ಮಳೆಗಾಲದಲ್ಲೇ ಬಡವಾದ ಪಶ್ಚಿಮಘಟ್ಟ ಒಡಲು!

KannadaprabhaNewsNetwork |  
Published : Oct 20, 2024, 01:55 AM IST
ಕುದುರೆಮುಖ ವನ್ಯಜೀವಿ ಸಂರಕ್ಷಿತಾರಣ್ಯದಲ್ಲಿ ಹರಿವ ನೀರಿನ ಕೊರತೆ | Kannada Prabha

ಸಾರಾಂಶ

ಎರಡು ವರ್ಷಗಳ ಹಿಂದೆ ಚಾರಣ ವೇಳೆ ಅಲ್ಲಲ್ಲಿ ಕಂಡುಬರುತ್ತಿದ್ದ ವನ್ಯಜೀವಿಗಳು ಈಗ ಮಳೆಗಾಲದಲ್ಲೂ ಕಾಣಸಿಗುತ್ತಿಲ್ಲ. ಕನಿಷ್ಠ ಕಾಡು ಕುರಿ, ವಾನರವೂ ಪ್ರತ್ಯಕ್ಷವಾಗುವುದಿಲ್ಲ. ವನ್ಯಜೀವಿಗಳು ನಾಡಿಗೆ ದಾಂಗುಡಿ ಇಡುತ್ತಿದ್ದರೆ, ಅತ್ತ ಅರಣ್ಯದಲ್ಲಿ ವನ್ಯಜೀವಿಗಳನ್ನು ಹುಡುಕುವ ಪರಿಸ್ಥಿತಿ ಉಂಟಾಗಿದೆ ಎನ್ನುವುದು ಚಾರಣಿಗರ ಅಳಲು.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಪಶ್ಚಿಮಘಟ್ಟ ಸಂರಕ್ಷಣೆ ದಿಶೆಯಲ್ಲಿ ಕೇಂದ್ರ ಸರ್ಕಾರ ಶಿಫಾರಸು ಮಾಡಿದ್ದ ಪ್ರೊ.ಮಾಧವ ಗಾಡ್ಗೀಳ್‌, ಕಸ್ತೂರಿರಂಗನ್‌ ವರದಿ ಅಂಶಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ರಾಜಕೀಯವಾಗಿ ವ್ಯಾಪಕ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ ಪಶ್ಚಿಮ ಘಟ್ಟಗಳ ಅಳಿವು-ಉಳಿವಿನ ಕುರಿತಂತೆ ಆತಂಕಕಾರಿ ಸಂಗತಿಯೊಂದು ಹೊರಬಿದ್ದಿದೆ.

ಪಶ್ಚಿಮ ಘಟ್ಟದ ಒಡಲು ಬತ್ತುತ್ತಿದೆ. ಕುದುರೆಮುಖ ವನ್ಯಜೀವಿ ಫಾರೆಸ್ಟ್‌ ಸೇರಿದಂತೆ ಪಶ್ಚಿಮಘಟ್ಟದ ದಟ್ಟಾರಣ್ಯಗಳಲ್ಲಿ ಮಳೆಗಾಲ ಮುನ್ನವೇ ನೀರಿನ ಝರಿಗಳು ಬಡಕಲಾಗುತ್ತಿರುವ ಕಳವಳಕಾರಿ ವಿಚಾರ ಬಯಲಾಗಿದೆ. ನಿತ್ಯ ಹರಿದ್ವರ್ಣದಂತೆ ಸದಾ ತಂಪಾಗಿ ಕಂಗೊಳಿಸಬೇಕಾದ ಈ ಅರಣ್ಯಗಳಲ್ಲಿ ಉಷ್ಣ ತಾಪಮಾನ ಕಾಣಿಸತೊಡಗಿದೆ. ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ವನ್ಯಮೃಗಗಳೂ ಕಣ್ಮರೆಯಾಗಿವೆ.

ಇಂತಹ ಗಂಭೀರ ಸಂಗತಿ ಮಂಗಳೂರಿನ ಸಹ್ಯಾದ್ರಿ ಸಂಚಯ ಸಂಘಟನೆಯ ಪರಿಸರ ಪ್ರೇಮಿಗಳು ಇತ್ತೀಚೆಗೆ ಪಶ್ಚಿಮಘಟ್ಟದಾದ್ಯಂತ ಚಾರಣ ಕೈಗೊಂಡ ವೇ‍ಳೆ ಬೆಳಕಿಗೆ ಬಂದಿದೆ. ಪಶ್ಚಿಮ ಘಟ್ಟದ ದುರ್ಬರ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಭವಿಷ್ಯದಲ್ಲಿ ಮತ್ತಷ್ಟು ಪ್ರಾಕೃತಿಕ ಅವಘಡಗಳು ಪಶ್ಚಿಮ ಘಟ್ಟದಲ್ಲೇ ಸಂಭವಿಸುವ ಬಗ್ಗೆ ಪರಿಸರ ಪ್ರೇಮಿಗಳ ಈ ತಂಡ ಎಚ್ಚರಿಕೆ ನೀಡಿದೆ.

ಝರಿಗಳಲ್ಲಿ ನೀರಿನ ಕೊರತೆ:

ಮುಂಗಾರು ಹಂಗಾಮ ಕಳೆದು ಈಗಷ್ಟೆ ಹಿಂಗಾರು ಪ್ರವೇಶಿಸುತ್ತಿದೆ. ಈ ವೇಳೆ ಸಾಮಾನ್ಯವಾಗಿ ಪಶ್ಚಿಮ ಘಟ್ಟ ಪ್ರದೇಶಗಳು ಹಸಿರಿನಿಂದ ನಳನಳಿಸುತ್ತಿರುತ್ತವೆ. ಈ ವರ್ಷ ಮಾತ್ರ ಬೇಗನೆ ಅಂದರೆ ಅಕ್ಟೋಬರ್‌ ಮಧ್ಯದಲ್ಲೇ ಅರಣ್ಯಗಳಲ್ಲಿ ನೀರಿನ ಕೊರತೆ ಕಾಣಿಸಿದೆ.

ವನ್ಯಜೀವಿ ಸಂರಕ್ಷಿತ ಪ್ರದೇಶವಾದ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ತುಂಬಿ ಹರಿಯುತ್ತಿದ್ದ ಝರಿಗಳು ಕಳಾಹೀನವಾಗಿವೆ. ಕನಿಷ್ಠ ಡಿಸೆಂಬರ್, ಜನವರಿ ವರೆಗೂ ಉತ್ಸಾಹದಿಂದ ಹರಿಯುತ್ತಿದ್ದ ಝರಿಗಳು ಇಂದೋ, ನಾಳೆಯೇ ಎಂಬಂತೆ ಇವೆ. ಕೆಲವು ಕಡೆಗಳಲ್ಲಿ ತೊರೆ, ಹಳ್ಳ, ಕೊಳ್ಳ, ಝರಿಗಳು ಇದ್ದರೂ ನೀರು ಕಡಿಮೆಯಾಗಿದೆ. ನೀರಿನ ಹರಿವು ಇಲ್ಲದೆ ಪಶ್ಚಿಮಘಟ್ಟ ಅರಣ್ಯಗಳು ಭಣಗುಡಲಾರಂಭಿಸಿವೆ.

ಅರಣ್ಯದಲ್ಲಿ ಉಷ್ಣತೆ!: ತಂಗಾಳಿಯ ಆಹ್ಲಾದಕ್ಕೆ ಮೈಮರೆಯುವಂತೆ ಮಾಡುವ ಪಶ್ಚಿಮಘಟ್ಟದ ಅರಣ್ಯ ಪ್ರದೇಶ ಈಗ ತಾಪಮಾನಕ್ಕೆ ತಲೆಬಾಗುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಬೆಳಗ್ಗಿನ ಹೊತ್ತು ಸಂಚರಿಸಿದಾಗಲೇ ಸೆಖೆಯ ಅನುಭವ ಉಂಟಾಗುತ್ತಿದೆ. ಕಳೆದ ವರ್ಷ ಇಂತಹ ಅನುಭವ ಅಷ್ಟಾಗಿ ಆಗದಿದ್ದರೂ ಈ ವರ್ಷ ಸೂರ್ಯನ ಕಿರಣ ಅರಣ್ಯದೊಳಗೆ ನೇರವಾಗಿ ಪ್ರವೇಶಿಸುತ್ತಿದ್ದು, ನಾಡಿನಲ್ಲಿದ್ದಂತೆ ಸೆಖೆಯ ಅನುಭವ ನೀಡುತ್ತಿದೆ ಎನ್ನುತ್ತಾರೆ ಚಾರಣಿಗರು.

ಅರಣ್ಯದಲ್ಲೂ ಭೂಕುಸಿತ: ಕುದುರೆಮುಖ ವನ್ಯಜೀವಿ ಸಂರಕ್ಷಿತ ಅರಣ್ಯದ ಮಕ್ಕಿ ಪರ್ಲ ಎಂಬಲ್ಲಿ ಭೂಕುಸಿತ ಉಂಟಾಗಿದೆ. ನಾಡಿನಲ್ಲಿ ಭೂಕುಸಿತ ಉಂಟಾದರೆ ಜಗಜ್ಜಾಹಿರಾದರೆ, ಅರಣ್ಯ ಪ್ರದೇಶದ ಅಲಲ್ಲಿ ಭೂಕುಸಿತ ಉಂಟಾಗಿರುವುದು ಹೊರಗಡೆಗೆ ಗೊತ್ತೇ ಆಗುವುದಿಲ್ಲ. ವನ್ಯಜೀವಿಗಳೂ ನಾಪತ್ತೆ: ಪಶ್ಚಿಮ ಘಟ್ಟ ಹಾದುಹೋಗುವ ಉತ್ತರ ಕನ್ನಡ, ಉಡುಪಿ, ದ.ಕ., ಚಿಕ್ಕಮಗಳೂರು, ಕೊಡಗು ವ್ಯಾಪ್ತಿಗಳ ಅರಣ್ಯಗಳಲ್ಲಿ ವನ್ಯಜೀವಿಗಳು ಕಂಡುಬರುತ್ತಿಲ್ಲ. ಎರಡು ವರ್ಷಗಳ ಹಿಂದೆ ಚಾರಣ ವೇಳೆ ಅಲ್ಲಲ್ಲಿ ಕಂಡುಬರುತ್ತಿದ್ದ ವನ್ಯಜೀವಿಗಳು ಈಗ ಮಳೆಗಾಲದಲ್ಲೂ ಕಾಣಸಿಗುತ್ತಿಲ್ಲ. ಕನಿಷ್ಠ ಕಾಡು ಕುರಿ, ವಾನರವೂ ಪ್ರತ್ಯಕ್ಷವಾಗುವುದಿಲ್ಲ. ವನ್ಯಜೀವಿಗಳು ನಾಡಿಗೆ ದಾಂಗುಡಿ ಇಡುತ್ತಿದ್ದರೆ, ಅತ್ತ ಅರಣ್ಯದಲ್ಲಿ ವನ್ಯಜೀವಿಗಳನ್ನು ಹುಡುಕುವ ಪರಿಸ್ಥಿತಿ ಉಂಟಾಗಿದೆ ಎನ್ನುವುದು ಚಾರಣಿಗರ ಅಳಲು. ಅರಣ್ಯದಲ್ಲೇ ಆಹಾರ ಇಲ್ಲದಿದ್ದರೆ ಮುಂದೇನು?

ಅರಣ್ಯದಲ್ಲೇ ನೀರು, ಆಹಾರ ಇಲ್ಲದಿದ್ದರೆ ವನ್ಯಜೀವಿಗಳ ಗತಿ ಏನು ಎಂಬ ಪ್ರಶ್ನೆ ಪರಿಸರಪ್ರೇಮಿಗಳನ್ನು ಕಾಡುತ್ತಿದೆ. ಇದರಿಂದಾಗಿ ಇನ್ನಷ್ಟು ವನ್ಯಜೀವಿಗಳು ನಾಡಿಗೆ ನುಗ್ಗುವುದನ್ನು ತಪ್ಪಿಸುವಂತಿಲ್ಲ ಎನ್ನುತ್ತಾರೆ.

ಈಗಲೇ ಅರಣ್ಯಗಳಲ್ಲಿ ನೀರಿನ ಕೊರತೆ ತಲೆದೋರಿದೆ. ಇನ್ನು ನವೆಂಬರ್‌ನಿಂದ ಮೇ ವರೆಗೆ ವನ್ಯಜೀವಿಗಳಿಗೆ ಆಹಾರ, ನೀರು ಕಾಡಿನಲ್ಲೇ ಸಿಗುವುದು ಕಷ್ಟ. ಕಾಡಿನಲ್ಲಿ ನೀರು ಇಲ್ಲದಿದ್ದರೆ, ಬೀಜ, ಹಣ್ಣುಗಳೂ ಸಿಗುವುದಿಲ್ಲ. ಇದು ವನ್ಯಜೀವಿಗಳಿಗೆ ಭಾರಿ ಆಹಾರ ಕೊರತೆಗೆ ಕಾರಣವಾಗಲಿದೆ.

---ಪ್ರೊ.ಗಾಡ್ಗೀಳ್‌, ಕಸ್ತೂರಿ ರಂಗನ್‌ ವರದಿ ಜಾರಿಗೆ ತಗಾದೆ ತೆಗೆಯುತ್ತಾರೆ, ಎಲ್ಲ ಕಡೆಗಳಲ್ಲೂ ಅರಣ್ಯ ಒತ್ತುವರಿ ತೆರವು ನಡೆಯುತ್ತಿಲ್ಲ. ಪಶ್ಚಿಮ ಘಟ್ಟಗಳ ಬಗ್ಗೆ ಹೀಗೆಯೇ ನಿರ್ಲಕ್ಷ್ಯ ಮುಂದುವರಿದರೆ ಮುಂದಿನ ದಿನಗಳಲ್ಲಿ ಭೀಕರ ಅನಾಹುತವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಸರ್ಕಾರ ಮರೆಯಬಾರದು. ಟಿಂಬರ್‌ ಮತ್ತು ರೆಸಾರ್ಟ್‌ ಮಾಫಿಯಾಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಬೇಕು.

-ದಿನೇಶ್‌ ಹೊಳ್ಳ, ಸಂಚಾಲಕ, ಸಹ್ಯಾದ್ರಿ ಸಂಚಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಂಗೆ ಸಿಎಂ ಸ್ಥಾನ ನೀಡದಿದ್ದರೆ ರಾಜ್ಯಕ್ಕೆ ಅಪಮಾನ ಮಾಡಿದಂತೆ
ಮೀಸಲು ವರ್ಗೀಕರಣದ ವಿರುದ್ಧ ಇಂದು ಬೆಳಗಾವಿ ಚಲೋ