ಕಾರವಾರ:
ರಾಜ್ಯ ವಿಧಾನಸಭೆ ಚುನಾವಣಾ ಸೋಲಿನಿಂದ ನಿರಾಶರಾಗಿದ್ದ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು, ಮುಖಂಡರಿಗೆ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಡ ರಾಜ್ಯಗಳಲ್ಲಿನ ಭಾರಿ ಗೆಲುವು ಹೊಸ ಉತ್ಸಾಹ ಮೂಡಿಸಿದೆ.ಮೂರು ರಾಜ್ಯಗಳಲ್ಲಿ ಪಕ್ಷ ಜಯಭೇರಿ ಬಾರಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪಟಾಕ್ಷಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ, ವಿಜಯೋತ್ಸವ ಆಚರಿಸಿದರು. ರಾಜ್ಯದಲ್ಲಿ ಅನುಭವಿಸಿದ ಸೋಲಿನಿಂದ ಬೇಸರದ ಮೂಡ್‌ನಿಂದ ಮೊದಲ ಬಾರಿಗೆ ಹೊರಬಂದರು.
ಚುನಾವಣಾ ಸಮೀಕ್ಷೆ ಏನೇ ಹೇಳಿದರೂ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಗೆಲ್ಲುವ ವಿಶ್ವಾಸ ಇತ್ತು. ಆದರೆ 2018ರಲ್ಲಿ ಜಿಲ್ಲೆಯಲ್ಲಿ ನಾಲ್ವರು ಬಿಜೆಪಿ ಶಾಸಕರಿದ್ದರೆ, 2023ರಲ್ಲಿ ನಡೆದ ಚುನಾವಣೆಯಲ್ಲಿ ಆ ಬಲ ಕೇವಲ ಎರಡು ಸ್ಥಾನಕ್ಕೆ ಇಳಿಯಿತು. ಜತೆಗೆ ಬಿಜೆಪಿಯ ಫೈಯರ್ ಬ್ರಾಂಡ್ ಸಂಸದ ಅನಂತಕುಮಾರ ಹೆಗಡೆ ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದರು. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಸಹ ಪಕ್ಷದೊಂದಿಗಿನ ಅಸಮಾಧಾನದಿಂದ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡರು. ಇದರಿಂದ ಬಿಜೆಪಿ ವಲಯದಲ್ಲಿ ನಿರಾಶೆ ಮಡುಗಟ್ಟಿತ್ತು. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಗೆ ಸ್ವತಃ ನರೇಂದ್ರ ಮೋದಿ ಆಗಮಿಸಿ ಪ್ರಚಾರ ಸಭೆ ನಡೆಸಿದ್ದರೂ ಪಕ್ಷದ ನಾಲ್ವರು ಅಭ್ಯರ್ಥಿಗಳು ಸೋಲನ್ನು ಅನುಭವಿಸಿದ್ದು ಕಾರ್ಯಕರ್ತರ ಹತಾಶೆಗೆ ಕಾರಣವಾಗಿತ್ತು.ಮುಖ್ಯವಾಗಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದವರು ಸ್ವಪಕ್ಷೀಯರ ವಿರುದ್ಧವೇ ತಿರುಗಿಬಿದ್ದರು. ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ಅಲ್ಪ ಮತಗಳಿಂದ ಗೆಲುವು ಸಾಧಿಸಬೇಕಾಯಿತು. ಸ್ವಲ್ಪ ಯಾಮಾರಿದ್ದರೆ ಸೋಲನ್ನೇ ಕಾಣುತ್ತಿದ್ದೆವು ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳೂ ಸಹ ತಮ್ಮ ಪಕ್ಷದವರು ಕಾಲು ಎಳೆದಿದ್ದೇ ಸೋಲಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷ ವಿರೋಧಿ ಚಟುವಟಿಕೆಯ ಬಗ್ಗೆ ಪಕ್ಷದ ವರಿಷ್ಠರಿಗೆ ದೂರುಗಳು ಸಹ ಸಲ್ಲಿಕೆಯಾಗಿದ್ದರಿಂದ ಪಕ್ಷ ಕೆಲವರನ್ನು ಪದಾಧಿಕಾರಿ ಹುದ್ದೆಯಿಂದ ಬಿಡುಗಡೆಗೊಳಿಸಿತು. ನಂತರ ಕೆಲವರನ್ನು ಮರು ನೇಮಕ ಮಾಡಿರುವುದು ಸಹ ಕೆಲವರ ಕೆಂಗಣ್ಣಿಗೆ ಗುರಿಯಾಯಿತು.ಪಕ್ಷದಲ್ಲಿ ಅಸಮಾಧಾನ, ಗೊಂದಲ, ನಿರಾಶೆ ಇರುವಾಗಲೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸಗಡದಲ್ಲಿನ ಗೆಲುವು ಟಾನಿಕ್ ನೀಡಿದಂತಾಗಿದೆ. ಮೈಕೊಡವಿಕೊಂಡು ಎದ್ದುಕುಳಿತಿರುವ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಮುಖಂಡರು ವಿಜಯೋತ್ಸವ ನಡೆಸಿ ಸಂಭ್ರಮಿಸಿದ್ದಾರೆ. ಬರಲಿರುವ ಲೋಕಸಭಾ ಚುನಾವಣೆಗೆ ಪಕ್ಷದಲ್ಲಿ ಉತ್ಸಾಹ ಮೂಡಿದಂತಾಗಿದೆ.
ಮೂರು ರಾಜ್ಯಗಳ ಗೆಲುವಿನಿಂದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಉಂಟಾಗಿದೆ. ಮೋದಿ ಗ್ಯಾರಂಟಿ ಮೇಲೆ ಜನತೆ ವಿಶ್ವಾಸ ಇಟ್ಟಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.