ಮರಣವೆಂಬ ಪರೀಕ್ಷೆಗೆ ಪ್ರತಿದಿನವೂ ಸಾಧನೆ ಅವಶ್ಯಕ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork | Published : Aug 16, 2024 12:47 AM

ಸಾರಾಂಶ

ನಾವು ಪ್ರತಿನಿತ್ಯವೂ ಮಾಡುವ ಕೆಲಸಗಳೇ ಮರಣದ ಪರೀಕ್ಷೆಗೆ ಸಿದ್ಧತೆಯಾಗಿರುತ್ತದೆ. ನಾವು ಜವಾಬ್ದಾರಿ ಇಲ್ಲದೆ ಕೆಲಸ ಮಾಡುತ್ತಾ ಹೋದರೆ ಅದರಿಂದ ಪರಿಣಾಮ ಕಡಿಮೆ ಇರುತ್ತದೆ. ಪ್ರಯೋಜನವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಸೋಂದಾ ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಶಿರಸಿ: ಮರಣವೆಂಬ ಪರೀಕ್ಷೆಗೆ ಪ್ರತಿದಿನವೂ ಸಾಧನೆ ಅವಶ್ಯಕ ಎಂದು ಸೋಂದಾ ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಸ್ವರ್ಣವಲ್ಲೀಯಲ್ಲಿ ತಮ್ಮ ೩೪ನೇ ಹಾಗೂ ಕರಕಮಲ ಸಂಜಾತ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಮೊದಲ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಕುಳಿನಾಡು ಸೀಮೆಯ ಹಳವಳ್ಳಿ-ಕೊಡ್ಲಗದ್ದೆ ಭಾಗದ ಭಕ್ತರ ಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ಮನಸ್ಸಿನ ಆಳದಲ್ಲಿ ಯಾವ ಆಸೆ ಇರುತ್ತದೆಯೋ ಅದರದ್ದೇ ಆಲೋಚನೆ ಹೊರ ಮನಸ್ಸಿನಲ್ಲಿ ಬರುತ್ತದೆ. ಆ ಆಲೋಚನೆಗೆ ತಕ್ಕಂತೆಯೇ ಮನುಷ್ಯ ಕರ್ಮಗಳನ್ನು ಮಾಡುತ್ತಾನೆ. ಕರ್ಮಕ್ಕೆ ತಕ್ಕಂತೆಯೇ ಮರಣಾನಂತರದಲ್ಲಿ ಅಥವಾ ಮರಣಕ್ಕಿಂತ ಪೂರ್ವದಲ್ಲಿ ಫಲವನ್ನು ಪಡೆಯುತ್ತಾನೆ. ಭಗವಂತ ಗೀತೆಯಲ್ಲಿ ಹೇಳುತ್ತಾನೆ, ಯಾವನು ಕೊನೆಕಾಲದಲ್ಲಿ ಯಾವ ಅಂಶವನ್ನು ಚಿಂತನೆ ಮಾಡುತ್ತಾ ಶರೀರವನ್ನು ಬಿಡುತ್ತಾನೋ, ಯಾವ ವಿಷಯವನ್ನು ಆಲೋಚನೆ ಮಾಡುತ್ತಾ ಶರೀರಪಾತವಾಗುತ್ತದೆಯೋ, ಅದನ್ನೇ ಮುಂದಿನ ಜನ್ಮದಲ್ಲಿ ಆತ ಪಡೆಯುತ್ತಾನೆ. ಜನ್ಮವಿಡೀ ಯಾವ ವಿಷಯದ ಚಿಂತನೆ ಪ್ರಧಾನವಾಗಿ ಮಾಡುತ್ತಾನೋ, ಯಾವ ವಿಷಯ ಪ್ರಧಾನವಾಗಿ ಮನಸ್ಸಿನೊಳಗೆ ಹಾದು ಹೋಗುತ್ತಿದೆಯೋ ಅದೇ ವಿಷಯ ಕೊನೆಕಾಲದಲ್ಲೂ ಬರುತ್ತದೆ. ಇದರ ಪ್ರಭಾವ ಮುಂದಿನ ಜನ್ಮದ ಮೇಲೂ ಇರುತ್ತದೆ. ಹಾಗಾಗಿ ಪ್ರತಿನಿತ್ಯವೂ ಮಾಡುವ ನಮ್ಮ ಮನಸ್ಸಿನ ಕೆಲಸ ಬಹಳ ಮುಖ್ಯ ಎಂದರು.

ಜನ್ಮವಿಡೀ ನಾವು ದೇವರ ಚಿಂತನೆ, ದೇವತೆಗಳ ಮೇಲೆ ಭಕ್ತಿ ಇವನ್ನೇ ಮಾಡುತ್ತಾ ಹೋದರೆ ಮುಂದೆ ದೇವರ ಸ್ಮರಣೆಯಲ್ಲಿ ನಾವು ಶರೀರ ತ್ಯಾಗ ಮಾಡಲು ಸಾಧ್ಯ. ದೇವತಾ ಜನ್ಮವನ್ನು ಪಡೆಯಲು, ದೇವತಾ ಸಾನ್ನಿಧ್ಯವನ್ನು ಪಡೆಯಲು ಸಾಧ್ಯ. ಜೀವನದಲ್ಲಿ ಪ್ರತಿನಿತ್ಯವೂ ಒಂದು ತಯಾರಿ ಎನ್ನುವುದು ಇರುತ್ತದೆ. ಅದೇ ಪರೀಕ್ಷೆಯ ತಯಾರಿ. ಮಕ್ಕಳು ಪರೀಕ್ಷೆ ಇದ್ದರೆ ಒಂದು ವರ್ಷದಿಂದ ಪ್ರತಿನಿತ್ಯವೂ ಅದರ ತಯಾರಿ ಹೇಗೆ ಮಾಡುತ್ತಾರೋ ಅದೇರೀತಿಯಾಗಿ ಜೀವನದ ಪರೀಕ್ಷೆಯಲ್ಲಿ ನಮಗೆ ಪ್ರತಿನಿತ್ಯವೂ ಪ್ರತಿ ಕ್ಷಣವೂ ಒಂದು ತಯಾರಿ, ಸಾಧನಗಳು ಇರುತ್ತವೆ. ಮರಣವೇ ಜೀವನದ ಪರೀಕ್ಷೆ. ಆ ಮರಣಕ್ಕೆ ಪ್ರತಿದಿನವೂ ನಾವು ಮಾಡುವ ಸಾಧನೆಯೇ ತಯಾರಿ. ಜೀವನದ ಕಟ್ಟಕಡೆಯ ಪರೀಕ್ಷೆಯೆಂದರೆ ಅದೇ ಮರಣ ಎಂದರು.

ನಾವು ಪ್ರತಿನಿತ್ಯವೂ ಮಾಡುವ ಕೆಲಸಗಳೇ ಮರಣದ ಪರೀಕ್ಷೆಗೆ ಸಿದ್ಧತೆಯಾಗಿರುತ್ತದೆ. ನಾವು ಜವಾಬ್ದಾರಿ ಇಲ್ಲದೆ ಕೆಲಸ ಮಾಡುತ್ತಾ ಹೋದರೆ ಅದರಿಂದ ಪರಿಣಾಮ ಕಡಿಮೆ ಇರುತ್ತದೆ. ಪ್ರಯೋಜನವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಜವಾಬ್ದಾರಿಯುತವಾಗಿ, ಸಾಧನಾ ರೂಪವಾಗಿ ನಾವು ಕೆಲಸಗಳನ್ನು ಮಾಡುತ್ತಾ ಹೋದರೆ ಆಗ ಒಳ್ಳೆಯ ಪ್ರಭಾವ ಮತ್ತು ಮುಂದೆ ಸದ್ಗತಿಯು ದೊರೆಯುತ್ತದೆ. ಪ್ರತಿನಿತ್ಯವೂ ಸಾಧನಾ ಮಾರ್ಗದಲ್ಲಿ ಮರಣವೆಂಬ ಪರೀಕ್ಷೆಯನ್ನು ನಾವು ಎದುರಿಸಿದರೆ ಮುಂದೆ ಇನ್ನಷ್ಟು ಉತ್ತಮ ಗತಿಗೆ ಹೋಗಲು ಸಾಧ್ಯ ಎಂದೂ ಹೇಳಿದರು.

ಕರ್ಮಗಳು ಮೂರು ಪ್ರಕಾರ. ಪ್ರಾರಬ್ಧ ಕರ್ಮ, ಸಂಚಿತ ಕರ್ಮ, ಮತ್ತು ಆಗಾಮೀ ಕರ್ಮ ಎಂಬುದಾಗಿ. ಪ್ರಾರಬ್ಧ ಕರ್ಮಗಳ ಅನುಭವದಿಂದ ಸುಖ-ದುಃಖಗಳ ಅನುಭವದಿಂದ ಖರ್ಚಾಗುತ್ತದೆ. ಅದು ಪೂರ್ತಿಯಾಗಿ ಖರ್ಚಾದಾಗ ಮರಣ ಬರುತ್ತದೆ. ಮುಂದಿನ ಜನ್ಮಕ್ಕೆ ಸಂಚಿತ ಕರ್ಮಗಳು ಕಾರಣವಾಗುತ್ತವೆ. ಹಿಂದಿನ ಸಂಚಿತ ಕರ್ಮಗಳೇ ಮುಂದೆ ಪ್ರಾರಬ್ಧಕರ್ಮವಾಗಿ ಪದೋನ್ನತಿಯನ್ನು ಹೊಂದಿ ಮುಂದಿನ ಜನ್ಮದ ಸುಖ ದುಃಖಗಳಿಗೆ ಕಾರಣ ವಾಗುತ್ತದೆ. ಸಾಧನೆಯನ್ನು ಪ್ರತಿನಿತ್ಯವೂ ಮಾಡುವ ಮೂಲಕ ನಾವು ಉತ್ತಮ ಗತಿಯತ್ತ ಸಾಗಬೇಕು. ಮರಣವೆಂಬ ಪರೀಕ್ಷೆಗೆ ಪ್ರತಿನಿತ್ಯವೂ ಸಾಧನೆಯೇ ಸಿದ್ಧತೆ. ಇದನ್ನು ಸಾಧಿಸುತ್ತಾ ಹೋದರೆ ಆಗ ನಮ್ಮ ಜೀವನ ಧರ್ಮಮಯವಾಗುತ್ತದೆ ಎಂದರು.

ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆ ಮಾಡಿದರು. ಪುರುಷರು ಗಾಯತ್ರೀ ಅನುಷ್ಠಾನವನ್ನು ಕೈಗೊಂಡರು. ಸೀಮೆಯ ಪ್ರಮುಖರು ರಾಜೇಶ ಹೆಗಡೆ ಕೈಗಡಿ, ರಾಮಚಂದ್ರ ಹೆಗಡೆ ಕೂಡಿಗೆ ಇತರರು ಇದ್ದರು.

Share this article