ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ-ಕಾರಜೋಳ

KannadaprabhaNewsNetwork | Published : Nov 17, 2023 6:45 PM

ಸಾರಾಂಶ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಶಾಸಕರ ಕ್ಷೇತ್ರಕ್ಕೆ ಒಂದು ರುಪಾಯಿ ಅನುದಾನ ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ಶಾಸಕರೇ ಬಂಡಾಯ ಎದ್ದಿದ್ದಾರೆ. ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಶಾಸಕರು ನೀಡಿದ ಭರವಸೆ ಈಡೇರಿಸಲು ಆಗುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಶಾಸಕರ ಕ್ಷೇತ್ರಕ್ಕೆ ಒಂದು ರುಪಾಯಿ ಅನುದಾನ ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ಶಾಸಕರೇ ಬಂಡಾಯ ಎದ್ದಿದ್ದಾರೆ. ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಶಾಸಕರು ನೀಡಿದ ಭರವಸೆ ಈಡೇರಿಸಲು ಆಗುತ್ತಿಲ್ಲ ಎಂದು ದೂರಿದರು.

ಶಾಸಕರ ಅಸಮಾಧಾನ: 40ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರು ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ನಾವು ಶಿಫಾರಸು ಮಾಡಿದ ಅಧಿಕಾರಿಗಳನ್ನು ನೇಮಕ ಮಾಡದೇ ಮಂತ್ರಿಗಳೇ ಲಂಚ ಪಡೆದು ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇಂತಹ ಆರೋಪ ಕಳೆದ 70 ವರ್ಷಗಳಲ್ಲಿ ಯಾವುದೇ ಸರ್ಕಾರದ ಮೇಲೆ ಬಂದಿರಲಿಲ್ಲ. ಆದರೆ, ಈಗ ಸಿದ್ದರಾಮಯ್ಯ ಸರ್ಕಾರದ ಮೇಲೆ ಬಂದಿದೆ ಎಂದರು.

ಪುತ್ರನ ಆಡಳಿತ: ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ವಿಧಾನಸೌಧದ ಹೊರಗೆ ಸರ್ಕಾರ ನಡೆಸುತ್ತಿದ್ದಾರೆ. ಈ ವರೆಗೂ ಯಾವುದೇ ಮುಖ್ಯಮಂತ್ರಿಗಳು ತಮ್ಮ ಪುತ್ರನಿಗೆ ಅಧಿಕಾರ ನೋಡಿಕೊಳ್ಳಲು ಹೇಳಿರುವ ಉದಾಹರಣೆಗಳು ಇಲ್ಲ. ಆದರೆ, ಸಿದ್ದರಾಮಯ್ಯ ಅವರೇ ನನ್ನ ಕ್ಷೇತ್ರವನ್ನು ನನ್ನ ಮಗನಿಗೆ ನೋಡಿಕೊಳ್ಳಲು ಹೇಳಿದ್ದೇನೆ ಎಂದಿದ್ದಾರೆ. ಇಂತಹ ಆಡಳಿತ ಮಾಡಬಾರದು. ಇದು ದುರಾಳಿತದ ಪರಮಾವಧಿ ಎಂದು ಕಿಡಿಕಾರಿದರು.

ಸರ್ಕಾರ ನಡೆಸುವಲ್ಲಿ ವಿಫಲ: ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಐದು ಗ್ಯಾರಂಟಿ ಜಾರಿಗೊಳಿಸುವುದಾಗಿ ಹೇಳಿದ್ದರು. ಆದರೆ, ಈ ವರೆಗೂ ಯಾವ ಗ್ಯಾರಂಟಿಯೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಗ್ಯಾರಂಟಿ ಯೋಜನೆಗಾಗಿ ಅಭಿವೃದ್ಧಿ ಕಾರ್ಯ ನಿಲ್ಲಿಸುವುದು ಸರಿಯಲ್ಲ ಎಂದರು.

ನೈತಿಕತೆ ಇಲ್ಲ: ಸಿದ್ದರಾಮಯ್ಯ ಅವರಿಗೆ ಯಾವ ನೈತಿಕತೆಯೂ ಉಳಿದಿಲ್ಲ. ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿಯೇ ಭ್ರಷ್ಟಾಚಾರದ ಆರೋಪ ಕೇಳಿಬಂದವು. ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿದರು. ಬಿಜೆಪಿ 40 ಪರ್ಸೆಂಟ್‌ ಸರ್ಕಾರ ಎಂದು ಎಲ್ಲೆಡೆ ಹೇಳಿಕೊಂಡು ತಿರುಗಾಡಿದರು. ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಇಷ್ಟು ದಿನ ಕಳೆದರೂ ಅದನ್ನು ಸಾಬೀತುಪಡಿಸಲು ಆಗಲಿಲ್ಲ. ಇಂತಹ ಸುಳ್ಳು ಆರೋಪಗಳಿಗೆ ಜನತೆ ಮೋಸ ಹೋದರು. ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ನಡೆದ ಕಾಮಗಾರಿಗಳನ್ನು ಬಂದ್‌ ಮಾಡಿ ಲಂಚ ಕೇಳುವ ಕಾರ್ಯ ನಡೆಯುತ್ತಿದೆ. ಇದಕ್ಕಿಂತಲೂ ಕೆಟ್ಟ ಭ್ರಷ್ಟಾಚಾರವನ್ನು ನಾವು ನೋಡಿಲ್ಲ ಎಂದರು.

ಸಿದ್ದರಾಮಯ್ಯ ಅವರು ನಿಮ್ಮ ಆಡಳಿತವನ್ನು ವಿಧಾನಸೌಧದಿಂದ ಮಾಡಿ. ಹಾದಿಬೀದಿಯಲ್ಲಿ, ಬಯಲಲ್ಲಿ ಕುಳಿತು ಸಂತೆಯಂತೆ ಅಧಿಕಾರ ನಡೆಸುತ್ತಿದ್ದು, ಇದನ್ನು ಮೊದಲು ನಿಲ್ಲಿಸಿ. ಇನ್ನು ಮುಂದಾದರೂ ನೀವು ಕಾನೂನಾತ್ಮಕ, ಪಾರದರ್ಶಕವಾದ ಆಡಳಿ ನಡೆಸಿ ಎಂದು ಎಚ್ಚರಿಸಿದರು ಕಾರಜೋಳ.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಪಕ್ಷಾಂತರದಿಂದ ಎಫೆಕ್ಟ್ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜಗದೀಶ ಶೆಟ್ಟರ ಅವರು ಹುಟ್ಟಿದ್ದು ಸಂಘದ ಮನೆಯಲ್ಲಿ, ಮುಖ್ಯಮಂತ್ರಿ, ವಿಪಕ್ಷ ನಾಯಕರಾಗಿ ಬೆಳೆದಿದ್ದು ಬಿಜೆಪಿ ಮನೆಯಲ್ಲಿ. ಆದರೆ, ಕಾಂಗ್ರೆಸ್ಸಿಗೆ ಹೋಗಿ ಅವರು ಏನ ಆದ್ರು? ಎಂಬುದನ್ನು ಅವರೇ ಅರಿತುಕೊಳ್ಳಲಿ ಎಂದರು.

Share this article