ಕಾರಟಗಿ: ನೆತ್ತಿ ಸುಡುವ ಬೀರು ಬಿಸಿಲಿನ ತಾಪಕ್ಕೆ ತತ್ತರಿಸಿದ ತಾಲೂಕಿನ ಜನತೆಗೆ ಭಾನುವಾರ ಸಂಜೆಯ ವರುಣನ ಆರ್ಭಟಕ್ಕೆ ಪಟ್ಟಣದ ೭ನೇ ವಾರ್ಡ್‌ನ ಮಹದೇಶ್ವರ ದೇವಸ್ಥಾನದ ಪುಷ್ಕರಣಿ ಬಳಿಯ ವಿದ್ಯುತ ಕಂಬ ಹಾಗೂ ಬೃಹತ್ ಮರದ ಕೊಂಬೆ, ೬ನೇ ವಾರ್ಡ್‌ನ ಅರಳಿ ಓಣಿಯಲ್ಲಿ ಮರವೊಂದು ನೆಲಕ್ಕುರುಳಿದೆ.
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗಾಳಿ-ಮಳೆಯ ಆರ್ಭಟಕ್ಕೆ ಮರದ ಕೊಂಬೆ ಬಿದ್ದಿದ್ದು, ಮನೆಯ ಮೇಲ್ಚಾವಣಿಯ ತಗಡು ಹಾರಿರುವ ಸಣ್ಣ ಪುಟ್ಟ ಘಟನೆಗಳು ಸಂಭವಿಸಿದೆ.
ಕಳೆದ ಕೆಲ ದಿನಗಳಿಂದ ಬಿಸಿಲಿನ ತಾಪಕ್ಕೆ ಹೆದರಿದ ಮಹಿಳೆಯರು, ಮಕ್ಕಳು, ವೃದ್ಧರು ಮನೆಯಿಂದ ಹೊರ ಹೋಗದಂತಾಗಿತ್ತು. ಹೀಗಾಗಿ ಜನರಲ್ಲಿ ಬೇಸಿಗೆ ಬಿಸಿಲಿನ ಶಾಖ ತಾಳಲಾಗದೆ ನಲುಗಿ ಹೋಗಿದ್ದರು.ಬಸವ ಜಯಂತಿ ಮನ್ನಾ ದಿನವಾದ ಭಾನುವಾರ ಪಟ್ಟಣದಲ್ಲಿ ವಿವಿಧ ಅಂಗಡಿ ಮುಂಗಟ್ಟು, ಬೀದಿ ಬದಿ ಗೂಡಂಗಡಿ, ಹೂವುಹಣ್ಣು ದಿನಸಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಬೆಳಗ್ಗೆಯಿಂದ ಜೋರಾಗಿಯೇ ನಡೆದಿತ್ತು. ಸಂಜೆ ಗುಡುಗು ಗಾಳಿಯ ಅರ್ಭಟದೊಂದಿಗೆ ಅರ್ಧಗಂಟೆ ಸುರಿದ ಮಳೆಯಿಂದ ವ್ಯಾಪಾರ ವಹಿವಾಟು ಕೆಲಕಾಲ ಸ್ತಬ್ಧಗೊಂಡವು. ಗಾಳಿಯ ರಭಸಕ್ಕೆ ರಸ್ತೆಗಳಲ್ಲಿ ಧೂಳು ಮುಚ್ಚಿಕೊಂಡಿತ್ತು. ರಸ್ತೆಗಳಲ್ಲಿ ವಾಹನಗಳ ಭರಾಟೆ ಮಾತ್ರ ಕಡಿಮೆಯಾಗಿರಲಿಲ್ಲ. ಅಲ್ಲದೆ ಬೇಸಿಗೆಯ ಬಿಸಿಲಿನ ಪ್ರಖರತೆಯ ಕುರಿತು ಹವಾಮಾನ ಇಲಾಖೆ ಹಾಗೂ ವೈದ್ಯರು ನೀಡುವ ಸಲಹೆ ಸೂಚನೆಗಳು ಕೂಡ ಸಾರ್ವಜನಿಕರಲ್ಲಿ ಜಾಗೃತಿ ಮೂಡಿರುವದರಿಂದ ಬೆಳಗ್ಗೆ ೧೧ಗಂಟೆಯಿಂದ ಸಂಜೆಯಾಗುವವರೆಗೂ ಮನೆಯಿಂದ ಯಾರು ಹೊರಹೊಗುತ್ತಿಲ್ಲ.ಹೀಗಾಗಿ ಮಧ್ಯಾಹ್ನದ ಸಮಯದಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದವು
ಜೆಸ್ಕಾಂ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ ಭಾನುವಾರ ಸಂಜೆ ಸುರಿದ ಗಾಳಿಮಿಶ್ರೀತ ಮಳೆಯಿಂದ ತಾಲೂಕಿನ ವಿವಿಧೆಡೆ ೮ಕ್ಕೂ ಹೆಚ್ಚು ವಿದ್ಯುತ್ ಕಂಬ ಬಿದ್ದ ವರದಿಯಾಗಿವೆ. ಇನ್ನು ಕೆಲವಡೆ ವಿದ್ಯುತ್ ಕಂಬಗಳು ಬಾಗಿವೆ. ಎಲ್ಲೂ ಯಾವುದೇ ಜೀವ, ಆಸ್ತಿಹಾನಿಯಾಗಿಲ್ಲ. ಅಲ್ಲದೆ ವಿದ್ಯುತ್ ಕಂಬ ನೆಲಕ್ಕುರುಳಿದ ಕುರಿತು ಪೂರ್ಣ ಮಾಹಿತಿ ಪಡೆದ ಬಳಿಕ ಹೊಸ ವಿದ್ಯುತ್ ಕಂಬ ಅಳವಡಿಕೆ ಹಾಗೂ ವಿದ್ಯುತ್ ತಂತಿ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.