ಹಸಿವು, ನೀರಡಿಕೆ ತಣಿಸುವುದೇ ನಿಜವಾದ ಮಾನವ ಧರ್ಮ

KannadaprabhaNewsNetwork | Published : Apr 4, 2025 12:48 AM

ಸಾರಾಂಶ

ಚಿತ್ರದುರ್ಗದ ಉಜ್ಜಯಿನಿ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಿಂಗೈಕ್ಯ ಮರುಳಾರಾಧ್ಯ ಶಿವಾಚಾರ್ಯ ಮಹಾ ಭಗವತ್ಪಾದಕರ 30ನೇ ವರ್ಷದ ಪುಣ್ಯ ಸ್ಮರಣೋತ್ಸವವನ್ನುಮಳೆ ಮಲ್ಲಿಕಾರ್ಜುನ ಶಿ್ವಾಚಾರ್ಯ ಶ್ರೀ ಉದ್ಘಾಟಿಸಿದರು.

ಉಜ್ಜಯಿನಿ ಶ್ರೀಗಳ ಸ್ಮರಣೋತ್ಸವದಲ್ಲಿ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಅಭಿಮತಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹಸಿದವರಿಗೆ ಅನ್ನ, ನೀರಡಿಕೆಯಾದವರಿಗೆ ನೀರು, ಬಿಸಿಲಿನಲ್ಲಿ ಬಳಲಿದವರಿಗೆ ನೆರಳು ನೀಡುವುದು ನಿಜವಾದ ಧರ್ಮವಾಗಿದೆ. ಇಂತಹ ನಡವಳಿಕೆ ಭವಿಷ್ಯದಲ್ಲಿ ನಮ್ಮನ್ನು ಕಾಯುತ್ತದೆ ಎಂದು ಲಕ್ಷ್ಮೇಶ್ವರದ ಕರೇವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜನ ಶಿವಾಚಾರ್ಯ ಶ್ರೀಗಳು ಹೇಳಿದರು.

ನಗರದ ಉಜ್ಜಯಿನಿ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಿಂಗೈಕ್ಯ ಮರುಳಾರಾಧ್ಯ ಶಿವಾಚಾರ್ಯ ಮಹಾ ಭಗವತ್ಪಾದಕರ 30ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದ ಜನ ಜಾಗೃತಿ ಹಾಗೂ ಧರ್ಮ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಮಾನವೀಯತೆಯೇ ನಿಜವಾದ ಮಾನವ ಧರ್ಮ ಎಂದರು.

ಮರುಳಾಧ್ಯ ಶ್ರೀಗಳು ತಮ್ಮ ಜೀವನವನ್ನೇ ಮಠಕ್ಕೆ ಸವೆಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಪಟ್ಟಾಧಿಕಾರ ವಹಿಸಿಕೊಂಡು ಉತ್ತಮ ಕಾರ್ಯ ಮಾಡಿದ್ದಾರೆ. ಇಲ್ಲಿದ್ದ ಕರಿ ಹಂಚಿನ ಮನೆಯನ್ನು ಒಂದು ಸುಸಜ್ಜಿತ ಕಲ್ಯಾಣ ಮಂಟಪವನ್ನಾಗಿ ಮಾಡಿದರು. ವಿವಿಧ ಮಠಗಳಿಗೆ ವಟುಗಳ ನೀಡಿದರು. ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಲ್ಲಿ ಶ್ರೀಗಳ ಪಾತ್ರ ಮಹತ್ವದಾಗಿದೆ ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಬೀದರ್ ಜಿಲ್ಲೆಯ ಎಣುಕಲ್ಲುಗಡ್ಡೆಯ ವೀರಭದ್ರ ಶ್ರೀಗಳು ಮಾತನಾಡಿ, ಚಿತ್ರದುರ್ಗ ಗಂಡು ಮೆಟ್ಟಿನ ನಾಡಾಗಿದೆ. ಹೊರ ರಾಷ್ಟ್ರದಲ್ಲಿಯೂ ಸಹಾ ಇದಕ್ಕೆ ಹೆಸರಿದೆ. ಒನಕೆ ಓಬವ್ವ, ಮದಕರಿ ನಾಯಕ, ಸೇರಿದಂತೆ ವಿವಿಧ ಮಠಗಳಿವೆ. ಇಲ್ಲಿನ ಉಜ್ಜಯಿನಿ ಮಠ ಅಭಿವೃದ್ದಿ ಪಡಿಸಲು ಲಿಂಗೈಕ್ಯ ಶ್ರೀಗಳು ತಮ್ಮ ಜೀವನವನ್ನೇ ಸವೆಸಿದರು. ತುಂಬ ಹಳೆಯದಾಗಿದ್ದ ಈ ಮಠವನ್ನು ಉನ್ನತ ಮಟ್ಟಕ್ಕ ತೆಗೆದುಕೊಂಡು ಹೋದರು. ಶಾಲೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಮಕ್ಕಳಿಗೆ ಅಕ್ಷರ ದಾಸೋಹ ಕಲ್ಬಿಸಿದರೆಂದು ಶ್ಲಾಘಿಸಿದರು.

ಚಿತ್ರದುರ್ಗದಲ್ಲಿ ಅಂದಿನ ದಿನಗಳಲ್ಲಿ ಪಂಚಚಾರ್ಯ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಯಾವುದೇ ಅಡೇ ತಡೆ ಇಲ್ಲದೆ ನೆರವರೇಸಲಾಗಿತ್ತು. ಇದರ ಅಂಗವಾಗಿ ನಗರದಲ್ಲಿ ಪಂಚಚಾರ್ಯ ಕಲ್ಯಾಣ ಮಂಟಪ ನಿರ್ಮಿಸಲಾಯಿತು. ಉಜ್ಜಯಿನಿ ಪೀಠ ವಿದ್ವತ್ತಿನ ಪೀಠವಾಗಿದೆ. ಇಲ್ಲಿ ಅಭ್ಯಾಸ ಮಾಡಿದವರು ಉನ್ನತ ಸ್ಥಾನದಲ್ಲಿದ್ದಾರೆ. ಮಠದಿಂದ ಘಟ ಬೆಳೆಯಬಾರದು, ಘಟದಿಂದ ಮಠ ಬೆಳೆಯಬೇಕಿದೆ. ಇಂದಿನ ದಿನಮಾನದಲ್ಲಿ ಮಠದ ಆಸ್ತಿ ನೋಡಿ ಸ್ವಾಮಿಗಳಾಗುವವರಿದ್ದಾರೆ ಎಂದರು.

ಉಜ್ಜಯನಿ ಮಠದ ನಿಯೋಜಿತ ಉತ್ತರಾಧಿಕಾರಿ ಅಭೀಷೇಕದೇವರು, ಜಂಗಮ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜನಯ್ಯ, ನ್ಯಾಯವಾದಿ ಕೆ.ಎನ್.ವಿಶ್ವನಾಥಯ್ಯ, ಉಜ್ಜಯಿನಿ ಮಠದ ಕಾರ್ಯದರ್ಶಿ ಯು.ಎಂ.ಆರ್ ಈಶ್ವರ ಪ್ರಸಾದ್ ಇದ್ದರು. ವಟುಗಳಿಗೆ ಲಿಂಗದೀಕ್ಷಾ (ಅಯ್ಯಚಾರ) ಕಾರ್ಯಕ್ರಮ ನಡೆದವು. ಗಂಜಿಗಟ್ಟೆ ಕೃಷ್ಣಮೂರ್ತಿಯವರಿಂದ ಜನಪದ ಗೀತೆಗಳ ಗಾಯನ ಹಾಗೂ ಹಾಸ್ಯ ಸಾಹಿತಿ ಜಗನ್ನಾಥ್ ರವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಆಶಾ ಸುದರ್ಶನ ಪ್ರಾರ್ಥಿಸಿದರೆ, ಶಿಲ್ಪ ಸ್ವಾಗತಿಸಿದರು. ಜಲಜಾಕ್ಷಿ ಪ್ರಾಸ್ತಾವಿಕ ಮಾತನಾಡಿದರು.

Share this article