ಜ್ಞಾನದ ಬೆಳಕನ್ನು ತುಂಬುವವನೇ ನಿಜವಾದ ಗುರು: ಡಾ.ಮಾದೇಶ್ ಗುರೂಜಿ

KannadaprabhaNewsNetwork |  
Published : Jul 23, 2024, 12:45 AM IST
22ಕೆಎಂಎನ್ ಡಿ24 | Kannada Prabha

ಸಾರಾಂಶ

ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಸಮಾಜಮುಖಿಯಾಗಿ ಆಲೋಚಿಸಿ ಸಮಾಜದ ಒಳಿತನ್ನು ಬಯಸುವ ಜನರ ಸಂಖ್ಯೆಯು ಕಡಿಮೆಯಾಗುತ್ತಿರುವ ಇಂದಿನ ದಿನಮಾನದಲ್ಲಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಗುರುವಿನ ಮಾರ್ಗದರ್ಶವು ಅಗತ್ಯವಾಗಿ ಬೇಕಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅಜ್ಞಾನದ ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕನ್ನು ತುಂಬುವವನೇ ನಿಜವಾದ ಗುರು. ಸಮಾಜದಲ್ಲಿ ವಾಸಿಸುವ ಎಲ್ಲಾ ಜನರ ಕ್ಷೇಮವನ್ನು ಬಯಸುವ ಗುರುವಿನ ಕೃಪೆಗೆ ಪಾತ್ರರಾಗಿ ಧರ್ಮದ ಮಾರ್ಗದಲ್ಲಿ ಸಾಗಿ ಗುರಿ ಮುಟ್ಟಬೇಕು ಎಂದು ದೇವರೂರಿನ ಮಾನವ ಧರ್ಮ ಪೀಠಾಧಿಪತಿ ಸನಾತನ ಧರ್ಮ ರತ್ನಾಕರ ಡಾ.ಮಾದೇಶ್ ಗುರೂಜಿ ಕರೆ ನೀಡಿದರು.

ತಾಲೂಕಿನ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಸುಕ್ಷೇತ್ರದ ಪೀಠಾಧಿಪತಿ ಶ್ರೀರುದ್ರಮುನಿ ಸ್ವಾಮೀಜಿಗಳ ನೇತೃತ್ವದಲ್ಲಿ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಸತ್ಸಂಗ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಸಮಾಜಮುಖಿಯಾಗಿ ಆಲೋಚಿಸಿ ಸಮಾಜದ ಒಳಿತನ್ನು ಬಯಸುವ ಜನರ ಸಂಖ್ಯೆಯು ಕಡಿಮೆಯಾಗುತ್ತಿರುವ ಇಂದಿನ ದಿನಮಾನದಲ್ಲಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಗುರುವಿನ ಮಾರ್ಗದರ್ಶವು ಅಗತ್ಯವಾಗಿ ಬೇಕಾಗಿದೆ ಎಂದರು.

ಸಕಲರಿಗೂ ಕ್ಷೇಮವನ್ನೇ ಬಯಸುವ ಗುರುವು ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಜೊತೆಗೆ ದುಶ್ಚಟಗಳಿಂದ ಮುಕ್ತವಾದ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮಾರ್ಗದರ್ಶನ ನೀಡಿ ಮುನ್ನಡೆಸುತ್ತಿರುವ ಗುರುವಿನ ಕೃಪೆಯು ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಅಗತ್ಯವಾಗಿ ಬೇಕಾಗಿದೆ ಎಂದು ತಿಳಿಸಿದರು.

ಯುವಜನರು ಸಂಕಲ್ಪ ಮಾಡಿ ಗುರುಹಿರಿಯರು ಹಾಗೂ ತಂದೆ ತಾಯಿಗಳನ್ನು ಗೌರವಿಸುವ ಮನೋಭಾವನೆ ಯನ್ನು ಬೆಳೆಸಿಕೊಂಡು ಗುರುವು ತೋರಿಸಿಕೊಟ್ಟ ಮಾರ್ಗದಲ್ಲಿ ಸಾಗಿ ಗುರಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಪಂಚಭೂತೇಶ್ವರ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ಗುರುವು ಪರಮಾತ್ಮನ ಪ್ರತಿಬಿಂಬವಾಗಿದ್ದು ನಾವೆಲ್ಲರೂ ಸನ್ಮಾರ್ಗದಲ್ಲಿ ಮುನ್ನಡೆಯಲು ದಾರಿ ದೀಪವಾಗಿ ಕೆಲಸ ಮಾಡುತ್ತಿದ್ದಾನೆ ಎಂದರು.

ಕಾರ್ಯಕ್ರಮದಲ್ಲಿ ಬೆಡದಹಳ್ಳಿ ಪಂಚಭೂತೇಶ್ವರ ಮಠ ಟ್ರಸ್ಟ್ ಕಾರ್ಯದರ್ಶಿ ಕಾಂತರಾಜು, ಖಜಾಂಚಿ ಮಹೇಶ್, ಕಾಡುಮೆಣಸ ಚಂದ್ರು, ಕಿಕ್ಕೇರಿರಾಜು, ಸಿದ್ದಾಪುರ ಉಮೇಶ್, ಶ್ಯಾರಹಳ್ಳಿ ಗೋವಿಂದರಾಜು ಸೇರಿದಂತೆ ಕುಂದೂರು, ಸಂತೆಬಾಚಹಳ್ಳಿ, ಹುಣಸೂರು, ಮಳವಳ್ಳಿ, ಬೆಂಗಳೂರು ಭಾಗದಿಂದ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ