ರಾಮಪಟ್ಟಣ ರಸ್ತೆ ಅಗಲೀಕರಣಕ್ಕೆ ಕೂಡಿಬಂದ ಕಾಲ

KannadaprabhaNewsNetwork | Published : Mar 14, 2025 12:31 AM

ಸಾರಾಂಶ

ಪಟ್ಟಣದ ಹೃದಯ ಭಾಗದ ಮೂಲಕ ಹಾದು ಹೋಗುವಂಥ ರಾಮಪಟ್ಟಣ ರಸ್ತೆ ತುಂಬಾ ಕಿರಿದಾಗಿದ್ದು, ವಾಹನ ಸಂಚಾರ ತುಂಬಾ ಕಷ್ಟಕರವಾಗಿತ್ತು, ಇದೀಗ ಈ ರಸ್ತೆ ಅಗಲೀಕರಣಕ್ಕೆ ಕಾಲ ಕೂಡಿಬಂದಿದ್ದು, ಮೂಲಗಳ ಪ್ರಕಾರ 40 ಅಡಿಗಳಷ್ಟು ರಸ್ತೆ ಅಗಲೀಕರಣವಾಗಲಿದೆ ಎನ್ನಲಾಗಿದೆ. ಆದರೆ ರಸ್ತೆ ಅಕ್ಕಪಕ್ಕದ ಮಾಲೀಕರು 30 ಅಡಿ ರಸ್ತೆ ಅಗಲೀಕರಣ ಮಾಡುವಂತೆ ಶಾಸಕ ಸುಬ್ಬಾರೆಡ್ಡಿಯವರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಆರ್.ಬಾಲಾಜಿ,

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಪಟ್ಟಣದ ಹೃದಯ ಭಾಗದ ಮೂಲಕ ಹಾದು ಹೋಗುವಂಥ ರಾಮಪಟ್ಟಣ ರಸ್ತೆ ತುಂಬಾ ಕಿರಿದಾಗಿದ್ದು, ವಾಹನ ಸಂಚಾರ ತುಂಬಾ ಕಷ್ಟಕರವಾಗಿತ್ತು, ಇದೀಗ ಈ ರಸ್ತೆ ಅಗಲೀಕರಣಕ್ಕೆ ಕಾಲ ಕೂಡಿಬಂದಿದ್ದು, ಮೂಲಗಳ ಪ್ರಕಾರ 40 ಅಡಿಗಳಷ್ಟು ರಸ್ತೆ ಅಗಲೀಕರಣವಾಗಲಿದೆ ಎನ್ನಲಾಗಿದೆ. ಆದರೆ ರಸ್ತೆ ಅಕ್ಕಪಕ್ಕದ ಮಾಲೀಕರು 30 ಅಡಿ ರಸ್ತೆ ಅಗಲೀಕರಣ ಮಾಡುವಂತೆ ಶಾಸಕ ಸುಬ್ಬಾರೆಡ್ಡಿಯವರ ಬಳಿ ಮನವಿ ಮಾಡಿಕೊಂಡಿದ್ದಾರೆ.

ರಾಮಪಟ್ಟಣ ರಸ್ತೆ ಸ್ಥಳೀಯರಿಗೆ ಮಾತ್ರವಲ್ಲದೇ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದೆ. ಆದರೆ ಈ ರಸ್ತೆ ತುಂಬಾ ಕಿರಿದಾದ ಕಾರಣದಿಂದ ಸುಮಾರು ವರ್ಷಗಳಿಂದ ಸಂಚರಿಸುವ ಜನರಿಗೆ ಕಿರಿಕಿರಿಯಾಗಿತ್ತು. ಇದೀಗ ಈ ರಸ್ತೆ ಅಗಲೀಕರಣಕ್ಕೆ ಮೂಹೂರ್ತ ಕೂಡಿಬಂದಿದ್ದು, ಶೀಘ್ರದಲ್ಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ಅಗಲೀಕರಣದ ಸಂಬಂಧ ನೋಟಿಸ್ ನೀಡಿ ಬಳಿಕ ರಸ್ತೆ ಅಗಲೀಕರಣ ಮಾಡಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಮಧ್ಯ ರಸ್ತೆಯಿಂದ 43 ಅಡಿಗಳಷ್ಟು ರಸ್ತೆ ಅಗಲೀಕರಣವಾಗಬೇಕಿದೆ, ಸದ್ಯ ಮಧ್ಯ ರಸ್ತೆಯಿಂದ 20 ಅಡಿ ರಸ್ತೆ ಅಗಲೀಕರಣವಾಗಲಿದೆ ಎಂಬ ಮಾಹಿತಿ ಕೇಳಿಬಂದಿದೆ.

ಇನ್ನು ರಾಮಪಟ್ಟಣ ರಸ್ತೆ ಅಗಲೀಕರಣವಾದರೆ ರಸ್ತೆಯ ಅಕ್ಕಪಕ್ಕದಲ್ಲಿರುವಂಥ ಅನೇಕರು ತಮ್ಮ ಮನೆ ಸೇರಿದಂತೆ ಆಸ್ತಿಯನ್ನು ಕಳೆದುಕೊಳ್ಳಲಿದ್ದಾರೆ. ಆದರೆ ಈ ರಸ್ತೆಯ ಮೂಲಕವೇ ಸರ್ಕಾರಿ ಪದವಿ, ಪದವಿ ಪೂರ್ವ ಕಾಲೇಜು, ಶ್ರೀ ಸಾಯಿ ವಿದ್ಯಾನೀಕೇತನ ಶಾಲೆ, ಅರವಿಂದ ಶಾಲೆಗಳೂ ಇದ್ದು, ಶಾಲಾ ಮಕ್ಕಳು ಹಾಗೂ ವಿದ್ಯಾರ್ಥಿಗಳು ಸಂಚರಿಸಬೇಕಿದೆ. ಜೊತೆಗೆ ಯಾವುದಾದರೂ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಬಂದರೆ ಬೇರೆ ವಾಹನಗಳು ಸಂಚರಿಸಲು ಕಷ್ಟಕರವಾಗಿದೆ. ಇದೇ ರಸ್ತೆಯ ಮೂಲಕ ಸುಮಾರು 20 ಗ್ರಾಮಗಳಿಗೆ ಸಂಚರಿಸಬೇಕಿದೆ. ಈ ಕಾರಣಗಳಿಂದ ಸುಮಾರು ವರ್ಷಗಳಿಂದ ಈ ರಸ್ತೆ ಅಗಲೀಕರಣ ಮಾಡಬೇಕೆಂಬುದು ಅನೇಕರ ಒತ್ತಾಯವಾಗಿತ್ತು.

ರಾಮಪಟ್ಟಣ ರಸ್ತೆಯ ಎರಡೂ ಕಡೆ 66 ಮನೆಗಳು ಮತ್ತು ಅಂಗಡಿಗಳು ಇದ್ದು, ಸುಮಾರು ಶೇ.80 ಮನೆಗಳು ಹಾಗೂ ಅಂಗಡಿಗಳು ರಸ್ತೆ ಅಗಲೀಕರಣದಲ್ಲಿ ಹೋಗುತ್ತವೆ. ಸುಮಾರು ವರ್ಷಗಳ ಹಿಂದೆಯೇ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಸರ್ವೇ ಮಾಡಿಸಿ ಮಾರ್ಕಿಂಗ್ ಹಾಕಲಾಗಿತ್ತು. ಇದೀಗ ಮತ್ತೊಮ್ಮೆ ಸರ್ವೇ ಮಾಡಿಸಿ ಅಗಲೀಕರಣ ಕಾರ್ಯ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಶಾಸಕರ ಮೊರೆಹೋದ ಸ್ಥಳೀಯರು:

ರಾಮಪಟ್ಟಣ ರಸ್ತೆಯಲ್ಲಿ ಆಸ್ತಿ ಕಳೆದುಕೊಳ್ಳುವಂಥವರು ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ಮೊರೆ ಹೋಗಿದ್ದಾರೆ. ಅವರ ಸ್ವಗೃಹದಲ್ಲಿ ಭೇಟಿಯಾದ ಸ್ಥಳೀಯರು 40 ಅಡಿಗಳಷ್ಟು ರಸ್ತೆ ಅಗಲೀಕರಣವಾದರೆ ನಮ್ಮ ಆಸ್ತಿ ಸಂಪೂರ್ಣವಾಗಿ ನಾಶವಾಗುತ್ತವೆ. ಇದರಿಂದ ನಮಗೆ ಕಷ್ಟವಾಗಲಿದೆ. ಆದ್ದರಿಂದ ಮಧ್ಯ ರಸ್ತೆಯಿಂದ 15 ಅಡಿ ರಸ್ತೆ ಅಗಲೀಕರಣ ಮಾಡಿ ನಮಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕರಿಗೆ ಮನವಿ ಪತ್ರ ನೀಡಿದ್ದಾರೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಶಾಸಕರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

----------

ಪಟ್ಟಣ ಪಂಚಾಯತಿ ವತಿಯಿಂದ ಈಗಾಗಲೇ ಸರ್ವೇ ಮಾಡಿಸಲಾಗಿದೆ. ಒಂದು ಕಡೆ 23 ಅಂಗಡಿಗಳು, ಇನ್ನೊಂದು ಕಡೆ 43 ಅಂಗಡಿಗಳು ರಸ್ತೆ ಅಗಲೀಕರಣದ ವೇಳೆ ಹೋಗುತ್ತವೆ. ಈ ಕುರಿತು ಶಾಸಕರೊಂದಿಗೆ ಚರ್ಚೆ ಮಾಡಿದ್ದು, ಅವರು ಒಟ್ಟು 40 ಅಡಿ ರಸ್ತೆ ಅಗಲೀಕರಣ ಮಾಡುವಂತೆ ತಿಳಿಸಿದ್ದಾರೆ. ಮತ್ತೊಮ್ಮೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸರ್ವೇ ಮಾಡಿಸಲು ಪತ್ರ ಬರೆಯಲಾಗಿದೆ. ಸರ್ವೇಕಾರ್ಯ ಮುಗಿದ ಕೂಡಲೇ ಮನೆ ಮಾಲೀಕರಿಗೆ ನೋಟಿಸ್ ನೀಡಿ ರಸ್ತೆ ಅಗಲೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ.

ಸಭಾ ಶಿರೀನ್, ಪ.ಪಂ ಮುಖ್ಯಾಧಿಕಾರಿ

Share this article