ಕಾರ್ಕಳದಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಸ್ಲೋ ಪಾಯಿಸನ್ ನೀಡಿ, ಉಸಿರು ಗಟ್ಟಿಸಿ ಕೊಲೆಗೈದ ಪತ್ನಿ

KannadaprabhaNewsNetwork |  
Published : Oct 26, 2024, 12:58 AM ISTUpdated : Oct 26, 2024, 01:58 PM IST
ಬಾಲಕೃಷ್ಣ ದಂಪತಿ ಗಳು, ಕೊಲೆ ಆರೋಪಿ ಗಳಾದ  ದಿಲೀಪ್ ಹೆಗ್ಡೆ ಹಾಗು ಪ್ರತಿಮಾ  | Kannada Prabha

ಸಾರಾಂಶ

ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿ ಕೊಲೆಗೈದ ಘಟನೆ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ನಡೆದಿದೆ.

  ಕಾರ್ಕಳ : ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿ ಕೊಲೆಗೈದ ಘಟನೆ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ನಡೆದಿದೆ.

ಬಾಲಕೃಷ್ಣ ಪೂಜಾರಿ (44) ಕೊಲೆಯಾದವರು. ಅವರ ಪತ್ನಿ ಪ್ರತಿಮಾ ಹಾಗೂ ಕಾರ್ಕಳದ ದಿಲೀಪ್ ಹೆಗ್ಡೆ ಕೊಲೆ ಆರೋಪಿಗಳಾಗಿದ್ದು, ಅವರನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಮುಂಬೈನಿಂದ ಊರಿಗೆ ಬಂದಿದ್ದ ಬಾಲಕೃಷ್ಣ ದಂಪತಿ, ನಿಟ್ಟೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈ ಕುಟುಂಬ ಕಳೆದ ವರ್ಷ ನ.1 ರಂದು ಹೊಸಮನೆ ಕಟ್ಟಿಸಿದ್ದರು. ಈ ಹೊಸ ಮನೆಗೆ ಒಂದು ವರ್ಷ ಆಗುವ ಮೊದಲೇ ಮನೆಯ ಯಜಮಾನನ ಕೊಲೆಯಾಗಿದೆ.

ಬಾಲಕೃಷ್ಣ ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದ್ದು, ಶಾಲೆಗೆ ಹೋಗುತ್ತಿದ್ದಾರೆ.

* ಘಟನೆ ಹಿನ್ನೆಲೆ

ಬಾಲಕೃಷ್ಣ ಪೂಜಾರಿ, ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಕಾರ್ಕಳ, ಮಣಿಪಾಲ, ಮಂಗಳೂರು, ಬೆಂಗಳೂರು ಸೇರಿದಂತೆ ಒಟ್ಟು 7 ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1 ವಾರ ಚಿಕಿತ್ಸೆ ನೀಡಿದ ಬಳಿಕ ಅವರು ಅಲ್ಪ ಚೇತರಿಸಿಕೊಂಡಿದ್ದು, ಆದ್ದರಿಂದ ವೈದ್ಯಾಧಿಕಾರಿ, ಉದ್ಯಾವರ ಅಥವಾ ಅಂಕೋಲಾ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ತಿಳಿಸಿದ್ದರು. ಅದರಂತೆ ಅ.19ರಂದು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಾಲಕೃಷ್ಣ ಅವರು ಅಜೆಕಾರು ದೆಪ್ಪುತ್ತೆಯಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಆದರೆ ಅ.20ರಂದು ಮುಂಜಾನೆ ಬಾಲಕೃಷ್ಣ ಮೃತಪಟ್ಟಿದ್ದರು. ಸಾವಿನ ಕುರಿತು ಅನುಮಾನಗೊಂಡ ಹಿನ್ನೆಲೆಯಲ್ಲಿ ಬಾಲಕೃಷ್ಣ ಅವರ ತಂದೆ ಹಾಗೂ ಪತ್ನಿ, ಕೊಲೆ ಆರೋಪಿ ಪ್ರತಿಮಾಳ ಅಣ್ಣ ಸಂದೀಪ್, ಅಜೆಕಾರು ಪೊಲೀಸರಿಗೆ ದೂರು ನೀಡಿದ್ದರು.

* ಕೊಲೆ ನಡೆದಿದ್ದು ಹೀಗೆ: ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಲ್ಪ ಚೇತರಿಸಿಕೊಂಡು ಅ.19ರಂದು ಮನೆಗೆ ಆಗಮಿಸಿದ್ದ ಬಾಲಕೃಷ್ಣ ಪೂಜಾರಿ, ಎಲ್ಲರೊಂದಿಗೆ ಮಾತನಾಡಿ, ಆಹಾರ ಸೇವಿಸಿ ಮಲಗಿದ್ದಾರೆ. ಮನೆಯಲ್ಲಿ ಪತ್ನಿ ಪ್ರತಿಮಾ ಮಾತ್ರ ಇದ್ದುದರಿಂದ ಆಕೆ ಪ್ರಿಯಕರ ದಿಲೀಪ್ ಹೆಗ್ಡೆ ಎಂಬಾತನನ್ನು ಮನೆಗೆ ಕರೆದಿದ್ದು, ಅ.20ರ ಮುಂಜಾನೆ 2 ಗಂಟೆ ವೇಳೆಗೆ ತಲೆದಿಂಬಿನಿಂದ ಒತ್ತಿಹಿಡಿದು ಉಸಿರುಗಟ್ಟಿಸಿ ಪತಿಯನ್ನು ಕೊಲೆ ಮಾಡಿದ್ದಳು.

* ಪತ್ನಿಯ ಅಕ್ರಮ ಸಂಬಂಧ: ಪೊಲೀಸರಿಗೆ ದೂರು ನೀಡಿದ್ದ ಪತಿ

ಅಜೆಕಾರಿನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಪ್ರತಿಮಾ ಹಾಗೂ ಬಾಲಕೃಷ್ಣ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ ಮಾಡುವ ಮೂಲಕ ವೈರಲ್ ಆಗಿದ್ದರು. ಆದರೆ ಪ್ರತಿಮಾಳಿಗೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳದ ಬಾಲಾಜಿ ಇನ್ ಹೋಟೆಲ್ ಮಾಲಕ ಅಶೋಕ್ ಹೆಗ್ಡೆ ಪುತ್ರ ಆರೋಪಿ ದಿಲೀಪ್ ಹೆಗ್ಡೆ (28) ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಎರಡು ತಿಂಗಳ ಹಿಂದೆ ಪತ್ನಿ ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆ ಪ್ರೇಮದ ವಿಷಯದಲ್ಲಿ ತಿಳಿದ ಪತಿ ಬಾಲಕೃಷ್ಣ ಪೂಜಾರಿ, ಅಜೆಕಾರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ದಿಲೀಪ್ ಹೆಗ್ಡೆ ಹಾಗೂ ಪ್ರತಿಮಾ ಅವರನ್ನು ಕರೆಸಿ ವಿಚಾರಣೆ ನಡೆಸಿ ಮುಚ್ಚಳಿಕೆ ಬರೆಸಿದ್ದರು. ಈ ವಿಚಾರದಲ್ಲಿ ಪ್ರತಿಮಾ ಹಾಗೂ ಬಾಲಕೃಷ್ಣ ಜೊತೆ ಮನಸ್ತಾಪ ಉಂಟಾಗಿತ್ತು. ಬಳಿಕ ಪತಿ ಬಾಲಕೃಷ್ಣ ಪೂಜಾರಿಯನ್ನು ಕೊಲೆಗೈಯ್ಯಬೇಕೆಂದು ಪ್ರತಿಮಾ ಯೋಜನೆ ಹಾಕಿದ್ದಳು.

* ವಿಷ ನೀಡಿ ಕೊಲೆಗೆ ಯತ್ನ

ಪತಿ ಬಾಲಕೃಷ್ಣ ಪೂಜಾರಿಯನ್ನು ಕೊಲೆ ಮಾಡಬೇಕೆಂದು ಯೋಜನೆ ರೂಪಿಸಿದ ಪ್ರತಿಮಾ, ‘ರೋಸಿಯಂ’ ಎಂಬ ವಿಷ ಪದಾರ್ಥವನ್ನು ಆಹಾರದಲ್ಲಿ ಬೆರೆಸಿ 20 ದಿನಗಳಿಂದ ನೀಡುತ್ತಿದ್ದಳು. ಇದರಿಂದಾಗಿ ಬಾಲಕೃಷ್ಣ ಪೂಜಾರಿ, ಕಾಮಾಲೆ ಸೇರಿದಂತೆ ಅನೇಕ ಅನಾರೋಗ್ಯಕ್ಕೀಡಾಗಿ, 7 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು.

* ಗೆಳೆಯನ ಸಾವಿಗೆ ನ್ಯಾಯ ಒದಗಿಸಿದ ಅಣ್ಣ

ಮೃತ ಬಾಲಕೃಷ್ಣ ಹಾಗೂ ಪತ್ನಿ ಪ್ರತಿಮಾಳ ಅಣ್ಣ ಸಂದೀಪ್ ಮುಂಬೈಯಲ್ಲಿ ಜತೆಗೆ ಉದ್ಯೋಗ ಮಾಡುತ್ತಿದ್ದು, ಆಪ್ತ ಸ್ನೇಹಿತರಾಗಿದ್ದರು. ಕೊಲೆ ಎಂದು ಅನುಮಾನಗೊಂಡ ಹಿನ್ನೆಲೆ ಸಂದೀಪ್‌ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಆದರೆ ಗುರುವಾರ ಮಧ್ಯಾಹ್ನ ತಂಗಿ ಪ್ರತಿಮಾ, ತನ್ನ ಪತಿ ಬಾಲಕೃಷ್ಣ ಪೂಜಾರಿಯನ್ನು ಕೊಲೆ ಮಾಡಿದ್ದು ನಾನೇ ಎಂದು ಅಣ್ಣನ ಬಳಿ ತಿಳಿಸಿದ್ದಳು. ಆತ ತಡಮಾಡದೆ ತಂಗಿಯನ್ನು ನೇರವಾಗಿ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮೂಲಕ ತನ್ನ ಮಿತ್ರ ಬಾಲಕೃಷ್ಣನ ಸಾವಿಗೆ ನ್ಯಾಯ ಒದಗಿಸಿದ್ದಾರೆ.

 ನನ್ನ ಗೆಳೆಯನ ಸಾವಿಗೆ ಕಾರಣನಾದ ನನ್ನ ತಂಗಿ ಪ್ರತಿಮಾ ಪೂಜಾರಿ ಹಾಗೂ ದಿಲೀಪ್ ಹೆಗ್ಡೆಗೆ ಸೂಕ್ತ ಶಿಕ್ಷೆಯಾಗಬೇಕು. ವಿಷ ನೀಡಿ ಚಿತ್ರಹಿಂಸೆ ರೀತಿಯಲ್ಲಿ ಕೊಲ್ಲುವ ಮನಸ್ಥಿತಿ ನಿಜಕ್ಕೂ ಮಾರಕ‌. ಅವರಿಗೆ ಶಿಕ್ಷೆಯಾಗಬೇಕು.

। ಸಂದೀಪ್‌, ಪ್ರತಿಮಾಳ ಅಣ್ಣ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ