ಮುನ್ನೆಚ್ಚರಿಕೆ ವಹಿಸದ ರಾಜ್ಯ ಸರ್ಕಾರವೇ ಹೊಣೆ: ಸಚಿವ ಜೋಶಿ

KannadaprabhaNewsNetwork |  
Published : Jun 05, 2025, 01:00 AM IST
ಪ್ರಹ್ಲಾದ ಜೋಶಿ | Kannada Prabha

ಸಾರಾಂಶ

ಇಷ್ಟೊಂದು ತುರಾತುರಿಯಲ್ಲಿ ಸಂಭ್ರಮಾಚರಣೆ ಮಾಡುವ ಅಗತ್ಯವೇನಿತ್ತು. ಇಡೀ ದೇಶವೇ ನಿನ್ನೆ ರಾತ್ರಿ ಸಂಭ್ರಮಾಚರಣೆ ಮಾಡಿದ್ದಾರೆ. ರಾಜ್ಯ ಸರ್ಕಾರವು ಸರಿಯಾದ ರೂಪುರೇಷೆ ಹಾಗೂ ತಯಾರಿ ಮಾಡಿಕೊಳ್ಳದೇ ಇರುವುದು ಇಂತಹ ದುರಂತಕ್ಕೆ ಕಾರಣವಾಗಿದೆ. ತುರ್ತು ಸೇವೆ ನಿಯೋಜಿಸದೆ ಇರುವುದು ಅತ್ಯಂತ ಬೇಜವಾಬ್ದಾರಿ. ಈ ಕೆಟ್ಟ ಘಟನೆಯನ್ನು ತಪ್ಪಿಸಬಹುದಿತ್ತು. ಆದರೆ, ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಮತ್ತು ಹೊಣೆಗಾರಿಕೆಯನ್ನು ಸರ್ಕಾರವೇ ತಗೆದುಕೊಳ್ಳಬೇಕಿದೆ.

ಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿರುವುದು ಹಾಗೂ ಸುಮಾರು 30ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವುದು ನಿಜಕ್ಕೂ ದುರಂತದ ವಿಷಯ. ಮುನ್ನೆಚ್ಚರಿಕೆ ಸೂಕ್ತ ವ್ಯವಸ್ಥೆ, ಯೋಜ‌ನೆ ಮತ್ತು ಜನಸಂದಣಿಯ ನಿರ್ವಹಣೆ ಮಾಡದ ಪರಿಣಾಮ ಇಂತಹ ಹೃದಯವಿದ್ರಾವಕ ಘಟನೆ ನಡೆದಿದೆ. ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಇಷ್ಟೊಂದು ತುರಾತುರಿಯಲ್ಲಿ ಸಂಭ್ರಮಾಚರಣೆ ಮಾಡುವ ಅಗತ್ಯವೇನಿತ್ತು. ಇಡೀ ದೇಶವೇ ನಿನ್ನೆ ರಾತ್ರಿ ಸಂಭ್ರಮಾಚರಣೆ ಮಾಡಿದ್ದಾರೆ. ರಾಜ್ಯ ಸರ್ಕಾರವು ಸರಿಯಾದ ರೂಪುರೇಷೆ ಹಾಗೂ ತಯಾರಿ ಮಾಡಿಕೊಳ್ಳದೇ ಇರುವುದು ಇಂತಹ ದುರಂತಕ್ಕೆ ಕಾರಣವಾಗಿದೆ. ತುರ್ತು ಸೇವೆ ನಿಯೋಜಿಸದೆ ಇರುವುದು ಅತ್ಯಂತ ಬೇಜವಾಬ್ದಾರಿ. ಈ ಕೆಟ್ಟ ಘಟನೆಯನ್ನು ತಪ್ಪಿಸಬಹುದಿತ್ತು. ಆದರೆ, ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಮತ್ತು ಹೊಣೆಗಾರಿಕೆಯನ್ನು ಸರ್ಕಾರವೇ ತಗೆದುಕೊಳ್ಳಬೇಕಿದೆ ಎಂದಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಗಾಯಗೊಂಡವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಜೋಶಿ ಹೇಳಿದ್ದಾರೆ.

ಸಾವಿಗೆ ಸರ್ಕಾರದ ಬೇಜವಾಬ್ದಾರಿ ಕಾರಣ: ಟೆಂಗಿನಕಾಯಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹತ್ತಿರ ನಡೆದ ಕಾಲ್ತುಳಿತದಲ್ಲಿ ಸುಮಾರು 11 ಜನ ಅಭಿಮಾನಿಗಳು ಮೃತಪಟ್ಟಿದ್ದು, ಇದಕ್ಕೆಲ್ಲ ಸರ್ಕಾರದ ಬೇಜವಾಬ್ದಾರಿ ಕಾರಣ ಎಂದು ಶಾಸಕ ಮಹೇಶ ಟೆಂಗಿನಕಾಯಿ ಕಿಡಿಕಾರಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು ಸೇರಿದ ವೇಳೆ ಕಾಲ್ತುಳಿತದಿಂದ ಭಕ್ತರು ಮೃತಪಟ್ಟಿದ್ದರು. ಆಗ ಇದೇ ಕಾಂಗ್ರೆಸ್ ಕುಂಭಮೇಳದ ಆಯೋಜನೆ ಕುರಿತು ಪ್ರಶ್ನೆ ಎತ್ತಿತ್ತು. ಈಗ ರಾಜ್ಯ ಸರ್ಕಾರ ಸೂಕ್ತ ಬಂದೋಬಸ್ತ್ ಮಾಡದೆ ಸಂಭ್ರಮಾಚರಣೆ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಯಾವುದೇ ಮುಂದಾಲೋಚನೆ ಇಲ್ಲದೆ ಇಂತಹ ಕಾರ್ಯಕ್ರಮ ಕೈಗೆತ್ತಿಕೊಂಡು ಅನುಮತಿ ನೀಡಿದ್ದು ದೊಡ್ಡ ತಪ್ಪು. ಕ್ರಿಕೆಟ್ ಅಭಿಮಾನಿಗಳ ಸಾವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಹೊರಬೇಕು. ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಗಾಯಗೊಂಡವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ