ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಅಖಂಡ ವೀರಶೈವ ಸಮಾಜಕ್ಕೆ ಪ್ರಾಚೀನ ಕಾಲದ ಇತಿಹಾಸವಿದೆ. ಇಂತಹ ಅಪಾರ ಜ್ಞಾನ, ಸಂಪತ್ತು ಹೊಂದಿರುವ ಸಮಾಜವನ್ನು ಕೆಲ ಸ್ವಾರ್ಥ ಮನಸ್ಸುಳ್ಳವರು ಒಡೆದು ಆಳುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಆರೋಪಿಸಿದರು.ಪಟ್ಟಣದ ಹೊರವಲಯದಲ್ಲಿ ಉತ್ತಂಗಿ ಕಬ್ಬಿಣ ಕಂತಿ ಮಠದ ಶಾಂತಮ್ಮ ವೀರಯ್ಯ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಎಂ. ಹಾಲಯ್ಯ ಶಾಸ್ತ್ರಿಯವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಈ ವೀರಶೈವ ಧರ್ಮವನ್ನೆ ಅನುಕರಣೆ ಮಾಡುತ್ತಾ ಬಂದಿರುವ ಸಮಾಜದವರು ಇಂದು ಮೂಲ ಧರ್ಮವನ್ನು ಮರೆತು ಕವಲು ದಾರಿಯಲ್ಲಿ ವಿಭಾಗವಾಗುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.ಸರ್ವ ಧರ್ಮಗಳ ಶ್ರೇಯಸ್ಸನ್ನು ಬಯಸುವ ಏಕೈಕ ಧರ್ಮವೆಂದರೆ ಅದು ವೀರಶೈವ ಲಿಂಗಾಯತ ಧರ್ಮವಾಗಿದೆ. ಅಖಂಡ ವೀರಶೈವ ಲಿಂಗಾಯತ ಧರ್ಮದ ಉಳಿವಿಗಾಗಿ ಮಠಾಧೀಶರ ಜೊತೆಗೆ ಸಮಾಜದ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಗಟ್ಟಿ ಧ್ವನಿ ಎತ್ತುವ ಅಗತ್ಯವಿದೆ. ಲಿಂಗಾಯತ ಧರ್ಮದಲ್ಲಿ ಎಷ್ಟೇ ಉಪ ಜಾತಿಗಳಿದ್ದರು ವೀರಶೈವ ಲಿಂಗಾಯತ ಧರ್ಮ ಒಂದೇ, ಈ ಧರ್ಮವನ್ನು ಬಸವಣ್ಣನವರೇ ಒಪ್ಪಿ ಮುಂದುವರೆದು ಸಾಗಿದ್ದನ್ನು ಸ್ಮರಿಸಿದರು.
ಮುಂಬರುವ ಸೆಪ್ಟಂಬರ್ ತಿಂಗಳಿನಲ್ಲಿ ಜಾತಿಗಣತಿ ಸಮೀಕ್ಷೆ ನಡೆಸಲಾಗುತ್ತಿದ್ದು, ಆ ವೇಳೆ ಎಲ್ಲಾ ಉಪ ಪಂಗಡದವರು ಕೂಡ ವೀರಶೈವ ಲಿಂಗಾಯತ ಎಂದು ಕಾಲಂನಲ್ಲಿ ನಮೂದಿಸಬೇಕು ಎಂದು ಸೂಚಿಸಿದರು.ಸ್ಥಳೀಯ ತೆಗ್ಗಿನಮಠ ಸಂಸ್ಥಾನದ ಪೀಠಾಧಿಪತಿ ವರಸಧ್ಯೋಜಾತ ಸ್ವಾಮೀಜಿ, ಹಂಪಾಸಾಗರದ ನವಲಿ ಹಿರೇಮಠ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿ, ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ವೀರಶೈವ ಮಹಾಸಬಾ ತಾಲೂಕು ಅಧ್ಯಕ್ಷ ಎಂ.ರಾಜಶೇಖರ, ಎಸ್.ಎಂ. ಚಂದ್ರಶೇಖರಯ್ಯ, ಎಸ್.ಎಂ .ಸಧ್ಯೋಜಾತಯ್ಯ, ಚಿರಸ್ತಹಳ್ಳಿಯ ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ, ಎಸ್.ಎ. ವೀರಭದ್ರಯ್ಯ, ಕೆ.ಎಂ. ವೀರಯ್ಯ, ಕೆ.ಎಂ. ವೀರಮ್ಮ, ಕೆ.ಎಂ. ಬಸವರಾಜಯ್ಯ ಹಾಗೂ ಇತರರಿದ್ದರು.ಕೆ.ಎಂ. ಭಾರತಿ, ಕೆ.ಎಂ. ಚನ್ನಯ್ಯ, ರೂಪನಂದ ಸ್ವಾಮಿ, ಕೆ.ಎಂ. ಸಚಿನ್, ನಂದಿಹಳ್ಳಿ ಚನ್ನಯ್ಯ, ಎಸ್.ಎಂ. ಆಶಾ, ಪಿ. ಬಸವರಾಜ್, ಬೆನ್ನೂರು ಶಶಿಧರ ಹಾಗೂ ಇತರರಿದ್ದರು.