ವಿದ್ಯಾರ್ಥಿ ಸಮೂಹಕ್ಕೆ ದೇಶದ ಪಥ ಬದಲಾಯಿಸುವ ಶಕ್ತಿಯಿದೆ

KannadaprabhaNewsNetwork | Published : Nov 24, 2023 1:30 AM

ಸಾರಾಂಶ

ವಿದ್ಯಾರ್ಥಿ ಸಮೂಹಕ್ಕೆ ದೇಶದ ಪಥವನ್ನು ಬದಲಾಯಿಸುವ ಶಕ್ತಿಯಿದ್ದು, ಶೈಕ್ಷಣಿಕ ವರ್ಷದ ಪ್ರಮುಖ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ವಿದ್ಯಾರ್ಥಿಗಳು ಯಶಸ್ಸಿನ ದಾರಿಯನ್ನು ಸರಳವಾಗಿಸಿಕೊಳ್ಳಿ ಎಂದು ಪುರಸಭೆ ಸದಸ್ಯ ರಾಜು ಸಾಂಗ್ಲಿಕರ ಹೇಳಿದರು.ಪಟ್ಟಣದ ಮೌಲಾನಾ ಆಜಾದ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ನಡೆದ ''ಕನ್ನಡಪ್ರಭ'' ಪತ್ರಿಕೆಯ ಯುವ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ರಾಜು ಸಾಂಗ್ಲಿಕರ

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ವಿದ್ಯಾರ್ಥಿ ಸಮೂಹಕ್ಕೆ ದೇಶದ ಪಥವನ್ನು ಬದಲಾಯಿಸುವ ಶಕ್ತಿಯಿದ್ದು, ಶೈಕ್ಷಣಿಕ ವರ್ಷದ ಪ್ರಮುಖ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ವಿದ್ಯಾರ್ಥಿಗಳು ಯಶಸ್ಸಿನ ದಾರಿಯನ್ನು ಸರಳವಾಗಿಸಿಕೊಳ್ಳಿ ಎಂದು ಪುರಸಭೆ ಸದಸ್ಯ ರಾಜು ಸಾಂಗ್ಲಿಕರ ಹೇಳಿದರು.ಪಟ್ಟಣದ ಮೌಲಾನಾ ಆಜಾದ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ನಡೆದ ''''ಕನ್ನಡಪ್ರಭ'''' ಪತ್ರಿಕೆಯ ಯುವ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರೀಕ್ಷೆಗಳು ಹತ್ತಿರವಾದಾಗ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆ ಒತ್ತಡದಿಂದ ಪಾರಾಗಲು ಕ್ರಮಬದ್ಧ ಅಧ್ಯಯನ ಪರಿಹಾರವಾಗಿದೆ. ಆರ್ಥಿಕವಾಗಿ ಹಿಂದುಳಿದ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವನ್ನು ಮತ್ತಷ್ಟು ಬಲಿಷ್ಠಗೊಳಿಸಲು ''''ಕನ್ನಡಪ್ರಭ'''' ಯುವ ಆವೃತ್ತಿಯು ಸಹಾಯಕ ಎಂದ ಅವರು, ಫಲಿತಾಂಶದಲ್ಲಿ ಉತ್ತಮ ಸಾಧನೆಗೈಯುವ ಮೊದಲು ಮೂರು ವಿದ್ಯಾರ್ಥಿಗಳಿಗೆ ೩ ಸಾವಿರ, ೨ ಸಾವಿರ ಹಾಗೂ ೧ ಸಾವಿರ ನಗದನ್ನು ನೀಡುವ ಭರವಸೆ ನೀಡಿದರು.

ವಿಸ್ತಾರಣಾಧಿಕಾರಿ ಶರಣಪ್ಪ ಗರೇಬಾಳ ಮಾತನಾಡಿ, ವಿದ್ಯಾರ್ಥಿಗಳಿಗೆ ಕ್ರೀಡೆ, ವಿಜ್ಞಾನ, ಸಾಮಾನ್ಯ ಜ್ಞಾನ ಜತೆಗೆ ಎಸ್‌ಎಸ್‌ಎಲ್‌ಸಿ ಪಠ್ಯದ ಮಾಹಿತಿಯನ್ನು ಒಳಗೊಂಡಿರುವ ಯುವ ಆವೃತ್ತಿ ಸಂಗ್ರಹ ಯೋಗ್ಯವಾಗಿದೆ. ಹೀಗಾಗಿ ಕಣಜವುಳ್ಳ ಪತ್ರಿಕೆಯನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡಲು ಮುಂದಾಗಬೇಕು ಎಂದರು.

ಶಿಕ್ಷಕ ಷಣ್ಮುಖ ಕರಮುಡಿ ಮಾತನಾಡಿ, ನಮ್ಮ ಅಕ್ಕಪಕ್ಕದವರಿಗೆ ಸಹಾಯ ಮಾಡಲು ಮೀನಮೇಷ ಮಾಡುವ ದಿನಮಾನದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಸುಧಾರಣೆಗಾಗಿ ಪತ್ರಿಕೆಯನ್ನು ಪೂರೈಸುತ್ತಿರುವುದು ಅನುಕರಣೀಯ. ಹೀಗಾಗಿ ವಿದ್ಯಾರ್ಥಿಗಳು ಯುವ ಆವೃತ್ತಿ ಸದ್ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದರೆ ಇಂತಹ ಸಾಮಾಜಿಕ ಕಾರ್ಯಗಳಿಗೆ ಅರ್ಥ ಬರಲಿದೆ ಎಂದರು.

ಶಾಲಾ ವಿದ್ಯಾರ್ಥಿಗಳಾದ ಸುಮಯ್ಯ ಖಾಜಿ, ಐಶ್ವರ್ಯ ಶಾವಿ, ಸಹನಾ ಹೆಬ್ಬುಲಿ, ಶಿಫಾನೌಸೀನ್ ನಿಶಾನದಾರ, ಆತೀಫಾ ಕಿಲ್ಲೆದಾರ, ಸಹನಾ ಗಾಣಿಗೇರ ''''ಕನ್ನಡಪ್ರಭ'''' ಯುವ ಆವೃತ್ತಿಯಿಂದ ಆಗುತ್ತಿರುವ ಲಾಭದ ಬಗ್ಗೆ ಅನಿಸಿಕೆಗಳನ್ನು ತಿಳಿಸಿದರು.

ಈ ವೇಳೆ ಶಿಕ್ಷಣಪ್ರೇಮಿ ಅರಿಹಂತ ಬಾಗಮಾರ, ಪುರಸಭೆ ಸದಸ್ಯ ರಾಜು ಸಾಂಗ್ಲಿಕರ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕರಾದ ಹೀನಾಕೌಸರ ಮಕಾನದಾರ, ವೀಣಾ ಬಿಸರಳ್ಳಿ, ಮಂಜುನಾಥ ಧನೋಜ, ಸಹ ಶಿಕ್ಷಕರಾದ ನಾಜ್ಮೀನ ಹಣಗಿ, ತಿಮ್ಮಣ್ಣ ಕೋಸಗಿ ಸೇರಿ ಇತರರು ಇದ್ದರು.

Share this article