- ಭಗವಾನ್ ಶ್ರೀ ಜಿಹ್ವೇಶ್ವರ ಜಯಂತ್ಯುತ್ಸವದಲ್ಲಿ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ವಿಶ್ವದ ಆರ್ಥಿಕತೆಯಲ್ಲಿ ಜವಳಿ ಕೈಗಾರಿಕೋದ್ಯಮ ಪಾತ್ರ ಮಹತ್ತರವಾಗಿದೆ. ನೇಕಾರ ವೃತ್ತಿಯು ಇದರ ಮೂಲವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಅಭಿಪ್ರಾಯಪಟ್ಟರು.
ನಗರದ ಸದ್ಯೋಜಾತ ಶಿವಾಚಾರ್ಯ ಹಿರೇಮಠದಲ್ಲಿ ಸ್ವಕುಳ ಸಾಳಿ ಸಮಾಜ ನೇಕಾರ ವತಿಯಿಂದ ಆಯೋಜಿಸಿದ್ದ ಭಗವಾನ್ ಶ್ರೀ ಜಿಹ್ವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಜವಳಿ ಕೈಗಾರಿಕೋದ್ಯಮದ ಮೂಲಪುರುಷರು ನೇಕಾರರು. ಕೈಮಗ್ಗದಿಂದ ಬಟ್ಟೆ ನೇಯುವ ನೇಕಾರರಿಗೆ ಭಗವಾನ್ ಜಿಹ್ವೇಶ್ವರರು ಆರಾಧ್ಯದೈವ. ಶಿವನ ನಾಲಗೆಯಿಂದ ಹುಟ್ಟಿ ಬಂದ ಜಿಹ್ವೇಶ್ವರ ಅವರು ದೇವತೆಗಳಿಗೆ ಉಡಲು ಬಟ್ಟೆ ನೇಯ್ದುಕೊಟ್ಟರು. ನೇಯ್ಗೆಯಲ್ಲಿ ಉದ್ದ ನೂಲಿನ ಹಾಸು ಹಾಗೂ ಅಡ್ಡನೂಲಿನ ಹೊಕ್ಕು ಮುಖ್ಯವಾಗಿವೆ. ಉದ್ದನೂಲಿನ ಹಾಸು ಜ್ಞಾನದ ವೈಶಾಲ್ಯತೆ ಸಂಕೇತವಾದರೆ, ಅಡ್ಡನೂಲಿನ ಹೊಕ್ಕು ವಿದ್ಯೆಯ ಸಂಕೇತವಾಗುತ್ತದೆ ಎಂದರು.
ಹಾಸು, ಹೊಕ್ಕು ನೂಲುಗಳು ಕೂಡಿ ವಸ್ತ್ರ ಸಿದ್ಧವಾಗುವಂತೆ ಸುಜ್ಞಾನ ಸದ್ವಿದ್ಯೆಗಳು ಕೂಡಿದಾಗ ಸುಸಂಸ್ಕೃತಿ ಸಾಕಾರವಾಗುತ್ತದೆ. ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಂದೇ ನೇಕಾರರ ಮೂಲಪುರುಷ ಜಿಹ್ವೇಶ್ವರ ಜಯಂತಿಯೂ ಬಂದಿರುವುದು ಬಹಳ ವಿಶೇಷ ದಿನವಾಗಿದೆ. ಜಗತ್ತಿಗೆ ಬಟ್ಟೆಯ ಪರಿಚಯವನ್ನು ಮೊಟ್ಟಮೊದಲು ಮಾಡಿ ಕೊಟ್ಟಿದ್ದು ಭಾರತ ದೇಶ. ವಿಶ್ವದ ಜವಳಿ ಕೈಗಾರಿಕೋದ್ಯಮದ ಮೊತ್ತವು ವಾರ್ಷಿಕ ಸುಮಾರು ಒಂದುವರೆ ಟ್ರಿಲಿಯನ್ ಡಾಲರ್‌ಗಳಷ್ಟಿದ್ದರೆ ಭಾರತದ ಜವಳಿ ಉದ್ಯಮದ ವಾರ್ಷಿಕ ಮೊತ್ತವೇ ಸುಮಾರು 160 ಬಿಲಿಯನ್ ಡಾಲರ್‌ಗಳಷ್ಟಿದೆ ಎಂದರು.ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಸಕಾರಾತ್ಮಕ ಉತ್ತೇಜನಗಳ ಅವಶ್ಯಕತೆ ಇದೆ. ಇಂತಹ ಕಾರ್ಯಕ್ರಮಗಳಿಗೆ ಮಕ್ಕಳು ಹೆಚ್ಚಾಗಿ ಬರುವಂತಾಗಬೇಕು ಎಂದರು.
ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಡಿ.ಮಾಲತೇಶ್ ರಾವ್ ಜಾದವ್ ಮಾತನಾಡಿ, ಮುಂದಿನ ವರ್ಷಗಳಲ್ಲಿ ಸಮಾಜದವರು ತಮ್ಮದೇ ಆದ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಸುವಂತಾಗಲಿ ಎಂದು ಆಶಿಸಿದರು.ಜಡೆಸಿದ್ದ ಶಿವಯೋಗೀಶ್ವರ ಮಠದ ಡಾ.ಶಿವಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜಿಹ್ವೆ ಎಂದರೆ ನಾಲಿಗೆ. ನಾಲಿಗೆಯನ್ನು ಹರಿಬಿಟ್ಟಲ್ಲಿ ಅಪಾಯ ತಪ್ಪಿದ್ದಲ್ಲ. ಅದಕ್ಕಾಗಿಯೇ ಭಗವಂತ ನಾಲಿಗೆಯ ನಿಗ್ರಹಕ್ಕೆ ಮುಚ್ಚಳ ರೂಪದಲ್ಲಿ ತುಟಿಗಳನ್ನು ಕೊಟ್ಟಿದ್ದಾನೆ ಎಂದರು.
ದಾವಣಗೆರೆ ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಸುರೇಂದ್ರ ಕುಮಾರ್ ವಾಂಜ್ರೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ದಾನಿಗಳಿಗೆ ಸನ್ಮಾನ ನೆರವೇರಿತು.ಕ್ಷೀರಸಾಗರದ ಹನುಮಂತಪ್ಪ, ಡಿ.ನಾಗೇಂದ್ರ ಸರೋದೆ, ಗಣೇಶ್ ಕ್ಷೀರಸಾಗರ ಮುಂತಾದವರು ಉಪಸ್ಥಿತರಿದ್ದ ವೇದಿಕೆಯಲ್ಲಿ ಕಾರ್ಯಕ್ರಮದ ನಿರೂಪಣೆಯನ್ನು ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ವಿ. ಏಕಬೋಟೆ ಮಾಡಿದರು. ಸಮಾಜದ ಮಹಿಳಾ ಮಂಡಳಿಯವರು ಪ್ರಾರ್ಥಿಸಿದರು. ಮಂಜುನಾಥ ಕಾಂಬ್ಳೆ ಸ್ವಾಗತಿಸಿ, ವಾಸುದೇವ ಸಾಕ್ರೆ ವಂದಿಸಿದರು. ಸುಬ್ರಹ್ಮಣ್ಯಂ ಕೆಂದೋಳೆ ವಿರಚಿತ ಮೂಲಸ್ತಂಭ ಸಾಳೀ ಮಹಾತ್ಮ ಪುರಾಣ ಗ್ರಂಥ ಬಿಡುಗಡೆಗೆ ನೆರವೇರಿತು.
- - -(ಕೋಟ್) ಕುಲಕಸಬುಗಳಿಗೆ ತೊಂದರೆ ಬಂದಾಗ ಬೇರೆ ವೃತ್ತಿ ಅವಲಂಬಿಸಲು ಶಿಕ್ಷಣ ಅವಶ್ಯ. ಮಕ್ಕಳ ಉತ್ತಮ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು.
- ಬಿ.ಎನ್. ಮಲ್ಲೇಶ್, ಸಾಹಿತಿ- - -
-7ಕೆಡಿವಿಜಿ45.ಜೆಪಿಜಿ:ದಾವಣಗೆರೆಯಲ್ಲಿ ಭಗವಾನ್ ಶ್ರೀ ಜಿಹ್ವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಉದ್ಘಾಟಿಸಿದರು.