ತರೀಕೆರೆಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ-2025 ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಕುವೆಂಪು ಅವರು ತಮ್ಮ ಶ್ರೇಷ್ಠ ಸಾಹಿತ್ಯ ಕೃತಿಗಳಲ್ಲಿ ಮಲೆನಾಡನ್ನು ಅನಾವರಣಗೊಳಿಸಿದರೆ ನಮ್ಮ ಸಾಹಿತಿ ರೆಹಮತ್ ತರೀಕೆರೆ ಅವರ ಬದುಕನ್ನು ತರೀಕೆರೆ ಪರಿಸರ ರೂಪಿಸಿದೆ ಎಂದು ಸಾಹಿತಿ, ಪುರಸಭೆ ಸದಸ್ಯ ಟಿ.ದಾದಾಪೀರ್ ಅಭಿಪ್ರಾಯ ಪಟ್ಟರು.
ತರೀಕೆರೆ ತಾಲೂಕು ಕಸಾಪದಿಂದ ಪಟ್ಟಣದ ಗಾಳಿಹಳ್ಳಿ ಕ್ರಾಸ್ ಮನಸುಳಿ ಮೋಹನ್ ಕುಮಾರ್ ಅವರ ಮನೆಯಂಗಳದಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮ-2025 ಕಾರ್ಯಕ್ರಮದಲ್ಲಿ ರೆಹಮತ್ ತರೀಕೆರೆ ಸಾಹಿತ್ಯದಲ್ಲಿ ತರೀಕೆರೆ ಪರಿಸರ ವಿಷಯ ಕುರಿತು ಉಪನ್ಯಾಸ ನೀಡಿದರು.ಇತ್ತೀಚೆಗೆ ನಡೆದ ದೇವನಹಳ್ಳಿ ಭೂಸ್ವಾಧೀನ ಹೋರಾಟದಲ್ಲಿ ರೆಹಮತ್ ತರೀಕೆರೆ ಭಾಗವಹಿಸುವ ಮೂಲಕ ಸಾಹಿತಿಗೆ ಇರುವ ಜವಾಬ್ದಾರಿಯನ್ನು ನೆನಪಿಸಿದ್ದಾರೆ. ರೆಹಮತ್ ತರೀಕೆರೆ ಅವರು ಹೋರಾಟಗಾರರು, ವಿಮರ್ಶಕರು, ಸಂಶೋಧ ಕರು ಮತ್ತು ಪ್ರವಾಸ ಕಥನವನ್ನು ಬರೆದಿದ್ದಾರೆ. ಅವರು ತಮ್ಮ ಕೃತಿ, ಕಾರ್ಯದಲ್ಲಿ ಹಂತ ಹಂತವಾಗಿ ತರೀಕೆರೆಯನ್ನು ನೆನಪಿಸಿದ್ದಾರೆ. ತರೀಕೆರೆ ಗಣಪತಿ ಪೆಂಡಾಲ್ ಬಗ್ಗೆ ತಮ್ಮ ಕೃತಿಯಲ್ಲಿ ಪ್ರಸ್ತಾಪಿಸಿ ಗಣಪತಿ ಪೆಂಡಾಲ್ ಒಂದು ಜೀವಂತ ರಂಗಭೂಮಿ ಆಗಿದ್ದ ಬಗೆ ಬಾಲ್ಯದಲ್ಲಿ ಅಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸಿ ಸ್ವತಃ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ ಎಂದರು.ಗೌರಿ ಲಂಕೇಶ್ ಹತ್ಯೆ ಖಂಡಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸರ್ಕಾರಕ್ಕೆ ವಾಪಸ್ಸು ನೀಡಿದ ಅವರು ಹಂಪೆ ಕನ್ನಡ ವಿವಿಗೆ ಸೇರಿದ ಭೂಮಿಯನ್ನು ಸರ್ಕಾರ ಸ್ವಾಧೀನಕ್ಕೆ ಪ್ರಯತ್ನಿಸಿದಾಗ ಅಲ್ಲಿನ ಉಪನ್ಯಾಸಕರಾಗಿದ್ದ ರೆಹಮತ್ ತರೀಕೆರೆ ಪ್ರತಿಭಟಿಸಿದ್ದರು. ಅದೇ ರೀತಿ ತರೀಕೆರೆ ಪಟ್ಟಣದ ಸಂತೆ ರೈತರು, ಗ್ರಾಹಕರು ಮತ್ತು ಮಾರಾಟಗಾರರು ಮಧ್ಯ ಸಂವಹನಕ್ಕೆ ಅವರ ಕೃತಿ ಕಾರಣವಾಗಿ ರೈತರ ಪರಿಸ್ಥಿತಿ ತಿಳಿಯಲು ಸಹಾಯಕವಾಗಿತ್ತು. ಪಟ್ಟಣದ ಕೋಡಿಕ್ಯಾಂಪ್ ಮಿನಿ ಭಾರತವಾಗಿದ್ದು, ಜಾತ್ಯಾತೀತ ದೇಶದ ಕಲ್ಪನೆ ಮೂಡಿಸುತ್ತದೆ ಎಂದು ತಮ್ಮ ಬರಹದಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದರು.
ತರೀಕೆರೆ ಜೀವನ ಶೈಲಿ, ಪರಂಪರೆಯನ್ನು ಅವರು ತಮ್ಮ ಲೇಖನದಲ್ಲಿ ಕಾಣಿಸಿದ್ದಾರೆ. ರೆಹಮತ್ ತರೀಕೆರೆ ಗೋಕಾಕ್ ಚಳುವಳಿಯಲ್ಲೂ ಭಾಗವಹಿಸಿದ್ದರು. ತಾಲೂಕು ಕಸಾಪ ಶ್ರಾವಣ ಸಾಹಿತ್ಯ ಸಂಭ್ರಮ ಜನರನ್ನು ವಿಚಾರವಂತರನ್ನಾಗಿ ಮಾಡುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.ಸಮಾಜ ಸೇವಕ ಟಿ.ಜಿ.ಮಂಜುನಾಥ್ ಮಾತನಾಡಿ ಶ್ರಾವಣ ಸಾಹಿತ್ಯ ಸಂಭ್ರಮ ಸಂತೋಷದ ಕಾರ್ಯಕ್ರಮ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ ಎಂದರು.ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಆರ್.ಅನಂತಪ್ಪ ಮಾತನಾಡಿ ಒಳ್ಳೆ ಕೆಲಸವನ್ನು ಯಾರು ಮಾಡಿದರು ಅದು ದೊಡ್ಡದು. ಲೇಖಕ ಮನಸುಳಿ ಮೋಹನ್ ಕುಮಾರ್ ಅವರು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದುಹೇಳಿದರು.ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಮಾತನಾಡಿ ಸಾಕಷ್ಟು ಕೆಲಸ ಮಾಡಿದ ಮಹನೀಯರನ್ನು ನೆನಪಿಸಿ ಕೊಳ್ಳಬೇಕು. ಸಾಹಿತಿಗಳಾದ ರೆಹಮತ್ ತರೀಕೆರೆ, ರಾಜಪ್ಪ ದಳವಾಯಿ ಇಬ್ಬರು ಒಡನಾಡಿಗಳು ಓದುವ ಮತ್ತು ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ನಮ್ಮ ನೆಲದ ಹಲವು ವಿದ್ಯಮಾನಗಳನ್ನು ಕುರಿತು ಬರೆದಿದ್ದಾರೆ ಎಂದು ವಿವರಿಸಿದರು.ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ಸಾಹಿತಿ ರೆಹಮತ್ ತರೀಕೆರೆ ಸರಳ, ಶ್ರೇಷ್ಠ ಗುಣಗಳನ್ನು ಹೊಂದಿದ್ದಾರೆ, ಅಧ್ಯಯನ ಶೀಲತೆ ಅವರಲ್ಲಿದೆ. ಅವರ ಬಹುತೇಕ ಲೇಖನಗಳಲ್ಲಿ ತರೀಕೆರೆ ವೈಶಿಷ್ಟ್ಯಗಳನ್ನು ಅನಾವರಣ ಗೊಳಸಿದ್ದಾರೆ ಎಂದು ಹೇಳಿದರು.
20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಮರುಳಸಿದ್ದಯ್ಯ ಪಟೇಲ್ ಮಾತನಾಡಿ ಸಾಹಿತಿ ರೆಹಮತ್ ತರೀಕೆರೆ ನಮ್ಮ ಅತ್ಮೀಯರು, ಅಧ್ಯಯನದಲ್ಲಿ ನಾವಿಬ್ಬರು ಸಮಕಾಲಿನರಾಗಿದ್ದು ಅನೇಕ ವಿಷಯಗಳ ಬಗ್ಗೆ ವಿಮರ್ಶೆ ಮಾಡುತ್ತಿದ್ದೆವು ಎಂದು ನುಡಿದರು.
ಸಂಸ್ಕೃತಿ ಚಿಂತಕ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ತರೀಕೆರೆ ನಗರ ಘಟಕ ಅಧ್ಯಕ್ಷ ಟಿ.ಸಿ.ದರ್ಶನ್ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಮನಸುಳಿ ಮೋಹನ್ ಕುಮಾರ್, ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್, ಕೋಶಾಧ್ಯಕ್ಷ ಕೆ.ಜಯಸ್ವಾಮಿ, ಕೆ.ಎಸ್.ಶಿವಣ್ಣ, ಎಸ್.ಟಿ.ತಿಪ್ಪೇಶಪ್ಪ, ಪರುಶುರಾಮ್, ಚೇತನ್ ಗೌಡ, ಶಂಕರಪ್ಪ, ಗಿರೀಶ್, ಕ್ರಿಸ್ತದಯಾಕುಮಾರ್, ಮಂಜುನಾಥ್, ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷ ಉಮಾ ಪ್ರಕಾಶ್, ಗಾಯಿತ್ರಿ ರವಿ ದಳವಾಯಿ ಮತ್ತಿತರರು ಭಾಗವಹಿಸಿದ್ದರು.31ಕೆಟಿಆರ್.ಕೆ.2ಃತರೀಕೆರೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಸ್ಕೃತಿ ಚಿಂತಕ ಸಿದ್ದರಾಮಯ್ಯ ಉದ್ಘಾಟಿಸಿದರು. ಲೇಖಕ ಮನಸುಳಿ ಮೋಹನ್ ಕುಮಾರ್, ಸಾಹಿತಿ ಪುರಸಭೆ ಸದಸ್ಯ ಟಿ.ದಾದಾಪೀರ್ ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ನಗರ ಘಟಕ ಅಧ್ಯಕ್ಷ ಟಿ.ಸಿ.ದರ್ಶನ್ ಮತ್ತಿತರರು ಇದ್ದರು.