ದೇಶಿ ಭತ್ತದ ತಳಿ ಸಂರಕ್ಷಿಸುತ್ತಿರುವ ರೈತರ ಕಾರ್ಯ ಶ್ಲಾಘನೀಯ

KannadaprabhaNewsNetwork |  
Published : Aug 24, 2025, 02:00 AM IST
23ಎಚ್‌ಯುಬ28ದೇಸಿ ಅಕ್ಕಿಯನ್ನು ಕಂಬಳಿಗೆ ಸುರಿಯುವ ಮೂಲಕ ಅಕ್ಕಿ ಮೇಳ ಉದ್ಘಾಟನೆಗೊಂಡಿತು. | Kannada Prabha

ಸಾರಾಂಶ

ಈ ಭಾಗದ ದೇಸಿ ಭತ್ತ ಬೆಳೆಯುವ ರೈತರಿಗೆ ಪ್ರಯೋಜನವಾಗಲೆಂಬ ಉದ್ದೇಶದಿಂದ ಉತ್ತರ ಕರ್ನಾಟಕದ ಮೊದಲ ಕೆಂಪಕ್ಕಿ ಮಿಲ್​ ಅನ್ನು ಶಿಗ್ಗಾಂವಿ ಸಮೀಪದ ತಿಮ್ಮಾಪುರ ಬಳಿ ₹50 ಲಕ್ಷ ವೆಚ್ಚದಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ.

ಹುಬ್ಬಳ್ಳಿ: ರೈತರು ಸಾಂಪ್ರದಾಯಿಕ ಮತ್ತು ದೇಸಿ ಭತ್ತಗಳನ್ನು ಸಂರಕ್ಷಿಸಿ, ಬೆಳೆಸಿ ಗ್ರಾಹಕರಿಗೆ ನೇರ ಮಾರಾಟ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‌ಮೆಂಟ್‌ನ ವಿಭಾ ವರ್ಷಿನಿ ಅಭಿಪ್ರಾಯ ಪಟ್ಟರು.

ಇಲ್ಲಿನ ಗೋಕುಲ ರಸ್ತೆಯ ಅರ್ಬನ್​ ಓಯಾಸಿಸ್​ ಮಾಲ್​ನಲ್ಲಿ ಶನಿವಾರ ನಡೆದ ಎರಡು ದಿನಗಳ ದೇಸಿ ಅಕ್ಕಿ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಜೆ. ಕೃಷ್ಣ ಪ್ರಸಾದ ಮಾತನಾಡಿ, ಈ ಭಾಗದ ದೇಸಿ ಭತ್ತ ಬೆಳೆಯುವ ರೈತರಿಗೆ ಪ್ರಯೋಜನವಾಗಲೆಂಬ ಉದ್ದೇಶದಿಂದ ಉತ್ತರ ಕರ್ನಾಟಕದ ಮೊದಲ ಕೆಂಪಕ್ಕಿ ಮಿಲ್​ ಅನ್ನು ಶಿಗ್ಗಾಂವಿ ಸಮೀಪದ ತಿಮ್ಮಾಪುರ ಬಳಿ ₹50 ಲಕ್ಷ ವೆಚ್ಚದಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.

ಶಿಗ್ಗಾಂವಿ, ಕಲಘಟಗಿ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ರೈತರು ದೇಸಿ ಭತ್ತ ಬೆಳೆಯುತ್ತಾರೆ. ಆದರೆ, ದೇಸಿ ಅಕ್ಕಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಕೆಲಸ ಆಗುತ್ತಿಲ್ಲ. ಹೀಗಾಗಿ, ಸಹಜ ಸಮೃದ್ಧ ಸಂಸ್ಥೆ ವತಿಯಿಂದ ರೈತರಿಗೆ ಮಾರುಕಟ್ಟೆ ಒದಗಿಸುವ ಜತೆಗೆ ಜನರಿಗೆ ಗುಣಮಟ್ಟದ ಆಹಾರ ಧಾನ್ಯ ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ತಾಯಿ ಎದೆಹಾಲು ಹೆಚ್ಚಿಸುವ, ಪಾರ್ಶ್ವವಾಯು ತಡೆಗಟ್ಟುವ, ಮಧುಮೇಹ, ರಕ್ತದೊತ್ತಡ ನಿಯಂತ್ರಿಸುವ, ನರದೌರ್ಬಲ್ಯ ತಡೆಯುವ ಅನೇಕ ಔಷಧಿಗುಣವುಳ್ಳ ಶಕ್ತಿ ದೇಸಿ ಅಕ್ಕಿಗಿದೆ. ಹೀಗಾಗಿ, ರೈತರು ಸಿರಿಧಾನ್ಯ ಮತ್ತು ಔಷಧೀಯ ಗುಣವುಳ್ಳ ದೇಸಿ ಭತ್ತದ ಬೆಳೆಗೆ ಆದ್ಯತೆ ನೀಡಬೇಕು. ಜನರು ಸಹ ಇವುಗಳನ್ನೇ ಬಳಸುವ ಮೂಲಕ ಆರೋಗ್ಯಯುತ ಜೀವನ ನಡೆಸಬೇಕು ಎಂದು ಹೇಳಿದರು.

ಈಗಾಗಲೇ ಧಾರವಾಡದಲ್ಲಿ ಪ್ರತಿ ಗುರುವಾರ ದೇಸಿ ಆಹಾರ ಧಾನ್ಯದ ಮಾರಾಟ ನಡೆಯುತ್ತಿದೆ. ಹುಬ್ಬಳ್ಳಿಯ ಅರ್ಬನ್​ ಓಯಾಸಿಸ್​ ಮಾಲ್​ನಲ್ಲಿಯೂ ಪ್ರತಿ ಭಾನುವಾರ ಈ ಮಾರುಕಟ್ಟೆ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಮೇ‍ಳ ಉದ್ಘಾಟಿಸಿ ಮಾತನಾಡಿದ ಅರ್ಬನ್​ ಓಯಾಸಿಸ್​ ಮಾಲ್​ ನಿರ್ದೇಶಕ ದೀಪಕ ಲುಲ್ಲಾ, ಸ್ವಲ್ಪ ಮಟ್ಟಿನ ಹಣ ಖರ್ಚಾದರೂ ಸರಿ ಜನರು ಸಾವಯವ ಆಹಾರ ಧಾನ್ಯಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು. ಮಾಲ್​ನ ಮತ್ತೊಬ್ಬ ನಿರ್ದೇಶಕ ಸುನಿಲ ಬಜಾಜ್​ ಅತಿಥಿಯಾಗಿದ್ದರು.

ಅಕ್ಕಿ ಮೇಳದಲ್ಲಿ ಸುಮಾರು 32 ಬಗೆಯ ಅಕ್ಕಿ ಪ್ರದರ್ಶನ ಮತ್ತು 12 ಬಗೆಯ ಅಕ್ಕಿ ಮಾರಾಟ ವ್ಯವಸ್ಥೆ ಮಾಡಲಾಗಿತ್ತು. ಡೌನ್​ ಟು ಅರ್ಥ್​ ಸಂಸ್ಥೆಯ ವಿಭಾ, ರೈತ ಮಹಿಳೆಯರಾದ ಪ್ರೇಮಾ ಲಕ್ಕುಂಡಿ ಹಾಗೂ ಭಾಗ್ಯಶ್ರೀ ಮಾಣಿಕನವರ ಮಾತನಾಡಿದರು. ವೀರೇಶ ಹಿರೇಮಠ ನಿರೂಪಿದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!