ನಿದ್ದೆಗೂ ಭಂಗ ತಂದ ತಾಪಮಾನ!

KannadaprabhaNewsNetwork |  
Published : May 02, 2024, 12:17 AM IST
ಬಿಸಿಲಿನ ತಾಪಮಾನಕ್ಕೆ ದೇವರಹಿಪ್ಪರಗಿ ಜನ ಹೈರಾಣ. | Kannada Prabha

ಸಾರಾಂಶ

ದೇವರಹಿಪ್ಪರಗಿಯಲ್ಲಿ ಈ ಬಾರಿ ರಣ ಬಿಸಿಲು ಜನರನ್ನು ಹೈರಾಣ ಆಗಿಸಿದೆ. ಹೀಗಾಗಿ ಜನರು ರಾತ್ರಿಯಲ್ಲಿ ನಿದ್ದೆ ಮಾಡದಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಬೆವರಿನಿಂದ ಜಾಗರಣೆ ಮಾಡುವ ಪರಿಸ್ಥಿತಿ ಉಂಟಾಗಿದೆ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ದೇವರಹಿಪ್ಪರಗಿಯಲ್ಲಿ ಈ ಬಾರಿ ರಣ ಬಿಸಿಲು ಜನರನ್ನು ಹೈರಾಣ ಆಗಿಸಿದೆ. ಹೀಗಾಗಿ ಜನರು ರಾತ್ರಿಯಲ್ಲಿ ನಿದ್ದೆ ಮಾಡದಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಬೆವರಿನಿಂದ ಜಾಗರಣೆ ಮಾಡುವ ಪರಿಸ್ಥಿತಿ ಉಂಟಾಗಿದೆ.

ಮಧ್ಯಾಹ್ನದ ರಣ ಬಿಸಿಲಿನ ಹೊತ್ತಲ್ಲಿ ಹೊರಗಡೆ ಹೋದರೆ ಮೂರ್ಛೆ ಹೋಗುವುದು ಗ್ಯಾರಂಟಿ ಎನ್ನುವಂತಾಗಿದೆ. ಇನ್ನು ರಾತ್ರಿಯಾಗಿ ಆರಾಮಾಗಿ ನಿದ್ದೆ ಮಾಡಬೇಕು ಎಂದರೆ ಸೆಕೆ, ನಿದ್ದೆ ಮಾಡಿಸಿಕೊಡುತ್ತಿಲ್ಲ. ಫ್ಯಾನ್, ಎಸಿ ಗಾಳಿ ಕೂಡ ಈ ರಣ ಬಿಸಿಲಿಗೆ ತಂಡಾ ಹೊಡೆದಿವೆ. ಹೀಗಾಗಿ ಜನರು ರಾತ್ರಿಯಲ್ಲ ಟವೆಲ್‌ನಿಂದ ಮೈ-ಕೈ ಒರೆಸಿಕೊಳ್ಳುವುದೇ ಕೆಲಸವಾಗಿಬಿಟ್ಟಿದೆ.

ನಾಲ್ಕೈದು ದಿನಗಳಿಂದ ತಾಪ ಹೆಚ್ಚಳ:

ತಾಲೂಕಿನಲ್ಲಿ ಬಿಸಿಲಿನ ಬೇಗೆಗೆ ಜನ ನಲುಗಿ ಹೋಗಿದ್ದಾರೆ. ಮನೆಯಿಂದ ಹೊರ ಬರಲೂ ಹತ್ತಾರು ಬಾರಿ ಯೋಚಿಸುವಂತಾಗಿದೆ. ದೇವರಹಿಪ್ಪರಗಿಯಲ್ಲಿ ಬಿಸಿಲಿನ ತಾಪಮಾನ 42-43 ಡಿಗ್ರಿಗಿಂತಲೂ ಹೆಚ್ಚಿದೆ. ವಯಸ್ಸಾದವರು, ಮಹಿಳೆಯರು ರಣ ಬಿಸಿಲನ್ನು ತಾಳಲಾರದೆ ಯಾವುದೇ ಕೆಲಸ ಕಾರ್ಯಗಳಿಗೂ ಹೋಗಲಾರದೆ ಮನೆಯಲ್ಲಿಯೇ ಕೂರುವಂತಾಗಿದೆ. ಇನ್ನು ರೈತರು ಹೊಲ, ತೋಟಗಳಲ್ಲಿ ಕೆಲಸ ಮಾಡಲಾರದಷ್ಟು ಬಿಸಿಲ ಬೇಗೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತಾಪಮಾನ ಏರಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಜನರು ಈಗಾಗಲೇ ಬಿಸಿಲಿಗೆ ಬೆಂಡಾಗಿ ಹೋಗಿದ್ದಾರೆ. ಇನ್ನಷ್ಟು ಬಿಸಿಲು ಹೆಚ್ಚಾದರೆ ಸುಟ್ಟು ಕರಕಲು ಆಗಬಹುದು.

ಮಕ್ಕಳು, ವಯಸ್ಸಾದವರ ಸ್ಥಿತಿ ಶೋಚನೀಯ:

ಇನ್ನು ವಯಸ್ಸಾದವರು, ಮಹಿಳೆಯರು, ಅನಾರೋಗ್ಯಕ್ಕೀಡಾಗಿರುವವರು, ಚಿಕ್ಕ ಚಿಕ್ಕ ಮಕ್ಕಳಂತೂ ವಿಪರೀತ ಸೆಕೆಗೆ ಸುಸ್ತಾಗಿದ್ದಾರೆ. ಕುಡಿಯುವ ನೀರೂ ಬಿಸಿ ನೀರಿನಂತಾಗಿದ್ದು ನೀರು ಕುಡಿದರೂ ದಾಹ ತೀರುತ್ತಿಲ್ಲ. ಜನರಷ್ಟೇ ಬಿಸಿಲಿಗೆ ನಲುಗುತ್ತಿಲ್ಲ. ಜಾನುವಾರು, ಪ್ರಾಣಿ-ಪಕ್ಷಿಗಳು, ಕುರಿ-ಮೇಕೆ, ನಾಯಿಗಳೂ ವಿಪರೀತ ತಾಪಮಾನ ತಡೆದುಕೊಳ್ಳಲಾಗದೆ ಮರಗಳ ನೆರಳಲ್ಲಿ ಆಶ್ರಯ ಪಡೆಯಲು ಮುಂದಾಗುತ್ತಿವೆ.

ಬಿಕೋ ಎನ್ನುತ್ತಿರುವ ಮಾರುಕಟ್ಟೆ ಹಾಗೂ ರಸ್ತೆಗಳು:

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳಿಗೆ ಜನ ಹೋಗಬೇಕೆಂದರೆ ಸುಡು ಬಿಸಿಲಿನಲ್ಲಿ ಹೇಗಪ್ಪಾ ಹೋಗುವುದು ಎಂದು ಚಿಂತಿಸುವಂತಾಗಿದೆ. ದೈನಂದಿನ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇರುವ ಕಾರಣ ಜನ ಛತ್ರಿ, ಟೋಪಿಗಳ ಮೊರೆ ಹೋಗಿದ್ದಾರೆ. ಬಿಸಿಲ ಬೇಗೆಗೆ ತರಕಾರಿಗಳು ಮಧ್ಯಾಹ್ನದ ವೇಳೆಗೆ ಬಾಡಿ ಹೋಗುತ್ತಿವೆ. ಹಣ್ಣು, ತರಕಾರಿಗಳನ್ನು ರಕ್ಷಣೆ ಮಾಡಿಕೊಳ್ಳುವುದಾದರೂ ಹೇಗಪ್ಪ ಎಂದು ವ್ಯಾಪಾರಸ್ಥರೂ ಚಿಂತೆಗೀಡಾಗಿದ್ದಾರೆ.

ಬಿಸಿಲ ಹೊಡೆತಕ್ಕೆ ಸಂತೆ, ತರಕಾರಿ ಮಾರುಕಟ್ಟೆ, ಬಟ್ಟೆ ಅಂಗಡಿ ಸೇರಿದಂತೆ ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗುತ್ತಿವೆ. ಅಗತ್ಯ ವಸ್ತು ಖರೀದಿಸಲು ಬಿಸಿಲ ಭಯಕ್ಕೆ ಮನೆಯಿಂದ ಹೊರಗೆ ಬರುತ್ತಿಲ್ಲ. ಇದರಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ ಕಡಿಮೆಯಿದ್ದು ಮಧ್ಯಾಹ್ನ ಸಮಯದಲ್ಲಂತೂ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿವೆ.

ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಇದರಿಂದ ಜನರು ಮಳೆಯ ಆಗಮನ ನಿರೀಕೆಯಲ್ಲಿ ಆಕಾಶದ ಕಡೆ ಮುಖ ಮಾಡಿ ಕುಳಿತುಕೊಂಡಿದ್ದಾರೆ. ಒಟ್ಟಿನಲ್ಲಿ ಈ ಬೇಸಿಗೆ ಯಾವಾಗ ಮುಗಿಯುತ್ತದೆಯೋ ಎಂದು ಜನರು ಕಾಯ್ದು ಕುಳಿತಿದ್ದಾರೆ.

---

ಬಾಕ್ಸ್‌

ತಂಪು ಪಾನೀಯಗೆ ಹೆಚ್ಚಿದ ಬೇಡಿಕೆ

ಬಿಸಿಲ ತಾಪಮಾನಕ್ಕೆ ಜನ ಆಹಾರ ಕಡಿಮೆ ಮಾಡಿದ್ದು, ನೀರು, ಮಜ್ಜಿಗೆ, ತಂಪು ಪಾನೀಯ, ಐಸ್‌ಕ್ರೀಂ, ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಜ್ಯೂಸ್‌ ಅಂಗಡಿಯವರಿಗೆ, ಹಣ್ಣಿನ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರ ಆಗುತ್ತಿದೆ. ಎಳೆನೀರು, ಕಬ್ಬಿನಹಾಲು, ಕಲ್ಲಂಗಡಿ ಹಣ್ಣುಗಳ ಅಂಗಡಿ ಕಂಡರಂತೂ ಜನ ದಾಹ ತೀರಿಸಿಕೊಳ್ಳುತ್ತಿದ್ದಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲ ವ್ಯಾಪಾರಸ್ಥರು, ಬೆಲೆ ಏರಿಕೆ ಮಾಡಿ ಜನರಿಗೆ ಬರೆ ಹಾಕುತ್ತಿದ್ದಾರೆ.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ