿ ರು. ಅನುದಾನ ನೀಡಿದ್ದೆ, 51 ಗೋಶಾಲೆಗಳಿಗೆ ಗೋಮಾಳ ಜಾಗ ನೀಡಿದ್ದೇನೆ ಎಂದ ಅವರು, ಸಹಾಯವಾಣಿ ಕೇಂದ್ರ ತೆರೆದಿದ್ದೆ. ಆದರೆ ಸದ್ಯ ಇರುವ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ ಇಲ್ಲಿಯವರೆಗೆ ಅಧಿಕಾರಿಗಳ ಸಭೆ ಕೂಡ ಮಾಡಿಲ್ಲ. ಈ ಸರ್ಕಾರಕ್ಕೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದರು.
ನನ್ನ ಅವಧಿಯಲ್ಲಿ ಪ್ರಾಣಿ ಕಲ್ಯಾಣ, ಪುಣ್ಯಕೋಟಿ ದತ್ತು ಯೋಜನೆ, 1962 ಆ್ಯಂಬುಲೆನ್ಸ್ ಹೀಗೆ ಅನೇಕ ಯೋಜನೆಗಳನ್ನು ತಂದಿದ್ದೆ. ಅವುಗಳನ್ನು ಸಂಪೂರ್ಣವಾಗಿ ಸ್ಥಗಿತವಾಗಿವೆ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಜನರಿಗೆ ಮೋಸ ಮಾಡಿದರು. ಇರಲಿ ಮೂಕ ಪ್ರಾಣಿಗಳಿಗೂ ಕೂಡ ಈ ಸರ್ಕಾರ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.
ಕಳೆದ 7-8 ತಿಂಗಳಿನಲ್ಲಿ ಈ ಸರ್ಕಾರದಲ್ಲಿ ಗೋ ಹತ್ಯೆ ಸರಾಗವಾಗಿ ನಡೆಯುತ್ತಿದೆ. ನಾವು ಹಾಕಿದ್ದ ಚೆಕ್‌ಪೋಸ್ಟ್‌ಗಳನ್ನು ತೆಗೆದು ಹಾಕಿದ್ದಾರೆ. ಮುಖ್ಯಮಂತ್ರಿಗೆ ಕಾಳಜಿ ಇದ್ದರೆ ಕೂಡಲೇ ಗೋಶಾಲೆಗಳತ್ತ ಗಮನಹರಿಸಬೇಕು. ಸಂಜೀವಿನಿ ಜಾನುವಾರುಗಳ ಆ್ಯಂಬುಲೆನ್ಸ್ ಆರಂಭಿಸಬೇಕು. ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡಬೇಕು. ಕಸಾಯಿ ಖಾನೆಗಳನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಮುಖ್ಯಮಂತ್ರಿಗೆ ಮನವಿ ಸಲ್ಲಿಸುತ್ತೇನೆ ಸರ್ಕಾರ ಎಚ್ಚರಗೊಳ್ಳದೆ ಇದ್ದಲ್ಲಿ ಬಿಜೆಪಿ ರಾಜ್ಯದ ಮುಖಂಡರೊಂದಿಗೆ ಚರ್ಚಿಸಿ ಕಾರ್ಯಕರ್ತರು ಹಾಗೂ ವಿಎಚ್‌ಪಿ ಮುಖಂಡರು ಹಾಗೂ ಜಾನುವಾರುಗಳೊಂದಿಗೆ ಪ್ರತಿಭಟನೆಗೆ ಇಳಿಯುತ್ತೇವೆ. ಅಲ್ಲದೇ ಈ ಕುರಿತು ಬರುವ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ವಿಜಯಕುಮಾರ ಪಾಟೀಲ್ ಗಾದಗಿ, ವಸಂತ ಬಿರಾದಾರ ಹಾಗೂ ಅಶೋಕ ಹೋಕ್ರಾಣೆ ಇದ್ದರು.