ದೇವಸ್ಥಾನಕ್ಕೂ ವಕ್ಫ್‌ ಮಂಡಳಿ ನೋಟಿಸ್‌ ನಿಡ್ತಾರೆ

KannadaprabhaNewsNetwork | Published : Oct 28, 2024 1:00 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಕ್ಫ್‌ ಮಂಡಳಿಯವರು ದೇವಸ್ಥಾನಕ್ಕೆ ಕೂಡಾ ನೋಟಿಸ್ ನೀಡುತ್ತಿದ್ದಾರೆ. ದೇಶದಲ್ಲಿ ವಕ್ಫ್‌ ಕಾನೂನು ವಿರುದ್ಧ ಹೋರಾಟ ಮಾಡಲಾಗುವುದು. ನೋಟಿಸ್ ನೀಡಿದ್ದರ ಬಗ್ಗೆ ಕಾನೂನು ಹೋರಾಟಕ್ಕೆ ವಕೀಲರ ತಂಡ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಕ್ಫ್‌ ಮಂಡಳಿಯವರು ದೇವಸ್ಥಾನಕ್ಕೆ ಕೂಡಾ ನೋಟಿಸ್ ನೀಡುತ್ತಿದ್ದಾರೆ. ದೇಶದಲ್ಲಿ ವಕ್ಫ್‌ ಕಾನೂನು ವಿರುದ್ಧ ಹೋರಾಟ ಮಾಡಲಾಗುವುದು. ನೋಟಿಸ್ ನೀಡಿದ್ದರ ಬಗ್ಗೆ ಕಾನೂನು ಹೋರಾಟಕ್ಕೆ ವಕೀಲರ ತಂಡ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್‌ ನೋಟಿಸ್ ನೀಡಿದ ವಿಚಾರಕ್ಕೆ ರೈತರು ಆತಂಕ ಪಡಬಾರದು. ಕಾನೂನು ಹೋರಾಟ ಮಾಡೋಣ. ಯಾರಿಗಾದರೂ ನೋಟಿಸ್ ಬಂದರೆ ನಮ್ಮ ಕಚೇರಿ ಸಂಪರ್ಕ ಮಾಡಿ. ವಿಜಯಪುರ ಜಿಲ್ಲೆ ಮಾತ್ರವಲ್ಲ ಬೇರೆ ಜಿಲ್ಲೆಯ ರೈತರು ಸಹ ನಮ್ಮ ಕಚೇರಿ ಸಂಪರ್ಕ ಮಾಡಿ ಎಂದು ಕರೆ ನೀಡಿದರು.

ವಕ್ಫ್‌ ಕುರಿತು ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರಿಗೆ ಜಾಗೃತಿ ಮೂಡಿಸುತ್ತೇವೆ. ಸಚಿವ ಜಮೀರ್ ಪ್ರವಾಸ ಮಾಡಿದ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡುತ್ತೇವೆ. ವಕ್ಫ್‌ ಕಾನೂನು ವಿರುದ್ಧ ಹೋರಾಟ ಮಾಡಲಾಗುವುದು. ಜಿಲ್ಲೆಯಲ್ಲಿ ವಕ್ಫ್‌ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಯಾವುದೇ ವಕ್ಫ್‌ ಆಸ್ತಿ ಆಗಿಲ್ಲ ಎನ್ನುತ್ತಾರೆ. ವಕ್ಫ್‌ ಕಾನೂನು ನೆಹರು ಮಾಡಿರುವ ದೊಡ್ಡ ತಪ್ಪು. ಕರ್ನಾಟಕದಲ್ಲಿ ಮತ್ತೊಂದು ಪಾಕಿಸ್ತಾನ ನಿರ್ಮಾಣ ಮಾಡುವುದಕ್ಕೆ ವಕ್ಫ್‌ ಕೆಲಸ ಮಾಡುತ್ತಿದೆ ಎಂದು ಅನಿಸುತ್ತಿದೆ ಎಂದು ಆರೋಪಿಸಿದರು.

ಶಿಗ್ಗಾಂವಿಯಲ್ಲಿ ಹಿಂದೂ ವರ್ಸಸ್‌ ಮುಸ್ಲಿಂ:

ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲೋದು ಖಚಿತ. ಅಲ್ಲಿ ಹಿಂದೂ ವರ್ಸಸ್ ಮುಸ್ಲಿಂ ಇದೆ. ಹಿಂದೂ ಬಚೇಗಾತೋ ಹಮ್ ಬಚೇಗಾ. ಇಲ್ಲವಾದರೆ ಯಾವ ರೆಡ್ಡಿ, ಪಂಚಮಸಾಲಿ, ಗಾಣಿಗ, ದಲಿತರು ಯಾರೂ ಉಳಿಯಲ್ಲ. ಈಗ ವಕ್ಫ್‌ ವಿಚಾರ ನೋಡುತ್ತಿದ್ದೀರಲ್ಲಾ? ನಾವು ಜಗಳವಾಡುತ್ತಾ ಹೋದರೆ ಸಬ್ ಹಮಾರಾ ಹೈ ಎನ್ನುತ್ತಾರೆ ಎಂದ ಅವರು, ಒಬ್ಬ ಮುಲ್ಲಾ ನಾಲ್ಕೈದು ರಾಜ್ಯದಲ್ಲಿ ಮುಸ್ಲಿಮರು ಬಹುಸಂಖ್ಯಾರಾಗಿದ್ದೇವೆ, ಹಿಂದೂಗಳು ಖಾಲಿ ಮಾಡಿ ಎಂದಿದ್ದಾನೆ. ಆತನ ಮೇಲೆ 17 ಕ್ರಿಮಿನಲ್ ಕೇಸ್‌ಗಳಿವೆ ಎಂದು ಆತ ಹೇಳಿದ್ದಾನೆ. ಬಾಂಗ್ಲಾದಲ್ಲಿ ಹೇಗಾಗುತ್ತಿದೆ? ಹಾಗಾಗಿ ನಾವು ಜಾತಿ ಬೇಧ ಭಾವ ಬಿಟ್ಟು ಒಂದಾಗಬೇಕು. ಈಗ ಜಾತಿ ಹೋಗಿದೆ. ಕೇವಲ ಹಿಂದೂ ಎಂದಾಗಿದೆ ಎಂದು ಹೇಳಿದರು.

ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುತ್ತಾರೆಂಬ ಸುದ್ದಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರೂ ಹೋಗಲ್ಲ. ಬಿಜೆಪಿಯವರಿಗೆ ಹುಚ್ಚು ಹಿಡಿದಿದೆಯಾ? ಸುಮ್ಮನೇ ಹಾಗೇ ಹೇಳುತ್ತಾರೆ ಕಾಂಗ್ರೆಸ್‌ನವರು. ಅವರು ಹೇಳಿದ ಬಳಿಕ ಬಿಜೆಪಿಯವರು ಕಾಂಗ್ರೆಸ್ಸಿನ 20 ಶಾಸಕರು ನಮ್ಮ ಕಡೆ ಬರುತ್ತಾರೆಂದು ಹೇಳುತ್ತಾರೆ. ಅವರೂ ಬರಲ್ಲ ಇವರೂ ಬರಲ್ಲ. ನಾವು ವಿರೋಧ ಪಕ್ಷದಲ್ಲೇ ಇರುತ್ತೇವೆ. ನಾವೇನು ಹೋರಾಟ ಮಾಡೋದು ಬೇಡ. ಈ ಸರ್ಕಾರ ತನ್ನಿಂದ ತಾನೇ ಬೀಳುತ್ತದೆ, ಅವರವರಲ್ಲೇ ಸಿಎಂ ಆಗಲು ಹೋರಾಡುತ್ತಿದ್ದಾರೆ ಎಂದರು.

ಸಿಎಂ ಆಗಲು ಸಾವಿರ ಕೋಟಿ ಸಂಗ್ರಹಿಸಿದ್ದಾರೆ ಎಂದು ಯತ್ನಾಳ ತಮ್ಮ ಪಕ್ಷದವರ ವಿರುದ್ಧವೇ ಮಾತನಾಡುತ್ತಾರೆಂದು ಮಾಧ್ಯಮದವರು ಸುದ್ದಿ ಮಾಡುತ್ತಾರೆ. ನಾನು ಎಲ್ಲಿಯೂ ಹಾಗೇ ಹೇಳಿಲ್ಲ. ಸುಮ್ಮನೆ ಹಾಕುತ್ತೀರಿ. ನ್ಯಾಯಾಲಯಗಳಿವೆ ಎಂದು ನಾನು ಉಳಿದಿದ್ದೇನೆ.

ಪೊಲೀಸರು ಹಾಕೋ ಕೇಸ್ ನೋಡಿದರೆ ನಾನು ಜೈಲಿನಲ್ಲಿ ಕಾಯಂ ಇರಬೇಕು. ನಾನೂ ಲಾರೆನ್ಸ್ ಬಿಷ್ಣೋಯಿ ಆರಬೇಕಿತ್ತು ಎಂದು ಹಾಸ್ಯ ಭರಿತವಾಗಿ ಮಾತನಾಡಿದರು.

ಈ ಹಿಂದೆ 17 ಜನ ಶಾಸಕರು ಬಿಜೆಪಿಗೆ ಬಂದು ಯಡಿಯೂರಪ್ಪ ಸಿಎಂ ಆಗಲು ಕಾರಣರಾಗಿದ್ದು ಸಿ.ಪಿ.ಯೋಗೀಶ್ವರ ಅವರು. ವಿಜಯೇಂದ್ರ ಅವರು ಇನ್ನೂ ವಿಜಯೇಂದ್ರಜೀ ಆಗಿರಲಿಲ್ಲ. ಅವರನ್ನು ಈಗ ಅಧ್ಯಕ್ಷ ಮಾಡಿದ್ದಾರೆ ಎಂದು ಸಿಪಿವೈಗೆ ಟಿಕೆಟ್‌ ತಪ್ಪಿದ್ದಕ್ಕೆ ಯತ್ನಾಳ ಅಸಮಾಧಾನ ಹೊರಹಾಕಿದರು

Share this article