ಘಟಕಗಳು ಸ್ತಬ್ಧ, ಶುದ್ಧ ಕುಡಿವ ನೀರಿಗೆ ತತ್ವಾರ!

KannadaprabhaNewsNetwork |  
Published : May 11, 2026, 04:00 AM IST
ಜನತಾ ಪ್ಲಾಟ್ ನಲ್ಲಿ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕ. | Kannada Prabha

ಸಾರಾಂಶ

ಅಭಿವೃದ್ಧಿ ಹೆಸರಿನಲ್ಲಿ ಮಾನವನ ಚಟುವಟಿಕೆಗಳಿಂದ ಅಂತರ್ಜಲ ಕಲುಷಿತಗೊಂಡು ಜನರು ಶುದ್ಧ ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ. ಅಂತರ್ಜಲದಲ್ಲಿ ಫ್ಲೋರೈಡ್‌ ಅಂಶ ಹೆಚ್ಚಳವಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಣ ಇದ್ದವರು ಮಿನರಲ್‌ ವಾಟರ್‌ಗಳ ಮೊರೆ ಹೋಗಿದ್ದಾರೆ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಅಭಿವೃದ್ಧಿ ಹೆಸರಿನಲ್ಲಿ ಮಾನವನ ಚಟುವಟಿಕೆಗಳಿಂದ ಅಂತರ್ಜಲ ಕಲುಷಿತಗೊಂಡು ಜನರು ಶುದ್ಧ ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ.

ಅಂತರ್ಜಲದಲ್ಲಿ ಫ್ಲೋರೈಡ್‌ ಅಂಶ ಹೆಚ್ಚಳವಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಣ ಇದ್ದವರು ಮಿನರಲ್‌ ವಾಟರ್‌ಗಳ ಮೊರೆ ಹೋಗಿದ್ದಾರೆ. ಆದರೆ ಬಡವರು ನೀರು ಕೊಳ್ಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಶುದ್ಧ ನೀರು ಒದಗಿಸಲು ಸರ್ಕಾರ ಲಕ್ಷಾಂತರ ವೆಚ್ಚ ಮಾಡಿ ರಾಜ್ಯಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ.

ಲೋಕಾಪುರ ಪಟ್ಟಣದಲ್ಲಿಯೂ ಮೂರು ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಮೊದಮೊದಲು ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು. ಕೇವಲ ₹2 ಹಾಕಿದರೆ ಜನರು ಶುದ್ಧ ಕುಡಿಯುವ ನೀರು ಪಡೆಯುತ್ತಿದ್ದರು. ಆದರೆ, ಆರಂಭದ ಶೂರತ್ವ ಪ್ರದರ್ಶಿಸಿದ ಅಧಿಕಾರಿಗಳು ನಂತರದಲ್ಲಿ ತೋರಿಸಿದ ನಿರ್ಲಕ್ಷ್ಯದ ಪರಿಣಾಮ ನಿರ್ವಹಣೆ ಕೊರತೆಯಿಂದಾಗಿ ಈ ಘಟಕಗಳು ಸ್ಥಗಿತಗೊಂಡಿದ್ದು ದುರಸ್ತಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ.

ಪಟ್ಟಣದ ಮೂರು ಕಡೆ ಪಪಂ ವ್ಯಾಪ್ತಿಯ ಜನತಾ ಪ್ಲಾಟ್, ದೇಸಾಯಿ ವಾಡೆ, ವೆಂಕಟಾಪುರಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಈ ಮೂರೂ ಶುದ್ಧ ನೀರಿನ ಘಟಕಗಳು ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿವೆ. ಘಟಕಗಳನ್ನು ನಿರ್ಮಾಣ ಮಾಡಿ ೫ ವರ್ಷಗಳು ಗುತ್ತಿಗೆದಾರ ನಿರ್ವಹಣೆ ಮಾಡಬೇಕಿತ್ತು. ಐದು ವರ್ಷಗಳ ಅವಧಿ ಮುಗಿದು ಸಂಬಂಧಿಸಿದ ಪಟ್ಟಣ ಪಂಚಾಯತಿಗಳಿಗೆ ಹಸ್ತಾಂತರ ಮಾಡಲಾಗಿದೆ. ಆದರೆ ಪಟ್ಟಣ ಪಂಚಾಯಿತಿಯವರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಅವು ಪಾಳು ಬಿದ್ದಿವೆ. ಜನರು ಶುದ್ಧ ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಪಟ್ಟಣದಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಇರುವುದನ್ನು ಗಮನಿಸಿದ ಪಟ್ಟಣ ಪಂಚಾಯತಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಇವು ಇದ್ದೂ ಇಲ್ಲದಂತಾಗಿದೆ. ಈ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಶುದ್ಧ ನೀರಿನ ಘಟಕಗಳ ಕಡೇ ತಿರುಗಿ ನೋಡುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಘಟಕಗಳನ್ನು ದುರಸ್ತಿ ಮಾಡಿ ಅನುಕೂಲ ಮಾಡಿಕೊಡಬೇಕಿದೆ.

ಖಾಸಗಿಯವರಿಗೆ ಜಾಕ್‌ಪಾಟ್‌:

ಪಟ್ಟಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿರುವುದರಿಂದ ಜನರು ಅನಿವಾರ್ಯವಾಗಿ ಖಾಸಗಿ ನೀರು ಪೂರೈಕೆದಾರರ ಮೊರೆ ಹೋಗಿದ್ದಾರೆ. ಸರ್ಕಾರ ಘಟಕಗಳಲ್ಲಿ ₹2 ಕ್ವಾಯಿನ್‌ ಹಾಕಿದರೆ ಕ್ಯಾನ್‌ ನೀರು ಸಿಗುತ್ತಿತ್ತು. ಆದರೆ ಖಾಸಗಿಯವರು ಒಂದು ಕ್ಯಾನ್‌ ನೀರನ್ನು 10 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ನೀರು ಮಾರಾಟ ಒಂದು ದಂದೆಯಾಗಿ ಪರಿಣಮಿಸಿದೆ.

ಲೋಕಾಪುರ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸದೇ ಬಂದ್‌ ಆಗಿವೆ. ಶುದ್ಧ ಕುಡಿಯುವ ನೀರು ಬೇಕಾದರೆ ಖಾಸಗಿಯವರ ಬಳಿ ಹಣ ಕೊಟ್ಟು ಖರೀದಿಸಬೇಕಾಗಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಿದರೆ ಕೇವಲ ೨ ರೂ.ಗಳಲ್ಲಿ ಜನರಿಗೆ ಶುದ್ಧ ನೀರು ಸಿಗಲಿದೆ. ಅಧಿಕಾರಿಗಳು ಇತ್ತ ಗಮನ ಹರಿಸಬೇಕು.

- ಈಶ್ವರ ಹವಳಖೋಡ, ಸಾರ್ವಜನಿಕರು

ಲೋಕಾಪುರ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಸಮಸ್ಯೆಗಳನ್ನು ಬೇಗನೆ ಪರಿಹರಿಸಿ ಇತ್ಯರ್ಥಗೊಳಿಸಲಾಗುವುದು, ಸಾರ್ವಜನಿಕರ ಕಷ್ಟಕ್ಕೆ ಸ್ಪಂದನೆ ನೀಡುತ್ತೇನೆ.

-ಸಾಬಣ್ಣಾ ಪೂಜಾರ, ಪಪಂ ಮುಖ್ಯಾಧಿಕಾರಿ, ಲೋಕಾಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಮಿಕರ ಮಕ್ಕಳಿಗೆ ಶ್ರಮಿಕ ವಸತಿ ಶಾಲೆ ಮಂಜೂರು: ಶಾಸಕ ಜೆ.ಟಿ. ಪಾಟೀಲ
ದೇಶದ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ: ಸಚಿವ ಶಿವಾನಂದ ಪಾಟೀಲ