ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿ ವರ್ಗದವರು ಅನ್ನದಾತರ ಕಣ್ತಪ್ಪಿಸಿ ಸಭೆ ನಡೆಸುತ್ತಿರುವ ವಿಷಯ ತಿಳಿದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ರೈತ, ಕನ್ನಡಪರ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಒಳನುಗ್ಗಿದರು. ಈ ಸಮಯದಲ್ಲಿ ವಿದ್ಯಾರ್ಥಿಗಳು ಸಭೆಯಿಂದ ಹೊರನಡೆದರು. ಆಗ ರೈತರು ಜಲಮಂಡಳಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆ ತೆಗೆದುಕೊಂಡರು. ರೈತರ ಆಕ್ರೋಶ ಎದುರಿಸಲಾಗದೆ ಜಲಮಂಡಳಿ ಅಧಿಕಾರಿಗಳು ತಬ್ಬಿಬ್ಬಾದರು.
ಸಭೆಯನ್ನು ಬಹಿಷ್ಕರಿಸಿ ಬೆಂಗಳೂರಿನಿಂದ ಆಗಮಿಸಿದ್ದ ಮೂವರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸಭೆ ಬಿಟ್ಟು ಹೋಗಲು ಅಧಿಕಾರಿಗಳ ಯತ್ನಿಸಿದಾಗ ರೈತರು ಅವರನ್ನು ತಡೆದು, ಯಾರು ನೀವು, ನಿಮ್ಮನ್ನು ಇಲ್ಲಿಗೆ ಕಳುಹಿಸಿದವರು ಯಾರು ಎಂಬ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ಗಾಬರಿಯಿಂದ ಅಧಿಕಾರಿಗಳು ಉತ್ತರಿಸಲು ತಿಣುಕಾಡಿದರು. ಕೊನೆಗೆ ರೈತರೇ ಆರನೇ ಹಂತದ ಕುಡಿಯುವ ನೀರಿನ ಯೋಜನೆಗೆ ಸರ್ವಾನುಮತದ ವಿರೋಧವಿರುವುದಾಗಿ ನಿರ್ಣಯ ಬರೆಸಿ ಅಧಿಕಾರಿಗಳಿಂದ ಸಹಿ ಹಾಕಿಸಿ ಜಿಲ್ಲಾಧಿಕಾರಿ ಕಚೇರಿಯಿಂದ ಓಡಿಸಿದರು.ಏನಾಯ್ತು?
ಅದಕ್ಕಾಗಿ ಬೆಂಗಳೂರಿನ ಜಲಮಂಡಳಿ ಅಧಿಕಾರಿಗಳನ್ನು ಮಂಡ್ಯಕ್ಕೆ ಕಳುಹಿಸಿ ಅವರ ಅಧ್ಯಕ್ಷತೆಯಲ್ಲಿ ರೈತರು, ಪ್ರಗತಿಪರರ ಸಭೆ ಕರೆದಿದ್ದರು. ಆದರೆ, ಸಭೆಗೆ ರೈತರ ಸೋಗಿನಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ರಹಸ್ಯವಾಗಿ ಸಭೆ ನಡೆಸುತ್ತಿದ್ದರು.
ನಂತರ ಬೆಂಗಳೂರಿನಿಂದ ಬಂದಿದ್ದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ರೈತರು, ಸಭೆಗೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ಗೈರು ಹಾಜರಾಗಿದ್ದರೂ ಸಭೆಯನ್ನು ನಡೆಸುವುದಕ್ಕೆ ನಿಮಗೆ ಅನುಮತಿ ನೀಡಿದವರು ಯಾರು?. ವಿದ್ಯಾರ್ಥಿಗಳನ್ನು ಕರೆತಂದು ಸಭೆ ನಡೆಸುವುದಕ್ಕೆ ನಾಚಿಕೆಯಾಗುವುದಿಲ್ಲವೇ?. ಮಾನ-ಮರ್ಯಾದೆ ಇದೆಯೇನ್ರೀ ನಿಮಗೆ ಎಂದೆಲ್ಲಾ ವಾಗ್ದಾಳಿ ನಡೆಸಲು ಆರಂಭಿಸಿದರು. ಜಿಲ್ಲಾಧಿಕಾರಿ ಇಲ್ಲದೆ ಹೇಗೆ ಸಭೆ ಮಾಡುತ್ತಿದ್ದೀರಿ ಎಂದು ಸಭೆಯಲ್ಲಿ ಹಾಕಿದ್ದ ಬ್ಯಾನರ್ ಕಿತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡರ ಪ್ರಶ್ನೆಗೆ ಉತ್ತರಿಸಲಾಗದೆ ಅಧಿಕಾರಿಗಳು ತಡವರಿಸಿದರು.
ಬೆಂಗಳೂರು ೬ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ನೀವು ಈ ಯೋಜನೆ ಮಾಡಬಾರದು. ರೈತರಿಂದ ಆರನೇ ಹಂತದ ಕುಡಿಯುವ ನೀರಿನ ಯೋಜನೆಗೆ ಸಂಪೂರ್ಣ ವಿರೋಧ ವ್ಯಕ್ತವಾಗಿದ್ದು, ಯೋಜನೆ ಕೈಬಿಡುವಂತೆ ಒತ್ತಾಯಿಸಿರುವುದಾಗಿ ನಿರ್ಣಯ ಮಾಡುವಂತೆ ರೈತರು ಅಧಿಕಾರಿಗಳ ಬಳಿ ಪಟ್ಟು ಹಿಡಿದು ಸಹಿ ಹಾಕಿಸಿದರು. ನಂತರ ರೈತರ ಆಕ್ರೋಶಕ್ಕೆ ಹೆದರಿ ತಬ್ಬಿಬ್ಬಾದ ಅಧಿಕಾರಿಗಳು ಸಭೆಯಿಂದ ಓಡಿಹೋಗುವುದಕ್ಕೆ ಮುಂದಾದರು. ಆಗ ರೈತರು ೬ನೇ ಹಂತದ ಕುಡಿಯುವ ನೀರು ಯೋಜನೆ ಅಧಿಕಾರಿಗಳಿಗೆ ಗೋ ಬ್ಯಾಕ್ ಘೋಷಣೆ ಕೂಗಿದರು.
ಈ ಸಮಯದಲ್ಲಿ ರೈತ ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಕೆ.ಬೋರಯ್ಯ, ಮುದ್ದೇಗೌಡ, ಶಿವಳ್ಳಿ ಚಂದ್ರಶೇಖರ್, ಕನ್ನಡಪರ ಸಂಘಟನೆಗಳ ಮುಖಂಡರಾದ ಹೆಚ್.ಸಿ.ಮಂಜುನಾಥ್, ಎಂ.ಬಿ.ನಾಗಣ್ಣಗೌಡ, ಹೆಚ್.ಡಿ.ಜಯರಾಂ, ದಸಂಸ ಮುಖಂಡ ಎಂ.ವಿ.ಕೃಷ್ಣ ಹಾಗೂ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಪ್ರಗತಿಪರ ಸಂಘಟನೆಗಳ ಮುಖಂಡರು ಹಾಜರಿದ್ದರು.ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಸಾರ್ವಜನಿಕ ಅಹವಾಲಿನ ಸಭೆ ನಡೆಸುವುದಾಗಿ ಹೇಳಿ ಆ.೧೯ರಂದು ಪ್ರಕಟಣೆ ಹೊರಡಿಸಿ ಪತ್ರಿಕೆಯೊಂದಕ್ಕೆ ಜಾಹೀರಾತು ನೀಡಿರುವುದನ್ನು ಈಗ ತೋರಿಸುತ್ತಿದ್ದಾರೆ. ಸಭೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಸಾರ್ವಜನಿಕ ಅಭಿಪ್ರಾಯ ಸಭೆ ನಡೆಯುವ ವಿಧಿ-ವಿಧಾನದನ್ವಯ ಸಭೆ ನಡೆಸಿಲ್ಲ. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೇರಿದಂತೆ ಎಲ್ಲಾ ಸಂಘಟನೆಗಳು ಸಭೆಯನ್ನು ಬಹಿಷ್ಕರಿಸಿದ್ದೇವೆ. ೭೫೦೦ ಕೋಟಿ ರು. ವೆಚ್ಚದ ಆರನೇ ಹಂತದ ಕುಡಿಯುವ ನೀರಿನ ಯೋಜನೆಗೆ ಆರಂಭದಿಂದಲೂ ವಿರೋಧಿಸಿಕೊಂಡು ಬಂದಿದ್ದೇವೆ. ವಸ್ತುಸ್ಥಿತಿಯನ್ನೂ ವಿವರಿಸಿದ್ದೇವೆ. ಕೆಆರ್‌ಎಸ್ ಅಣೆಕಟ್ಟೆಯ ನೀರು ಕೃಷಿ ಉದ್ದೇಶಕ್ಕೆ ಸೀಮಿತಗೊಳಿಸಬೇಕು. ಕೃಷಿಗೆ ಮಾರಕವಾಗುವ ಯೋಜನೆಯನ್ನು ಕೈಬಿಡಲೇಬೇಕು.
ಜಲಾಶಯದ ಡೆಡ್‌ಸ್ಟೋರೇಜ್ ನೀರಿಗೇ ಕೈ ಹಾಕಿರುವ ಯೋಜನೆ ಇದು. ೭೫೦೦ ಕೋಟಿ ರು. ಯೋಜನೆ ಬೆಂಗಳೂರಿಗೆ ಕುಡಿಯುವ ನೀರು ಕೊಡುವುದಕ್ಕಿಂತ ಕಮಿಷನ್ ಮೇಲೆ ಕಣ್ಣು ಬಿದ್ದಿದೆ. ಐದನೇ ಹಂತದ ಯೋಜನೆಯವರೆಗೆ ಬೆಂಗಳೂರಿಗೆ ನೀರು ಪೂರೈಸಲಾಗುತ್ತಿದೆ. ಆರನೇ ಹಂತ ಕೈಬಿಟ್ಟು ಕುಡಿಯುವ ನೀರಿಗೆ ಪರ್ಯಾಯ ಜಲಮೂಲ ಹುಡುಕಿಕೊಳ್ಳಲಿ. ಆರನೇ ಹಂತದ ಈ ಯೋಜನೆ ಜಾರಿಯಾದರೆ ಜಿಲ್ಲೆಯ ರೈತರು ಒಂದು ಬೆಳೆಯನ್ನೂ ಬೆಳೆಯಲಾಗುವುದಿಲ್ಲ. ಕುಡಿಯುವ ನೀರನ್ನು ಪೂರೈಸುವ ಟ್ಯಾಂಕಾಗಿ ಕೆಆರ್‌ಎಸ್ ಪರಿವರ್ತನೆಯಾಗಲಿದೆ. ಇದರಿಂದ ಕೃಷಿ ಬದುಕು ಸಂಪೂರ್ಣ ನಾಶವಾಗಲಿದೆ. ಇದಕ್ಕೆ ನಾವೆಂದಿಗೂ ಅವಕಾಶ ನೀಡುವುದಿಲ್ಲ.
- ಅಧಿಕಾರಿಗಳಿಗೆ ತೀವ್ರ ತರಾಟೆ; ತುಟಿಬಿಚ್ಚದೆ ಓಡಿಹೋದ ಅಧಿಕಾರಿ ವರ್ಗ
- ಆರನೇ ಹಂತದ ಕುಡಿವ ನೀರಿನ ಯೋಜನೆ ಸಂಬಂಧ ಸಭೆ: ಡೀಸಿ ಗೈರು