ಕೆ.ಎಂ. ಮಂಜುನಾಥ್
ಮತದಾನದ ಮಹತ್ವ ಹಾಗೂ ನೈತಿಕ ಮತದಾನದ ಬಗ್ಗೆ ಜಿಲ್ಲಾ ಸ್ವೀಪ್ ಸಮಿತಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಲೇ ಇದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಸ್ವೀಪ್ ಸಮಿತಿ ಸಕ್ರಿಯವಾಗಿದ್ದು, ಸೈಕಲ್ ಜಾಥಾ, ಕಾಲೇಜು, ವಿವಿಗಳಲ್ಲಿ ಉಪನ್ಯಾಸ, ವಾರ್ಡ್‌ವಾರು ಜಾಗೃತಿ ಅಭಿಯಾನ, ಬೀದಿನಾಟಕ, ಉದ್ಯೋಗ ಖಾತ್ರಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಮತದಾನ ಮಹತ್ವ ಕುರಿತು ಮಾಹಿತಿ ನೀಡುವುದು, ತಪ್ಪದೇ ಮತದಾನ ಮಾಡುವಂತೆ ಕೋರಿ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪೋಷಕರಿಗೆ ಪತ್ರ ಬರೆಸುವುದು, ಹೀಗೆ ನಾನಾ ರೀತಿಯ ಮತದಾನದ ಜಾಗೃತಿ ಕಾರ್ಯದಲ್ಲಿ ನಿರತವಾಗಿದೆ.
ಈ ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಮಾತದಾನವಾಗಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸ್ವೀಪ್ ಸಮಿತಿ ಜಾಗೃತಿ ಕುರಿತಾಗಿ ನಾನಾ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಗತಗೊಳಿಸುತ್ತಿದೆ. ಇಷ್ಟಾಗಿಯೂ ಜಿಲ್ಲೆಯಲ್ಲಿ ಮತದಾನ ಶೇಕಡವಾರು ಪ್ರಮಾಣ ಏರಿಕೆಗೆ ಬರಗಾಲದ ವಲಸೆ, ಜಿಲ್ಲೆಯಲ್ಲಿರುವ ಪ್ರಖರ ಬಿಸಿಲು ಅಡ್ಡಿಯಾಗುವ ಸಾಧ್ಯತೆಯಿದೆ.ಬರಗಾಲದ ವಲಸೆಯೇ ದೊಡ್ಡ ಸಮಸ್ಯೆ: ಬರಗಾಲದಿಂದಾಗಿ ಜಿಲ್ಲೆಯ ಸಾವಿರಾರು ಜನರು ಬೆಂಗಳೂರು ಸೇರಿದಂತೆ ಮಹಾನಗರಗಳಿಗೆ ವಲಸೆ ಹೋಗಿದ್ದು, ಈ ವರ್ಷ ವಲಸೆ ಪ್ರಮಾಣ ದೊಡ್ಡಸಂಖ್ಯೆಯಲ್ಲಿದೆ. ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಾದರೆ, ಸ್ಪರ್ಧಿಸಿರುವ ಅಭ್ಯರ್ಥಿಗಳೇ ಮತದಾರರ ವಿಳಾಸ, ಮೊಬೈಲ್ ಸಂಖ್ಯೆಗಳನ್ನು ಪಡೆದು, ಊರಿಗೆ ಕರೆತರುವ ಕಾಳಜಿ ತೆಗೆದುಕೊಳ್ಳುತ್ತಾರೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ವಲಸೆ ಹೋದ ಕಾರ್ಮಿಕರನ್ನು ಕರೆತರುವ ಜವಾಬ್ದಾರಿ ಯಾರೂ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಸಹಜವಾಗಿ ಮತದಾನದ ಪ್ರಮಾಣ ಕುಸಿಯುತ್ತದೆ.
ಮತದಾನ ಪ್ರಮಾಣ ಏರಿಕೆಗೆ ಮಾಡಬೇಕಾದದ್ದೇನು?: ಸ್ವೀಪ್ ಸಮಿತಿಯಿಂದ ಮತದಾನ ಕುರಿತು ಜಾಗೃತಿಯ ಜತೆಗೆ ಮತಗಟ್ಟೆಗಳಲ್ಲಿನ ಕನಿಷ್ಠ ಸೌಕರ್ಯಗಳನ್ನು ನೀಡುವುದರಿಂದ ಮತದಾನ ಪ್ರಮಾಣ ಏರಿಕೆಗೆ ಹೆಚ್ಚು ಪೂರಕವಾಗುತ್ತದೆ.
ಈ ಬಾರಿ ಬಿಸಿಲು ತೀವ್ರವಾಗಿದೆ. ಜನರು ಹೊರಗಡೆ ಬರುವುದೇ ಕಷ್ಟವಾಗಿದೆ. ಹೀಗಾಗಿ ಸ್ವೀಪ್ ಸಮಿತಿ ಮತಕೇಂದ್ರಗಳಲ್ಲಿ ನೆರಳಿನ ವ್ಯವಸ್ಥೆ ಮತ್ತಿತರ ಸೌಕರ್ಯ ಕಲ್ಪಿಸಿಕೊಡುವಂತಾಗಬೇಕು ಎನ್ನುತ್ತಾರೆ ವಿದ್ಯಾನಗರ ನಿವಾಸಿ ಗೋವಿಂದರಾಜು.