ಚಿಕ್ಕಮಗಳೂರುರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ವಿನೂತನವಾಗಿ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಅರಿವು ಕೇಂದ್ರಗಳಲ್ಲಿ (ಗ್ರಂಥಾಲಯಗಳಲ್ಲಿ) 47 ದಿನಗಳ ಹಮ್ಮಿಕೊಂಡಿದ್ದ ‘ಬೇಸಿಗೆ ಬೆಸುಗೆ’ ಕಾರ್ಯ ಕ್ರಮಕ್ಕೆ ಬುಧವಾರ ಅದ್ಧೂರಿ ತೆರೆ ಬಿದ್ದಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ವಿನೂತನವಾಗಿ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಅರಿವು ಕೇಂದ್ರಗಳಲ್ಲಿ (ಗ್ರಂಥಾಲಯಗಳಲ್ಲಿ) 47 ದಿನಗಳ ಹಮ್ಮಿಕೊಂಡಿದ್ದ ‘ಬೇಸಿಗೆ ಬೆಸುಗೆ’ ಕಾರ್ಯ ಕ್ರಮಕ್ಕೆ ಬುಧವಾರ ಅದ್ಧೂರಿ ತೆರೆ ಬಿದ್ದಿದೆ.
ಬೇಸಿಗೆ ರಜೆ ಅವಧಿಯಲ್ಲಿ ಕಳೆದ ಏ.10 ರಿಂದ ಗ್ರಾಮೀಣ ಭಾಗದ ಶಾಲಾ ಮಕ್ಕಳಲ್ಲಿ ಸೃಜನಶೀಲತೆ, ಕೌಶಲ್ಯ ಹಾಗೂ ಜ್ಞಾನವನ್ನು ವೃದ್ಧಿಸುವ ಉದ್ದೇಶದಿಂದ ಹಾಗೂ ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಅಭಿಯಾನ ಮಕ್ಕಳಿಂದ ಮತ್ತು ಪೋಷಕರಿಂದ ಅಭೂತ ಪೂರ್ವ ಬೆಂಬಲ ಪಡೆಯಿತು.ಸೃಜನಶೀಲ ಚಟುವಟಿಕೆಗಳ ಸದ್ಬಳಕೆ
ಒಂದೂವರೆ ತಿಂಗಳ ಕಾಲ ನಡೆದ ಈ ಶಿಬಿರದಲ್ಲಿ ಮಕ್ಕಳಿಗೆ ಕೇವಲ ಪುಸ್ತಕದ ಜ್ಞಾನವಷ್ಟೇ ಅಲ್ಲದೆ, ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಹತ್ತು ಹಲವು ವಿನೂತನ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಕಲೆ ಮತ್ತು ಸೃಜನಶೀಲತೆ: ರಂಗೋಲಿ, ಮೆಹಂದಿ, ಚಿತ್ರಕಲೆ, ಗ್ರೀಟಿಂಗ್ ಕಾರ್ಡ್ ತಯಾರಿಕೆ, ಡೂಡಲ್ ಚಿತ್ರ ಬಿಡಿಸುವುದು, ಕಸದಿಂದ ರಸ ಹಾಗೂ ಪೇಪರ್ ಕ್ರಾಫ್ಟ್ ಮೂಲಕ ಮಕ್ಕಳ ಕಲ್ಪನಾ ಲೋಕಕ್ಕೆ ವೇದಿಕೆ ಕಲ್ಪಿಸಲಾಯಿತು.ಆರೋಗ್ಯ ಮತ್ತು ದೈಹಿಕ ವಿಕಸನ
ಪ್ರತಿದಿನ ಯೋಗ ಹಾಗೂ ವಿವಿಧ ದೇಶಿ ಮತ್ತು ಸಾಂಪ್ರದಾಯಿಕ ಕ್ರೀಡೆಗಳ ಮೂಲಕ ಮಕ್ಕಳಲ್ಲಿ ದೈಹಿಕ ಸದೃಢತೆ ಮತ್ತು ಕ್ರೀಡಾ ಮನೋಭಾವ ಬೆಳೆಸಲಾಯಿತು ಹಾಗೂ ಬೇಸಿಗೆ ಬೆಸುಗೆ ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ಮಾಡಿಸಲಾಯಿತು.ಸಂಸ್ಕಾರ ಮತ್ತು ರಂಗಭೂಮಿ
ಏಕ ಪಾತ್ರಾಭಿನಯ, ಬೊಂಬೆಯಾಟ, ಕಿರು ನಾಟಕಗಳ ಮೂಲಕ ಮಕ್ಕಳ ಅಭಿನಯ ಕೌಶಲ್ಯ ಹಾಗೂ ನೈತಿಕ ಮೌಲ್ಯಗಳನ್ನು ಜಾಗೃತಗೊಳಿಸಲಾಯಿತು. ಸ್ಥಳೀಯ ಜಾನಪದ ಕಲೆಗಳಾದ ಹಸೆ ಬರೆಯುವುದು, ಅಂಟಿಗೆ ಪಿಂಟಿಗೆ, ವೀರಗಾಸೆ, ರಾಗಿ ಬೀಸುವುದು ಇನ್ನೂ ಮುಂತಾದ ಹಲವಾರು ಅಂಶಗಳ ಕುರಿತು ಅರಿವು ಮೂಡಿಸಲಾಯಿತು.ಪರಿಸರ ಕಾಳಜಿ
ಪ್ರಕೃತಿ ಮಹತ್ವ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಿಂದಲೇ ಗಿಡ ನೆಡಿಸುವ ಮೂಲಕ ವಿಶೇಷ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಹಾಗೂ ಮಕ್ಕಳನ್ನು ಪರಿಸರ ಪಯಣ ಹಾಗೂ ಸ್ಥಳೀಯ ಪುರಾತನ ದೇವಾಲಯಗಳಿಗೂ ಕರೆದೊಯ್ಯಲಾಗಿತ್ತು.ಪ್ರಾಯೋಗಿಕ ಕಲಿಕೆ
ಮಕ್ಕಳಿಗೆ ತಮ್ಮ ಜ್ಞಾನ ಹೆಚ್ಚಿಸುವಂತಹ ಪೊಲೀಸ್ ಠಾಣೆ, ಅಗ್ನಿ ಶಾಮಕ ಠಾಣೆ, ನ್ಯಾಯಾಲಯ ಇನ್ನೂ ಮುಂತಾದ ಸ್ಥಳ ಗಳಿಗೆ ಕರೆದೊಯ್ಯುವ ಮೂಲಕ ಮತ್ತು ಸ್ಥಳೀಯ ಪ್ರಗತಿಪರ ವಿವಿಧ ಕೃಷಿಕರಿಂದ ಕೃಷಿ ಪದ್ಧತಿ, ಜೇನುಕೃಷಿ ನೇರ ಮಾಹಿತಿ ನೀಡಿ ನೈಜ ಕಲಿಕೆಯ ಅನುಭವ ನೀಡಲಾಯಿತು. ಗ್ರಾಮೀಣ ಮಕ್ಕಳ ಭವಿಷ್ಯಕ್ಕೆ ಪೂರಕವಾಗುವಂತೆ ಕ್ಯಾನನ್ ಕ್ಯಾಮರಾ ಕಂಪನಿಯಿಂದ ಮಕ್ಕಳಿಗೆ ಫೋಟೋಗ್ರಫಿ ಕುರಿತು ತರಬೇತಿ ನೀಡಲಾಗಿದೆ. ಸ್ಕಿಲ್ ಈಸಿ ಅಕಾಡೆಮಿಯಿಂದ ಮಕ್ಕಳಿಗೆ ಮ್ಯೂಸಿಕ್ ತರಬೇತಿ ಹಾಗೂ ಅಧ್ಯಯನ್ ಫೌಂಡೇಶನ್ ನಿಂದ ಮಕ್ಕಳ ಜ್ಞಾನ ಮಟ್ಟ ಹೆಚ್ಚಿಸುವಂತಹ ವಿವಿಧ ತರಬೇತಿ ನೀಡಲಾಗಿದೆ.
----ಬಾಕ್ಸ್---
ಅಧಿಕಾರಿಗಳಿಗೆ ಜಿಪಂ ಸಿಇಒ ಅಭಿನಂದನೆಬೇಸಿಗೆ ಬೆಸುಗೆ ಕಾರ್ಯಕ್ರಮ ಅತ್ಯಂತ ಯಶಸ್ವಿ ಮತ್ತು ಸೃಜನಶೀಲವಾಗಿ ಅನುಷ್ಠಾನಗೊಳಿಸಿದ ಮೂವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಅರಿವು ಕೇಂದ್ರಗಳ ಗ್ರಂಥಪಾಲಕರಿಗೆ ಜಿಪಂನಿಂದ ವಿಶೇಷವಾಗಿ ಅಭಿನಂದಿಸಲಾಗುವುದು ಎಂದು ಜಿಪಂ ಸಿಇಒ ಎಚ್.ಎಸ್. ಕೀರ್ತನಾ ತಿಳಿಸಿದ್ದಾರೆ.
ಗ್ರಾಮೀಣ ಮಕ್ಕಳ ಭವಿಷ್ಯಕ್ಕೆ ಪೂರಕವಾದ ಇಂತಹ ವಿನೂತನ ಕಾರ್ಯಕ್ರಮ ಜಿಲ್ಲಾ ಪಂಚಾಯಿತಿಯಿಂದ ಮುಂದಿನ ದಿನ ಗಳಲ್ಲೂ ಸಕ್ರಿಯವಾಗಿ ಹಮ್ಮಿಕೊಳ್ಳಲಾಗುವುದು. ಗ್ರಾಮೀಣ ಭಾಗದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಬೇಸಿಗೆ ಬೆಸುಗೆ ಅತ್ಯುತ್ತಮ ವೇದಿಕೆ. ಈ ಮೂಲಕ ರಜೆ ದಿನಗಳಲ್ಲಿ ಮಕ್ಕಳ ಜ್ಞಾನ ಮತ್ತು ಕೌಶಲ್ಯಾಭಿವೃದ್ಧಿಗೆ ಶ್ರಮಿಸಿದ ಎಲ್ಲಾ ಅಧಿಕಾರಿಗಳು ಜಿ.ಪಂ.ನ ಶ್ಲಾಘನೆಗೆ ಪಾತ್ರರಾಗಿದ್ದಾರೆ ಎಂದು ಎಚ್.ಎಸ್.ಕೀರ್ತನಾ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.