ಮಹಿಳೆ ಹೊಟ್ಟೆಯಲ್ಲಿತ್ತು 8 ಕೆ.ಜಿ. ದುರ್ಮಾಂಸ ಗೆಡ್ಡೆ!

KannadaprabhaNewsNetwork |  
Published : Jun 04, 2026, 02:45 AM IST
 ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ತಂಡ ಮತ್ತು ಚೇತರಿಸಿಕೊಂಡಿರುವ ಮಹಿಳೆ | Kannada Prabha

ಸಾರಾಂಶ

ಉಡುಪಿ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮಹಿಳೆಯ ಗರ್ಭಕೋಶದಲ್ಲಿದ್ದ ಸುಮಾರು 8 ಕೆಜಿ ದುರ್ಮಾಂಸ ಗೆಡ್ಡೆಯನ್ನು ತೆಗೆದುಹಾಕಲಾಗಿದೆ.

ಉಡುಪಿ: ಉಡುಪಿ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮಹಿಳೆಯ ಗರ್ಭಕೋಶದಲ್ಲಿದ್ದ ಸುಮಾರು 8 ಕೆಜಿ ದುರ್ಮಾಂಸ ಗೆಡ್ಡೆಯನ್ನು ತೆಗೆದುಹಾಕಲಾಗಿದೆ.

44 ವರ್ಷ ವಯಸ್ಸಿನ ಈ ರೋಗಿಯು ಹೊಟ್ಟೆ ನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಯ ನಂತರ ಇದೀಗ ಚೇತರಿಸಿಕೊಳ್ಳುತ್ತಿದ್ದು ಬಾಹ್ಯ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ.ಶಶಾಂಕ್ ಕಿಣಿ, ಡಾ. ಜಾಸ್ಮಿನ್, ಡಾ.ಕವಿತಾ, ಡಾ.ಅಮೃತಾಂಶ್, ಅರವಳಿಕೆ ತಜ್ಞರಾದ ಡಾ. ಸೂರ್ಯನಾರಾಯಣ, ಡಾ.ರಾಜ್ ಗೋಪಾಲ್ ಭಂಡಾರಿ ಹಾಗಾ ಶುಶ್ರೂಷಾಧಿಕಾರಿ ರಕ್ಷಿತಾ, ಸಹಾಯಕಿ ಸಂಗೀತ ಅವರಿದ್ದ ತಂಡವು ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.ಆರ್ಥಿಕವಾಗಿ ಹಿಂದುಳಿದ ಈ ಮಹಿಳೆ ಕಳೆದ 1 ವರ್ಷದಿಂದ ಹೊಟ್ಟೆ ನೋವಿಗೆ ಖಾಸಗಿ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಗುಣಮುಖರಾಗದ ಕಾರಣ ಈ ಮಹಿಳೆಯು ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬಂದಿದ್ದರು. ತಜ್ಞ ವೈದ್ಯರು ಅವರನ್ನು ತಪಾಸಣೆ ಮಾಡಿಸಿದಾಗ ಅವರ ಹೊಟ್ಟೆಯು ಗರ್ಭಿಣಿಯಂತಿದ್ದು, ಅದರಲ್ಲಿ ನೀರು ತುಂಬಿದಂತೆ ಕಂಡುಬಂದಿತ್ತು, ನಂತರ ಅಲ್ಟ್ರಾಸೌಂಡ್ ಮತ್ತು ಸಿಟಿ ಸ್ಕ್ಯಾನ್ ಪರೀಕ್ಷೆ ನಡೆಸಿದಾಗ ಗರ್ಭಕೋಶದಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು.ನಂತರ ಈ ತಜ್ಞ ವೈದ್ಯರ ತಂಡ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಹೆಚ್. ಅಶೋಕ್ ಅವರಲ್ಲಿ ಸಮಾಲೋಚಿಸಿ, ಅವರ ಸಲಹೆಯಂತೆ ಶಸ್ತ್ರಚಿಕಿತ್ಸೆ ನಡೆಸಿ ಈ ಗಡ್ಡೆಯನ್ನು ಹೊರತೆಗೆದಿದ್ದಾರೆ.

ಚೇತರಿಸಿಕೊಂಡಿರುವ ಮಹಿಳೆಯು ಆಸ್ಪತ್ರೆಯ ವೈದ್ಯರಿಗೆ, ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ, ತಮ್ಮಂತಹ ಬಡವರಿಗೆ ಜಿಲ್ಲಾಸ್ಪತ್ರೆಯಲ್ಲಿ ಇಂತಹ ಚಿಕಿತ್ಸೆ ಲಭ್ಯವಾಗುತ್ತಿರುವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಾ. ಅಶೋಕ್ ಅವರು ಇಷ್ಟು ದೊಡ್ಡ ಗಾತ್ರದ ಗರ್ಭಕೋಶದ ಗೆಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ಇಡೀ ತಜ್ಞ ವೈದ್ಯರ ತಂಡ ಹಾಗೂ ಸಿಬ್ಬಂದಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ
ಸತೀಶಗೆ 5ನೇ ಬಾರಿಗೆ ಒಲಿದ ಸಚಿವ ಪಟ್ಟ