ವಿವಿಧ ಸಂಘಟನೆ ಕರೆ ನೀಡಿದ್ದ ಟಿ.ನರಸೀಪುರ ಬಂದ್ ಭಾಗಶಃ ಯಶಸ್ವಿ

KannadaprabhaNewsNetwork | Published : Aug 20, 2024 12:54 AM

ಸಾರಾಂಶ

ಬಂದ್ ಹಿನ್ನೆಲೆ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟಗಳು ಮುಚ್ಚಿದ್ದವು. ಮೆಡಿಕಲ್ಸ್, ಹಾಲು ಮಾರಾಟ, ಹಣ್ಣು, ತರಕಾರಿ ಅಂಗಡಿ ತೆರೆದಿದ್ದು ಬಿಟ್ಟರೆ ಕೆಲವು ಹೊಟೇಲ್ ಗಳು ಬಾಗಿಲು ತೆರೆದಿದ್ದವು. ಪಟ್ಟಣದ ಎಲ್ಲ ಕಡೆ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ತಾವರ್ ಚಂದ್ ಗೆಹಲೋಟ್ ಅವರ ನಡೆಯನ್ನು ಕಾಂಗ್ರೆಸ್ ಮತ್ತು ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್ ಭಾಗಶಃ ಯಶಸ್ವಿಯಾಯಿತು.

ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ ಕೂಗಿ ಪ್ರತಿಭಟನೆ ಮೆರವಣಿಗೆ ಆರಂಭಿಸಿದರು.

ಈ ವೇಳೆ ರಾಜ್ಯಪಾಲರು ಹಾಗೂ ಕೇಂದ್ರ ಬಿಜೆಪಿ ಸರ್ಕಾರ, ಜೆಡಿಎಸ್ ವಿರುದ್ದ ಧಿಕ್ಕಾರದ ಕೂಗಿದರು. ಪ್ರತಿಭಟನಾ ಮೆರವಣಿಗೆ ಖಾಸಗಿ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ರಚಿಸಿ ರಾಜ್ಯಪಾಲರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಲಿಂಕ್ ರಸ್ತೆಯ ಮಾರ್ಗವಾಗಿ ಕೆಎಸ್.ಆರ್.ಟಿಸಿ ಬಸ್ ನಿಲ್ದಾಣದ ಬಳಿ ಸಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟಸಿದರು. ನಂತರ ತಾಲೂಕು ಆಡಳಿತ ಸೌಧಕ್ಕೆ ಬಂದು ತಹಸೀಲ್ದಾರ್ ಸುರೇಶಾಚಾರ್ ಅವರಿಗೆ ಮನವಿ ಸಲ್ಲಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪದವೀಧರ ವಿಭಾಗದ ಅಧ್ಯಕ್ಷ ಎಂ. ರಮೇಶ್, ಜಿಪಂ ಮಾಜಿ ಸದಸ್ಯೆ ಸುಧಾಮಹದೇವಯ್ಯ ಮಾತನಾಡಿದರು.

ಬಂದ್ ಗೆ ಎದುರಿದ ನೌಕರರು:

ಪ್ರತಿಭಟನಾಕಾರರು ತಾಲೂಕು ಕಚೇರಿ ಹಾಗೂ ತಾಪಂಗೆ ನುಗ್ಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ನೌಕರರ ಕಚೇರಿ ಕೊಠಡಿಗಳ ಬಾಗಿಲು ಮುಚ್ಚಿಸಿ 20 ನಿಮಿಷಗಳ ಕಾಲ ಅಧಿಕಾರಿಗಳನ್ನು ಹೊರಗಡೆ ನಿಲ್ಲಿಸಿದರು.

ತಾಪಂ ಇಒ ಸಿ. ಕೃಷ್ಣ ಮಾತನಾಡಿ, ನೌಕರರ ಸುರಕ್ಷತೆ ದೃಷ್ಟಿಯಿಂದ ಸ್ವಲ್ಪ ಸಮಯ ಹೊರ ನಿಂತು ಪ್ರತಿಭಟನೆ ಮುಗಿದ ನಂತರ ಎಂದಿನಂತೆ ಕರ್ತವ್ಯ ಮುಂದುವರೆಸಲಾಯಿತು ಎಂದು ಹೇಳಿದರು.

ಮುಚ್ಚಿದ ಅಂಗಡಿ ಮುಂಗಟ್ಟುಗಳು:

ಬಂದ್ ಹಿನ್ನೆಲೆ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟಗಳು ಮುಚ್ಚಿದ್ದವು. ಮೆಡಿಕಲ್ಸ್, ಹಾಲು ಮಾರಾಟ, ಹಣ್ಣು, ತರಕಾರಿ ಅಂಗಡಿ ತೆರೆದಿದ್ದು ಬಿಟ್ಟರೆ ಕೆಲವು ಹೊಟೇಲ್ ಗಳು ಬಾಗಿಲು ತೆರೆದಿದ್ದವು. ಪಟ್ಟಣದ ಎಲ್ಲ ಕಡೆ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಜಿಪಂ ಮಾಜಿ ಸದಸ್ಯ ಕೆ. ಮಹದೇವ್, ಬಿ. ಮರಯ್ಯ, ಬಸವಣ್ಣ. ಪ್ರಶಾಂತ್ ಬಾಬು, ನಾಗರಾಜು, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೆಗೌಡ, ತಾಪಂ ಮಾಜಿ ಅಧ್ಯಕ್ಷರಾದ ಹ್ಯಾಕನೂರು ಉಮೇಶ್, ಮಲ್ಲಿಕಾರ್ಜುನ ಸ್ವಾಮಿ, ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಮಲಿಂಗಯ್ಯ, ಪುರಸಭಾ ಸದಸ್ಯರಾದ ಪ್ರಕಾಶ್ , ಸೋಮಣ್ಣ, ಮಂಜು ಬಾದಾಮಿ, ಪ್ರಕಾಶ್, ಎಸ್. ಮದನ್ ರಾಜು, ಅಹಮದ್ ಸೈಯದ್, ಪಿಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಮೂರ್ತಿ, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕರಾದ ಅಮ್ಜದ್ ಖಾನ್, ಕುರುಬರ ಸಂಘದ ಅಧ್ಯಕ್ಷ ಮಹೇಶ್ ಇದ್ದರು.

Share this article