ವಿಶೇಷ ವರದಿ
ಮುಂದಿನ ಅಸೆಂಬ್ಲಿ ಚುನಾವಣೆಗೆ ಇನ್ನು ಎರಡು ವರ್ಷ ಇರುವಾಗಲೇ ದ.ಕ. ಜಿಲ್ಲೆಯಲ್ಲಿ ಎಂಟು ಅಸೆಂಬ್ಲಿ ಕ್ಷೇತ್ರಗಳ ಪೈಕಿ ಬಾಕಿ ಇರುವ ಎರಡು ಕ್ಷೇತ್ರಗಳನ್ನು ಶತಾಯಗತಾಯ ಗೆಲ್ಲಿಸಲು ಬಿಜೆಪಿ ಪಾಳಯ ಈಗಲೇ ಸಿದ್ಧತೆ ನಡೆಸತೊಡಗಿದೆ. ಇತ್ತೀಚೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ದ.ಕ. ಜಿಲ್ಲೆ ಭೇಟಿ ವೇಳೆ ಈ ಬಾರಿ ಅಸೆಂಬ್ಲಿ ಚುನಾವಣೆಯಲ್ಲಿ ಇಲ್ಲಿ ಎಂಟಕ್ಕೆ ಎಂಟು ಕ್ಷೇತ್ರಗಳನ್ನು ಗೆಲ್ಲಿಸಿಯೇ ಸಿದ್ಧ ಎಂದು ಸಾರಿದ್ದರು. ಇದರ ಬೆನ್ನಿಗೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ ದಾಸ್ ಅಗರ್‌ವಾಲ್ ಒಂದು ತಿಂಗಳ ಹಿಂದೆ ಬಿಜೆಪಿ ಪ್ರಶಿಕ್ಷಣ ವರ್ಗಕ್ಕೆ ಆಗಮಿಸಿ ಸಂಘಟನಾತ್ಮಕಕ್ಕೆ ಒತ್ತು ನೀಡುವಂತೆ ಮಾತನಾಡಿ ತೆರಳಿದ್ದರು. ಶನಿವಾರ ನಡೆದ ವಿಕಸಿತ ಭಾರತ ಸಂಕಲ್ಪ ಸಮಾವೇಶಕ್ಕೆ ಮಂಗಳೂರಿಗೆ ಆಗಮಿಸಿದ ರಾಧಾಮೋಹನ ದಾಸ್ ಅಗರ್‌ವಾಲ್ ಅವರು ಪ್ರತ್ಯೇಕ ರಹಸ್ಯ ಸಭೆ ನಡೆಸಿ ಎಂಟು ಕ್ಷೇತ್ರಗಳ ಪೈಕಿ ಬಿಜೆಪಿ ಕೈತಪ್ಪಿರುವ ಮಂಗಳೂರು(ಉಳ್ಳಾಲ) ಮತ್ತು ಪುತ್ತೂರು ಕ್ಷೇತ್ರವನ್ನು ಮರು ವಶಪಡಿಸಿಕೊಳ್ಳುವ ಬಗ್ಗೆ ಪಕ್ಷ ಮುಖಂಡರಿಗೆ, ಕಾರ್ಯಕರ್ತರಿಗೆ ಟಾಸ್ಕ್ ನೀಡಿದ್ದಾರೆ. ಉಳ್ಳಾಲ ಕ್ಷೇತ್ರದಲ್ಲಿ ಒಮ್ಮೆ ಮಾತ್ರ ಬಿಜೆಪಿ ಗೆದ್ದಿದ್ದು ಬಿಟ್ಟರೆ ಮಂಗಳೂರು ಕ್ಷೇತ್ರವಾದ ಬಳಿಕ ನಿರಂತರ ಕಾಂಗ್ರೆಸ್ ಗೆಲವು ಕಾಣುತ್ತಿದೆ. ಅದು ಅಲ್ಪಸಂಖ್ಯಾತ ಕ್ಷೇತ್ರವಾಗಿರುವುದರಿಂದ ಅಲ್ಲಿ ಬಿಜೆಪಿ ಗೆಲುವು ಅಷ್ಟು ಸುಲಭ ಅಲ್ಲ. ಆದರೆ ಈ ಬಾರಿ ಹೇಗಾದರೂ ಮಾಡಿ ಬಿಜೆಪಿಯನ್ನು ಗೆಲ್ಲಿಸಿಯೇ ತೀರಬೇಕು ಎಂದು ಬಿಜೆಪಿ ನಾಯಕರು ಹಠಕ್ಕೆ ಬಿದ್ದಿದ್ದಾರೆ. ಮಾತ್ರವಲ್ಲ ಕಳೆದ ಬಾರಿ ಪಕ್ಷದಲ್ಲಿ ಬಂಡಾಯದಿಂದ ಹೀನಾಯ ಸೋಲಿಗೆ ಕಾರಣವಾದ ಪುತ್ತೂರು ಕ್ಷೇತ್ರವನ್ನೂ ಮರಳಿ ತೆಕ್ಕೆಗೆ ತೆಗೆದುಕೊಳ್ಳಲು ಈಗಲೇ ತಂತ್ರಗಾರಿಕೆ ರೂಪಿಸಲು ನಾಯಕರು ಮುಂದಾಗಿದ್ದಾರೆ.
ಗೆಲವಿಗೆ ಏನಿದು ತಂತ್ರಗಾರಿಕೆ: ಮಂಗಳೂರಿನ ಪಕ್ಷದ ಕಚೇರಿ ಮತ್ತು ಉಳ್ಳಾಲದಲ್ಲಿ ಶನಿವಾರ ರಾಧಾಮೋಹನ ದಾಸ್ ಅಗರ್‌ವಾಲ್ ಅವರು ಎಲ್ಲ ಅಸೆಂಬ್ಲಿ ಕ್ಷೇತ್ರಗಳ ಪ್ರಮುಖರ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಮತ್ತು ಸ್ಥಳೀಯಾಡಳಿತ ಮತ್ತು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.ಪಕ್ಷ ಮೂಲಗಳ ಪ್ರಕಾರ, ಕೇಂದ್ರ ಸರ್ಕಾರದ ಯೋಜನೆ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸುವುದು ಮಾತ್ರವಲ್ಲ ಜನಸಾಮಾನ್ಯರ ಅಹವಾಲಿಗೆ ಮುಖಂಡರು ಮತ್ತು ಕಾರ್ಯಕರ್ತರು ಕಡ್ಡಾಯವಾಗಿ ಕಿವಿಯಾಗಬೇಕು. ಮನೆ ಮನೆಗಳಲ್ಲಿ ಕೂತು ಈ ಕೆಲಸ ಮಾಡಬೇಕು. ಆ ಮೂಲಕ ಮನೆ ಮಂದಿಯ ವಿಶ್ವಾಸ ಗಳಿಸಬೇಕು. ಈ ಕಾರ್ಯ ಈಗಿಂದಲೇ ಶುರುವಾಗಬೇಕು. ಮಂಡಲ, ಶಕ್ತಿ ಕೇಂದ್ರ, ಗ್ರಾಮ ಹಾಗೂ ಬೂತ್ ಸಮಿತಿಗಳು ಇದನ್ನು ಕೂಡಲೇ ಕಾರ್ಯಗತಗೊಳಿಸಬೇಕು ಎಂಬ ಲೆಕ್ಕಾಚಾರವನ್ನು ರಾಧಾಮೋಹನ ದಾಸ್ ಅಗರ್‌ವಾರ್ ಹೇಳಿದ್ದಾರೆ.
ಟಾಸ್ಕ್ ಇಬ್ಬರಿಗೆ, ವಿಸ್ತರಣೆ ಎಲ್ಲರಿಗೆ: ಮುಂದಿನ ಚುನಾವಣೆಯಲ್ಲಿ ಪುತ್ತೂರು ಮತ್ತು ಮಂಗಳೂರು ಕ್ಷೇತ್ರ ಗೆಲ್ಲಿಸುವಂತೆ ರಾಧಾಮೋಹನ ದಾಸ್ ಅಗರ್‌ವಾಲ್ ಆಯಾ ಕ್ಷೇತ್ರಗಳ ಮುಖಂಡರಿಗೆ ಟಾಸ್ಕ್ ನೀಡಿದರೂ ಇದೇ ಮಾನದಂಡ, ಪ್ರಯತ್ನ, ಪರಿಶ್ರಮವನ್ನು ಬಿಜೆಪಿ ಶಾಸಕರಿರುವ ಇತರೆ ಆರು ಕ್ಷೇತ್ರಗಳಲ್ಲೂ ಅನುಸರಿಸುವಂತೆ ಸೂಚನೆ ನೀಡಿದ್ದಾರೆ.
*ಮುಂದಿನ ಸ್ಥಳೀಯ ಸಂಸ್ಥೆ, ಅಸೆಂಬ್ಲಿ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳನ್ನು ಗೆಲ್ಲಲು ಸಂಘಟನಾತ್ಮಕ ತಯಾರಿಯನ್ನು ಮಾಡಿಕೊಳ್ಳುವಂತೆ ರಾಧಾಮೋಹನ ದಾಸ್ ಅಗರ್‌ವಾಲ್ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ಪ್ರಾಬಲ್ಯವನ್ನು ಉಳಿಸುವ ಜವಾಬ್ದಾರಿಯನ್ನು ನಾಯಕರು ನೀಡಿದ್ದಾರೆ. -ಸತೀಶ್ ಕುಂಪಲ, ಜಿಲ್ಲಾಧ್ಯಕ್ಷರು, ದ.ಕ. ಬಿಜೆಪಿ