ಕನ್ನಡದ ಕಟ್ಟಾಳು ರಾಜಶೇಖರ ಅಂಗಡಿ ಇನ್ನಿಲ್ಲ

KannadaprabhaNewsNetwork |  
Published : Mar 24, 2024, 01:32 AM ISTUpdated : Mar 24, 2024, 01:33 AM IST
23ಕೆಪಿಎಲ್22:ರಾಜಶೇಖರ ಅಂಗಡಿ | Kannada Prabha

ಸಾರಾಂಶ

ಕನ್ನಡ ನುಡಿ, ಸಂಸ್ಕೃತಿಯ ಹರಿಕಾರ ಎನ್ನುವಷ್ಟರಮಟ್ಟಿಗೆ ಕನ್ನಡಕ್ಕಾಗಿ ದುಡಿದ ಕನ್ನಡದ ಕಟ್ಟಾಳು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ (52) ಶನಿವಾರ ಬೆಳಗಿನ ಜಾವ ನಿಧನರಾಗಿದ್ದಾರೆ.

- ಕನ್ನಡಕ್ಕಾಗಿಯೇ ಜೀವನ ಮುಡಿಪಿಟ್ಟಿದ್ದ ಕಸಾಪ ಮಾಜಿ ಜಿಲ್ಲಾಧ್ಯಕ್ಷ ನಿಧನ

- ಕನ್ನಡ ಹೋರಾಟಕ್ಕೆ ಭದ್ರ ಅಡಿಪಾಯ ಹಾಕಿದ್ದ, ಸಾಹಿತ್ಯ ಸಮ್ಮೇಳನಕ್ಕಾಗಿ ದುಡಿದ ಜೀವಕನ್ನಡಪ್ರಭ ವಾರ್ತೆ ಕೊಪ್ಪಳ

ಕನ್ನಡ ನುಡಿ, ಸಂಸ್ಕೃತಿಯ ಹರಿಕಾರ ಎನ್ನುವಷ್ಟರಮಟ್ಟಿಗೆ ಕನ್ನಡಕ್ಕಾಗಿ ದುಡಿದ ಕನ್ನಡದ ಕಟ್ಟಾಳು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ (52) ಶನಿವಾರ ಬೆಳಗಿನ ಜಾವ ನಿಧನರಾಗಿದ್ದಾರೆ.

ಮೃತರಿಗೆ ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಶನಿವಾರ ಹಲಿಗೇರಿ ಗ್ರಾಮದಲ್ಲಿ ಕನ್ನಡ ಮನಸುಗಳು ಸೇರಿದಂತೆ ಅಪಾರ ಜನಸ್ತೋಮದ ಮಧ್ಯೆ ಜರುಗಿತು. ಸಾಹಿತಿಗಳು, ಹೋರಾಟಗಾರರು, ರಾಜಕೀಯ ನಾಯಕರು ಸೇರಿದಂತೆ ಎಲ್ಲರೂ ಸಹ ಕಂಬನಿ ಮಿಡಿದರು.

ವಿದ್ಯಾರ್ಥಿ ದೆಸೆಯಿಂದಲೇ ಕನ್ನಡ ಕನ್ನಡ ಎನ್ನುತ್ತಿದ್ದ ರಾಜಶೇಖರ ಅಂಗಡಿ, ಸಾಹಿತಿಯಾಗದಿದ್ದರೂ ಕನ್ನಡ ಸಾಹಿತ್ಯ, ಸಂಸ್ಕೃತಿ, ಕನ್ನಡ ಭಾಷೆ, ಕನ್ನಡ ನಾಡು, ಕನ್ನಡಿಗರಿಗಾಗಿಯೇ ಬದುಕಿದರು.

ವಿದ್ಯಾರ್ಥಿಯಾಗಿದ್ದಾಗಲೇ ನಾಟಕದಲ್ಲಿ ಅಭಿನಯ ಮಾಡುವ ಮೂಲಕ ಅಪ್ಪಟ ಕನ್ನಡ ಪ್ರೇಮಿಯಾಗಿ ಬೆಳೆದ ರಾಜಶೇಖರ, ನಂತರ ಕನ್ನಡ ಹೋರಾಟಗಾರರಾಗಿ ರೂಪಗೊಂಡು, ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವ ಮೂಲಕ ಕನ್ನಡವನ್ನೇ ತನ್ನ ಜೀವಾಳ ಮಾಡಿಕೊಂಡರು. ಜೀವಿತ ಅವಧಿಯುದ್ದಕ್ಕೂ ಕನ್ನಡಕ್ಕಾಗಿಯೇ ಹೋರಾಟ, ಕನ್ನಡಕ್ಕಾಗಿಯೇ ಬದುಕು ಎನ್ನುವಂತೆಯೇ ಜೀವಿಸಿದ ಹಿರಿಮೆ ಅವರದ್ದು.

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸೋತಾಗ ತಿರುಳ್ಗನ್ನಡ ಕ್ರಿಯಾ ಸಮಿತಿ ಸ್ಥಾಪಿಸುವ ಮೂಲಕ ಕನ್ನಡದ ಕೈಂಕರ್ಯ ಪ್ರಾರಂಭಿಸಿದರು.

ಕೊಪ್ಪಳ ತಾಲೂಕು ಕಸಾಪ ಅಧ್ಯಕ್ಷರಾಗಿ 2 ಅವಧಿಗೆ ಕಾರ್ಯನಿರ್ವಹಣೆ, ಕೊಪ್ಪಳ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ, 2016ರ ಫೆ. 29ರಂದು ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಅತ್ಯಧಿಕ ಮತಗಳ ಅಂತರದಿಂದ ಚುನಾಯಿತರಾದರು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಇಲ್ಲದಿರುವ ಕಾಲದಲ್ಲಿಯೇ ದೇಣಿಗೆ ಸಂಗ್ರಹ ಮಾಡುವ ಮೂಲಕ ಕನ್ನಡ ನಾಡೇ ಕೊಪ್ಪಳದತ್ತ ನೋಡುವಂತೆ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಂಗಡಿ -ಮುಂಗಟ್ಟು, ಬ್ಯಾಂಕುಗಳ ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಬಳಕೆ, ತ್ರಿಭಾಷಾ ಸೂತ್ರ ಅಳವಡಿಕೆ ಹೋರಾಟ, ಡಾ. ಸರೋಜಿನಿ ಮಹಿಷಿ ವರದಿ ಅನುಷ್ಠಾನ, ಕೊಪ್ಪಳ ಸುತ್ತಮುತ್ತಲಿನ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಒತ್ತಾಯಿಸಿ‌ ನಡೆದ ಹೋರಾಟದಲ್ಲಿ ಸಕ್ರಿಯರಾಗಿದ್ದರು.

ಹೈದರಾಬಾದ್ ಕರ್ನಾಟಕ 371 (ಜೆ) ಸಂವಿಧಾನ ತಿದ್ದುಪಡಿಗೆ ಆಗ್ರಹಿಸಿ ನಡೆದ ಹೋರಾಟದಲ್ಲಿಯೂ ರಾಜಶೇಖರ ಅಂಗಡಿ ಅವರ ಕೊಡುಗೆ ಬಹುದೊಡ್ಡದು. ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ಪ್ರಾರಂಭಕ್ಕೆ ವಿರೋಧಿಸಿ ಅರೆಬೆತ್ತಲೆ ಹೋರಾಟ ಮಾಡುವ ಮೂಲಕ ಗಮನ ಸೆಳೆದಿದ್ದರು.

ಕೊಪ್ಪಳ ಜಿಲ್ಲಾ ಹಾಗೂ ತಾಲೂಕು ಸಮ್ಮೇಳನಗಳ ಯಶಸ್ವಿಗೊಳಿಸುವುದರಲ್ಲಿ ಎತ್ತಿದ ಕೈ ಇವರದ್ದು.

2011ರಲ್ಲಿ ಗಂಗಾವತಿಯಲ್ಲಿ ಜರುಗಿದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆ ಮಾಡಿದ ಹಿರಿಮೆ ಇವರಿಗಿದೆ.

ರಂಗಸೇತು ಸಂಘಟನೆ ಮೂಲಕ ಕೊಪ್ಪಳದಲ್ಲಿ ನೀನಾಸಂ ಹಾಗೂ ಶಿವಸಂಚಾರ ಮತ್ತಿತರ ಹೊಸ ಅಲೆಯ ನಾಟಕಗಳ ಪ್ರದರ್ಶನ ಆಯೋಜನೆ ಮಾಡುವ ಮೂಲಕ ಕೊಪ್ಪಳದಲ್ಲಿ ಗುಣಮಟ್ಟದ ನಾಟಕಗಳ ಅಭಿರುಚಿ ಬೆಳೆಸಿದರು.

ಕೊಪ್ಪಳ ಸ್ವಾತಂತ್ರ್ಯ ಸಮರ ನಾಟಕದಲ್ಲಿ ಸುರಪುರದ ವೆಂಟಪ್ಪನಾಯಕ, ಬಿ.ಸಿ. ಪಾಟೀಲ ವಿರಚಿತ ಕಾಯಕಯೋಗಿ ನಾಟಕದಲ್ಲಿ ಅಕ್ಕಮಹಾದೇವಿ ಪಾತ್ರದಲ್ಲಿ ಮನೋಜ್ಞ ಅಭಿನಯ ಮಾಡುವ ಮೂಲಕ ಕಲಾವಿದರಾಗಿಯೂ ಹೆಸರು ಮಾಡಿದ್ದಾರೆ.

PREV

Recommended Stories

ಬೆಂಗಳೂರು : ಗಣೇಶ ವಿಸರ್ಜನೆ ಹಿನ್ನೆಲೆ ಮದ್ಯ ಮಾರಾಟ ನಿಷೇಧ - ಎಲ್ಲೆಲ್ಲಿ?, ಯಾವಾಗ?
ಸತ್ಯ ಹೇಳಿದರೆ ಕೆಲವರು ಸಹಿಸುವುದಿಲ್ಲ : ಡಿಕೆಶಿ