ಜನರ ಜೇಬಿಗೆ ಕತ್ತರಿ ಹಾಕುತ್ತಿರುವ ರಾಜ್ಯ ಸರ್ಕಾರ

KannadaprabhaNewsNetwork | Published : Jun 21, 2024 1:04 AM

ಸಾರಾಂಶ

ವಿವಿಧ ಯೋಜನೆಗಳನ್ನು ನೀಡುತ್ತೇವೆಂದು ಜನರನ್ನು ನಂಬಿಸಿ ಆ ಯೋಜನೆಗಳನ್ನು ನಡೆಸಲು ಈಗ ಜನರ ಜೇಬಿಗೆ ರಾಜ್ಯ ಸರ್ಕಾರ ಕತ್ತರಿ ಹಾಕುತ್ತಿದೆ ಎಂದು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ವಿವಿಧ ಯೋಜನೆಗಳನ್ನು ನೀಡುತ್ತೇವೆಂದು ಜನರನ್ನು ನಂಬಿಸಿ ಆ ಯೋಜನೆಗಳನ್ನು ನಡೆಸಲು ಈಗ ಜನರ ಜೇಬಿಗೆ ರಾಜ್ಯ ಸರ್ಕಾರ ಕತ್ತರಿ ಹಾಕುತ್ತಿದೆ ಎಂದು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಕಿಡಿಕಾರಿದರು.ಪೆಟ್ರೋಲ್ ಡೀಸೆಲ್‌ ದರ ಸೇರಿದಂತೆ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ರಾಜ್ಯ ಸರ್ಕಾರದ ವಿರುದ್ಧ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಳದಲ್ಲಿ ಗುರುವಾರ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದಿನಂಪ್ರತಿ ಬಳಕೆಯ ವಸ್ತುಗಳ ದರ ಹೆಚ್ಚಿಸಲಾಗಿದೆ, ತೈಲ ಬೆಲೆ ಏರಿಕೆ ಕಂಡಿದೆ. ವಿವಿಧ ವ್ಯವಹಾರ ವಹಿವಾಟುಗಳಿಗೆ ಬೇಕಾಗಿರುವ ಸ್ಟಾಂಪ್‌ಗಳ ಸೇರಿದಂತೆ ಎಲ್ಲದರಲ್ಲಿಯೂ ಬೆಲೆ ಏರಿಸುವ ಮೂಲಕ ಎಡಗೈಯಿಂದ ಕಿತ್ತು ಬಲಗೈಯಿಂದ ಜನರಿಗೆ ನೀಡುವ ತಂತ್ರ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ದೂರಿದರು.ಬರಗಾಲದಿಂದ ಬೆಂಡಾಗಿರುವ ರೈತಾಪಿ ವರ್ಗ ಸೇರಿದಂತೆ ಜನ ಸಾಮಾನ್ಯರ ಮೇಲೆ ಇದು ವಿಪರೀತ ಪರಿಣಾಮ ಬೀರುತ್ತದೆ. ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿಯಲ್ಲಿಯೂ ಸರ್ಕಾರ ಜನ ಸಾಮಾನ್ಯರ ಹಿತ ರಕ್ಷಣೆಗೆ ನಿಲ್ಲದೇ ಪಂಚ ಗ್ಯಾರಂಟಿಗಳನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಜನರ ಮೇಲೆಯೇ ಈ ಭಾರವನ್ನು ಹಾಕುವ ಮೂಲಕ ಜನಸಾಮಾನ್ಯರನ್ನು ತುಳಿಯುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಹಾಗೂ ರೈತರ ವಿರೋಧಿ ಸರ್ಕಾರವಾಗಿದೆ ಎಂದು ಕಿಡಿಕಾರಿದರು.ಮಂಡಲ ಅಧ್ಯಕ್ಷ ಡಾ.ಬಸವರಾಜ ಪರವಣ್ಣವರ ಮಾತನಾಡಿ, ಜನರು ಅಧಿಕಾರ ಕೊಟ್ಟಿದ್ದಾರೆಂಬ ಅಹಂನಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ವರ್ತನೆ ಮಾಡುತ್ತಿದೆ. ಇದಕ್ಕೆ ರಾಜ್ಯದ ಜನರು ಸಹ ಬೇಸತ್ತು ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದರೂ ಸಹ ರಾಜ್ಯ ಕಾಂಗ್ರೆಸ್ ಸರ್ಕಾರ ತಿದ್ದುಕೊಂಡಿಲ್ಲ. ರೈತಾಪಿ ವರ್ಗದ ಜನರು ಈಗ ಪ್ರತಿಶತ 80 ರಷ್ಟು ಯಂತ್ರೋಪಕರಣಗಳಿಂದ ಒಕ್ಕಲುತನ ಮಾಡುತ್ತಿದ್ದಾರೆ. ಬರಗಾಲದ ಸಂದರ್ಭದಲ್ಲಿಯೂ ಈ ರೀತಿಯಾಗಿ ಬೆಲೆ ಏರಿಸುವ ಮೂಲಕ ರೈತರ ಹಾಗೂ ಜನಸಾಮಾನ್ಯರಿಗೆ ಹೊರೆ ಹೆರುತ್ತಿದೆ. ಈ ಕೂಡಲೇ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಏರಿಕೆ ಮಾಡಿದ ಎಲ್ಲ ಬೆಲೆಗಳನ್ನು ಹಿಂಪಡೆದು ಜನಮಾನ್ಯರ ಹಿತ ಕಾಪಾಡಬೇಕು. ಇಲ್ಲವಾದಲ್ಲಿ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.ಉದ್ಯಮಿಯಾದ ಲಕ್ಷ್ಮೀ ಇನಾಂದಾರ ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿದರು.ನಂತರ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ದ್ವಿಚಕ್ರ ವಾಹನಕ್ಕೆ ಹಗ್ಗ ಕಟ್ಟಿ ಎಳೆಯುವ ಮೂಲಕ ಬೆಲೆ ಏರಿಕೆಯ ವಿರುದ್ಧ ಅಣಕು ಪ್ರದರ್ಶನ ನಡೆಸಿ ಇಲ್ಲಿಯ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಮುಖಂಡರಾದ ಉಳವಪ್ಪ ಉಳ್ಳೆಗಡ್ಡಿ, ಅಪ್ಪಣ್ಣ ಪಾಗಾದ, ದಿನೇಶ ವಳಸಂಗ, ಸುಭಾಷ ರಾವಳ, ಬಸವರಾಜ ಮಾತನವರ, ಸಕ್ಕರಗೌಡ ಪಾಟೀಲ, ಸರಸ್ವತಿ ಹೈಬತ್ತಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

Share this article