ಶೇಷಮೂರ್ತಿ ಅವಧಾನಿ
ಕಲಬುರಗಿ : ಕಲಬುರಗಿ ಜಿಲ್ಲೆಯ ಆಳಂದದ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಅಂಗಳದಲ್ಲಿ ತಲೆ ಎತ್ತಿರುವ ರಾಜ್ಯದ ಮೊದಲ ಬ್ರೈಲ್ ಗ್ರಂಥಾಲಯ ಹಾಗೂ ಸಂಪನ್ಮೂಲ ಕೇಂದ್ರವು ಅಂಧ ವಿದ್ಯಾರ್ಥಿಗಳ ಓದಿಗೆ, ಮತ್ತವರ ಸಂಶೋಧನೆಗೆ ಊರುಗೋಲಾಗಿದೆ.
ದೇಶದ ಯಾವುದೇ ಭಾಷೆಯಲ್ಲಿರುವ ಸಂಶೋಧನೆ ಲೇಖನ, ಸಾಹಿತ್ಯ, ಪುಸ್ತಕಗಳನ್ನು ಬ್ರೈಲ್ ಲಿಪಿಗೆ ಪರಿವರ್ತಿಸಬಲ್ಲ ಸಾಮರ್ಥ್ಯವಿರುವ ಅತ್ಯಾಧುನಿಕ ಬ್ರೈಲ್ ಗ್ರಂಥಾಲಯವು ಅಂಧರ ಪಾಲಿಗೆ ಜ್ಞಾನದ ಮೂಲವಾಗಿದೆ. ಸಿಯುಕೆಯಲ್ಲಿ ಪ್ರವೇಶ ಪಡೆದು ಪದವಿ, ಸ್ನಾತಕ ಪದವಿ ಮಾಡುವವರಾಗಲಿ, ಅಂಧ ವಿದ್ಯಾರ್ಥಿಗಳು ತಮಗೆ ಅಗತ್ಯವಿರುವ ಪುಸ್ತಕ, ಲೇಖನ, ಸಂಶೋಧನೆಯ ಪಿಡಿಎಫ್ ಪ್ರತಿಗಳನ್ನು ಇಲ್ಲಿಗೆ ತಂದು ಕೊಟ್ಟರೆ ಸಾಕು, ಅದನ್ನು ಕ್ಷಣಾರ್ಧದಲ್ಲಿ ಬ್ರೈಲ್ ಭಾಷೆಗೆ ಪರಿವರ್ತಿಸುವ ಯಂತ್ರದ ವ್ಯವಸ್ಥೆ ಇಲ್ಲಿದೆ.
ಇಂತಹ ಸವಲತ್ತು ರಾಜ್ಯದಲ್ಲಿರುವ ಯಾವ ವಿವಿಗಳಲ್ಲಿಯೂ ಇಲ್ಲ. ಹೀಗಾಗಿ ಅಂಧರ ಬದುಕಿನ ಬೆಳಕಾಗಿರುವ ಬ್ರೈಲ್ ಲಿಪಿ ಗ್ರಂಥಾಲಯ ಹೊಂದಿರುವ ರಾಜ್ಯದ ಮೊಟ್ಟಮೊದಲ ವಿವಿಯಾಗಿ ಸಿಯುಕೆ ಹೊರ ಹೊಮ್ಮಿದೆ.
ಸಿಯುಕೆ ಬ್ರೈಲ್ ಗ್ರಂಥಾಲಯ ವ್ಯಾಪ್ತಿಯನ್ನ ವಿಸ್ತರಿಸುವಲ್ಲಿ ಯೋಜನೆ ರೂಪಿಸಿದೆ. ಕೈಬೆರಳಿಗೆ ಉಂಗುರದಂತ ಸಾಧನ, ಕಿವಿಗೆ ಇಯರ್ ಫೋನ್ ಹಾಕಿಕೊಂಡೋ ತಮಗೆ ಬೇಕಾಗುವ ಪಾಠ ಆಲಿಸಲು ಬ್ರೈಲ್ ಲಿಪಿ ಟ್ಯಾಬ್ ಅಗತ್ಯವಿದೆ. ಈ ಉಪಕರಣಗಳ ಖರೀದಿಗೆ ₹35 ಲಕ್ಷ ಅನುದಾನ ಕೋರಿ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರಿಗೆ ವಿವಿ ಪ್ರಸ್ತಾವನೆ ಸಲ್ಲಿಸಿದೆ. ಇದರಡಿ ಖರೀದಿಸುವ ಬ್ರೈಲ್ ಟ್ಯಾಬ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಅವರ ಕೋರ್ಸ್ ಮುಗಿದ ನಂತರ ಅದನ್ನೇ ಮರಳಿ ಪಡೆದು ಬೇರೆಯವರಿಗೆ ನೀಡಲಾಗುತ್ತದೆ. ಸ್ಥಳೀಯ ಅಂಧರ ಶಾಲೆಯ ಮಕ್ಕಳಿಗೂ ಇಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಡಾ.ಪರಶುರಾಮ ಕಟ್ಟಿಮನಿ ಹೇಳಿದ್ದಾರೆ.
ಅಂಧ ವಿದ್ಯಾರ್ಥಿಗಳ ಸಂಶೋಧನೆ ಹಾಗೂ ಅಧ್ಯಯನಕ್ಕೆ ಪೂರಕವಾದಂತಹ ವಾತಾವರಣ ಸಿಯುಕೆಯಲ್ಲಿ ನಿರ್ಮಿಸುವ ಸಂಕಲ್ಪದೊಂದಿಗೆ ನಾವು ಮುಂದಡಿ ಇಡುತ್ತಿದ್ದೇವೆ. ಹೀಗಾಗಿ ಅಂಧರಿಗೆ ಅಗತ್ಯವಿರುವ ಪುಸ್ತಕ, ಲೇಕನಗಳನ್ನು ಬ್ರೈಲ್‌ಗೆ ಪರಿವರ್ತಿಸಿ ಕೊಡುವ ವ್ಯವಸ್ಥೆ ಇದೆ. ಇದು ಸಂಪೂರ್ಣ ಉಚಿತ. ಅಂಧರಿಂದ ಈ ಸೇವೆಗೆ ಯಾವುದೇ ಶುಲ್ಕ ವಿವಿ ಪಡೆಯೋದಿಲ್ಲ. ವಿವಿ ಹೊರತುಪಡಿಸಿ ರಾಜ್ಯದ ಯಾವುದೇ ಭಾಗದಿಂದಲೂ ಅಂಧರು ತಮಗೆ ಅಗತ್ಯವಿರುವ ಪುಸ್ತಕಗಳನ್ನು ಇಲ್ಲಿಗೆ ಕಳುಹಿಸಿ ಬ್ರೈಲ್‌ಗೆ ಪರಿವರ್ತಿಸಿಕೊಳ್ಳಬಹುದು.
-ಪ್ರೊ.ಬಟ್ಟು ಸತ್ಯನಾರಾಯಣ, ಕುಲಪತಿ, ಸಿಯುಕೆ