ಡಾ. ವೀರೇಂದ್ರ ಹೆಗ್ಗಡೆ ಜತೆಗೆ ಇಡೀ ಜಗತ್ತು ಇದೆ: ಜನಾರ್ದನ ಪೂಜಾರಿ

KannadaprabhaNewsNetwork |  
Published : Aug 12, 2025, 12:32 AM IST
ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಉಳ್ಳಾಲ ತಾಲೂಕು ತೊಕ್ಕೊಟ್ಟಿನ ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ತೊಕ್ಕೊಟ್ಟು ಒಳಪೇಟೆಯ ಅಂಬೇಡ್ಕರ್ ಮೈದಾನದಲ್ಲಿ ಭಾನುವಾರ ಆಯೋಜಿಸಲಾದ ‘ಮುದ್ದುಕೃಷ್ಣ -2025’ ಕೃಷ್ಣ ವೇಷ ಸ್ಪರ್ಧೆ ಉದ್ಘಾಟಿಸಿದ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಮಾತನಾಡಿದರು.

ಉಳ್ಳಾಲ: ಧರ್ಮಸ್ಥಳ ಕ್ಷೇತ್ರ ಕೇವಲ ಒಂದು ಸಮಾಜಕ್ಕೆ ಅಥವಾ ಜೈನರಿಗೆ ಮಾತ್ರ ಸೀಮಿತವಲ್ಲ. ಅದು ಜಗತ್ತಿಗೆ ಒಂದು ಹೆಮ್ಮೆಯ ಸ್ಥಳವಾಗಿದೆ. ನನ್ನನ್ನು ಜೈಲಿಗೆ ಹಾಕಿದರೂ ಧರ್ಮಸ್ಥಳದ ಹೆಸರು ಹಾಳು ಮಾಡಲು ನಾನು ಎಂದಿಗೂ ಬಿಡುವುದಿಲ್ಲ. ವಿರೇಂದ್ರ ಹೆಗ್ಗಡೆಯವರೇ ನೀವು ಹೆದರಬೇಡಿ, ಇದನ್ನು ಧೈರ್ಯವಾಗಿ ಎದುರಿಸಿ, ನಿಮ್ಮ ಜೊತೆ ನಾನು, ಕುದ್ರೋಳಿ ದೇವಸ್ಥಾನ ಇದೆ ಎಂದು ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ತಿಳಿಸಿದ್ದಾರೆ.ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಳ್ಳಾಲ ತಾಲೂಕು ತೊಕ್ಕೊಟ್ಟಿನ ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ತೊಕ್ಕೊಟ್ಟು ಒಳಪೇಟೆಯ ಅಂಬೇಡ್ಕರ್ ಮೈದಾನದಲ್ಲಿ ಭಾನುವಾರ ಆಯೋಜಿಸಲಾದ ‘ಮುದ್ದುಕೃಷ್ಣ -2025’ ಕೃಷ್ಣ ವೇಷ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಎಂಬ ಧರ್ಮದ ಸ್ಥಳವನ್ನು ಅವಹೇಳನ ಮಾಡುತ್ತಿರುವಾಗ ಪೂಜಾರಿಯವರು ಯಾಕೆ ಸುಮ್ಮನಿದ್ದಾರೆ, ಯಾಕೆ ಏನು ಮಾತನಾಡುತ್ತಿಲ್ಲ ಎಂಬ ಪ್ರಶ್ನೆ ಇಡೀ ದೇಶ, ಜಗತ್ತು ಕೇಳುತ್ತಿದೆ. ಆದ್ದರಿಂದ ಪೂಜಾರಿ ಇವತ್ತು ಬಾಯಿಬಿಟ್ಟಿದ್ದಾರೆ. ಹೆಗ್ಗಡೆಯವರೇ ನಿಮ್ಮ ಜೊತೆ ದೇಶ ಮಾತ್ರವಲ್ಲ, ಇಡೀ ಜಗತ್ತೇ ಇದೆ. ಧರ್ಮಸ್ಥಳವನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಆ ಯಮನಿಂದಲೂ ಸಾಧ್ಯವಿಲ್ಲ ಎಂದರು.

ದೇವಸ್ಥಾನ ಕಟ್ಟುವುದು ಅದು ಸುಲಭದ ಮಾತಲ್ಲ. ಕುದ್ರೋಳಿ ದೇವಸ್ಥಾನ ಕಟ್ಟಲು ಎಷ್ಟು ಕಷ್ಟ ಆಗಿದೆ ಎಂದು ನನಗೆ ಗೊತ್ತಿದೆ. ನಾನು ಕೇವಲ ಕುದ್ರೋಳಿ ಭಕ್ತನಲ್ಲ, ಧರ್ಮಸ್ಥಳದ ಭಕ್ತರಲ್ಲಿ ನಾನು ಕೂಡ ಒಬ್ಬ. ಆದ್ದರಿಂದ ನಿಮ್ಮ ಜೊತೆ ನಾನಿದ್ದೇನೆ. ಮನುಷ್ಯ ಸತ್ತ ನಂತರ ದೇಹವನ್ನು ದೇವಸ್ಥಾನದ ವಠಾರಗಳಲ್ಲಿ ಹೂಳುವುದು ಅದು ಭಾರತದ ಸಂಸ್ಕೃತಿಯಾಗಿದೆ. ಮುಸ್ಲಿಮರು ಮಸೀದಿಯಲ್ಲಿ, ಕ್ರಿಶ್ಚಿಯನ್ನರು ಚರ್ಚ್‌ಗಳಲ್ಲಿ ಹೂಳುವುದು ಕೂಡ ಭಾರತದ ಸಂಸ್ಕೃತಿಯಾಗಿದೆ ಎಂದು ಹೇಳಿದರು.

ಹಿಂದೂಗಳೇ ನಿಮಗೆ ಧೈರ್ಯ ಇಲ್ಲವೇ, ಮುಸ್ಲಿಂಮರೇ ನಿಮ್ಮ ಮಸೀದಿಯಲ್ಲಿ, ಕ್ರೈಸ್ತರೇ ನಿಮ್ಮ ಚರ್ಚ್‌ನಲ್ಲಿ ಶವಗಳನ್ನು ಹೂತು ಇಟ್ಟಿಲ್ಲವೇ?ಎಂದು ಪ್ರಶ್ನಿಸಿದರು.ಇವತ್ತು ಎಸ್‌ಐಟಿ ಅವರು ಹುಡಿಕಿದರೂ ಏನು ಸಿಗುತ್ತಿಲ್ಲ, ನೀವು ಎಷ್ಟೇ ಹುಡುಕಿದರೂ ಏನು ಸಿಗುವುದಿಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ. ಶವದ ಪ್ರಕರಣದಲ್ಲಿ ಧರ್ಮಸ್ಥಳದ ವಠಾರವನ್ನು ಅಗೆಯುತ್ತಿದ್ದಾರೆ, ನೀವು ಏನು ಮಾಡುತ್ತಿದ್ದೀರ ಎಂದು ನನಗೆ ನಾಚಿಕೆಯಾಗುತ್ತಿದೆ. ದೇವಸ್ಥಾನವನ್ನು ಹಾಳು ಮಾಡುತ್ತಿರುವಾಗ ಮಾತನಾಡುವ ಧೈರ್ಯ ನಿಮಗಿಲ್ಲವೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.ಮೋದಿಯವರೇ ನೀವು ಏನು ಮಾಡುತ್ತಿದ್ದೀರಿ? ನಿಮ್ಮ ಸರ್ಕಾರ ಏನು ಮಾಡುತ್ತಿದೆ? ಧರ್ಮಸ್ಥಳದ ವಠಾರವನ್ನು ಎಸ್‌ಐಟಿ ಅಗೆಯುತ್ತಿದ್ದಾರೆ. ಶವ ಇದೆ ಎಂದು ಹುಡುಕುತ್ತಿದ್ದಾರೆ. ನೀವು ಧರ್ಮಸ್ಥಳಕ್ಕೆ ಬಂದು ಅಲ್ಲಿ ನಿಂತು ಭಾಷಣ ಮಾಡಿ ಎಂದು ಪೂಜಾರಿ ಹೇಳಿದರು.ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುರೇಶ್ ಭಟ್ನಗರ, ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ್ ಕ್ಲಿಕ್ ತೊಕ್ಕೊಟ್ಟು, ಉಪಾಧ್ಯಕ್ಷ ಸತೀಶ್ ದೀಪಂ, ಪ್ರಧಾನ ಕಾರ್ಯದರ್ಶಿ ಭವಿತ್ ಬಂಗೇರ, ಕಾರ್ಯಕ್ರಮ ಸಂಯೋಜಕ ಅಶೋಕ್ ಕ್ಲಿಕ್ ಮೊದಲಾದವರು ಉಪಸ್ಥಿತರಿದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ