74 ಕೆರೆ ನೀರು ತುಂಬಿಸುವ ಕಾಮಗಾರಿಗೆ ಮೂಹೂರ್ತ

KannadaprabhaNewsNetwork |  
Published : Aug 25, 2025, 01:00 AM IST
23ಕೆ.ಡಿ.ಜಿ.1- ಹೂವಿನಹಡಗಲಿ ತಾಲೂಕು ಗುಜನೂರು ಗ್ರಾಮದ ಜಮೀನಿನಲ್ಲಿ ಕಲ್ಲುಬಂಡೆ ಅಗೆಯುತ್ತಿರುವುದು. | Kannada Prabha

ಸಾರಾಂಶ

ಕೂಡ್ಲಿಗಿ ಕ್ಷೇತ್ರದ 74 ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ನೀರು ತುಂಬಿಸುವ ₹670 ಕೋಟಿ ವೆಚ್ಚದ ಮಹತ್ವದ ಯೋಜನೆಯ ಶೇ. 95ರಷ್ಟು ಕಾಮಗಾರಿ ಮುಗಿದಿದೆ.

ಇನ್ನೂ 3ರಿಂದ 4 ಪೈಪ್ ಹಾಕುವುದಷ್ಟೇ ಬಾಕಿ । ಶಾಸಕರ ಕಾಳಜಿಯಿಂದ ಕೆರೆಗೆ ನೀರು ಬರುವುದು ಸನ್ನಿಹಿತ

ಭೀಮಣ್ಣ ಗಜಾಪುರಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಕೂಡ್ಲಿಗಿ ಕ್ಷೇತ್ರದ 74 ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ನೀರು ತುಂಬಿಸುವ ₹670 ಕೋಟಿ ವೆಚ್ಚದ ಮಹತ್ವದ ಯೋಜನೆಯ ಶೇ. 95ರಷ್ಟು ಕಾಮಗಾರಿ ಮುಗಿದಿದೆ. ಇದಕ್ಕಾಗಿಯೇ 2 ವರ್ಷಗಳಿಂದ ತಾಲೂಕಿನ ರೈತರು ಕಾಯಬೇಕಾದ ಪರಿಸ್ಥಿತಿ ಬಂದಿತ್ತು. ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರ ಕಾಳಜಿ, ಕ್ರಿಯಾಶೀಲತೆಯಿಂದ ಈಗ ಆ ಯೋಜನೆ ಸಾಕಾರವಾಗಿದೆ.

ಹೂವಿನಹಡಗಲಿ ಸಮೀಪ 3-4 ಪೈಪ್ ಹಾಕಿದರೆ ಕಾಮಗಾರಿ ಮುಗಿದ ಹಾಗೆಯೇ, ಇನ್ನೇನಿದ್ದರೂ ಕೆರೆಗೆ ನೀರು ತುಂಬಿಸುವುದಕ್ಕೆ ಚಾಲನೆ ನೀಡುವುದಷ್ಟೇ ಬಾಕಿ ಇದೆ.

ತಾಲೂಕಿನಲ್ಲಿ ನಿರಂತರ ಬರದಿಂದ ಕೆರೆಕಟ್ಟೆಗಳಲ್ಲಿ ನೀರಿಲ್ಲದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಜನ ಜಾನುವಾರುಗಳು ಕುಡಿಯುವ ನೀರಿಗೆ ಕೊಳವೆಬಾವಿಗಳನ್ನೇ ಆಶ್ರಯಿಸಬೇಕಿದೆ. ಕೊಳವೆಬಾವಿಗಳಲ್ಲೂ ಅಪಾಯಮಟ್ಟದ ಪ್ಲೋರೈಡ್ ಅಂಶವಿದ್ದರಿಂದ ಇದನ್ನು ಮನಗಂಡು ಈ ಹಿಂದಿನ ಶಾಸಕರಾಗಿದ್ದ ಎನ್.ವೈ. ಗೋಪಾಲಕೃಷ್ಣ ಅವರ ದೂರದೃಷ್ಟಿ, ಜನಪರ ಕಾಳಜಿ, ರಾಜ್ಯಸರ್ಕಾರದ ಸ್ಪಂದನೆಯ ಫಲವಾಗಿ ₹670 ಕೋಟಿ ವೆಚ್ಚದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಂದಿನ ಬಿಜೆಪಿ ಸರ್ಕಾರ ಅನುಮೋದನೆ ನೀಡಿತ್ತು. 2 ಹಂತದಲ್ಲಿ ಯೋಜನೆ ರೆಡಿಯಾಗಿ ಈಗಾಗಲೇ ಕಾಮಗಾರಿ ಮುಗಿಯಿತು ಎನ್ನುವಷ್ಟರಲ್ಲಿ ವಿಧಾನಸಭಾ ಚುನಾವಣೆ ಬಂತು ಎನ್.ವೈ. ಗೋಪಾಲಕೃಷ್ಣ ಕೂಡ್ಲಿಗಿ ಕ್ಷೇತ್ರ ಬಿಟ್ಟು ಸ್ವಕ್ಷೇತ್ರ ಮೊಳಕಾಲ್ಮೂರಿಗೆ ಹೋಗಿ ಅಲ್ಲಿ ಶಾಸಕರಾದರು. ಕೂಡ್ಲಿಗಿ ಕ್ಷೇತ್ರಕ್ಕೆ ಡಾ. ಎನ್.ಟಿ. ಶ್ರೀನಿವಾಸ್ ಶಾಸಕರಾದರು. ಅವರ ಅವಧಿಯಲ್ಲಿ ಶೇ. 10ರಷ್ಟು ಉಳಿದಿದ್ದ ಕಾಮಗಾರಿ ಪೂರ್ಣಗೊಳಿಸುವುದು ಸವಾಲಾಗಿತ್ತು. ಆ ಸವಾಲನ್ನು ಮೆಟ್ಟಿ ನಿಂತು ಕೂಡ್ಲಿಗಿ ಕ್ಷೇತ್ರಕ್ಕೆ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ನೀರು ತರುವ ಶಪಥ ಮಾಡಿದ್ದಾರೆ. ಹೂವಿನಹಡಗಲಿ ಸಮೀಪ ಕೆಲವು ರೈತರು ತಮ್ಮ ತೋಟಗಾರಿಕೆ ಬೆಳೆಯಲ್ಲಿ ಪೈಪ್‌ಲೈನ್ ತೆಗೆದುಕೊಂಡು ಹೋಗಲು ಬಿಡದೇ ನ್ಯಾಯಾಲಯದ ಮೊರೆ ಹೋಗಿ ತಡೆಯೊಡ್ಡಿದ್ದರು. ನ್ಯಾಯಾಲಯ ತಡೆ ತೆರವು ಮಾಡಿ ಆದೇಶ ಹೊರಡಿಸಿದೆ. ಹಾಗಾಗಿ ಈಗ ಕಾಮಗಾರಿ ಚುರುಕುಗೊಂಡಿದೆ. ಹೂವಿನಹಡಗಲಿ ತಾಲೂಕು ಗುಜನೂರು ಸಮೀಪ ಜಮೀನಿನಲ್ಲಿ ಕಲ್ಲಬಂಡೆ ಬಂದಿದೆ, ಈಗ ಬ್ಲಾಸ್ಟ್ ಕಾರ್ಯ ನಡೆಯುತ್ತಿದೆ. ಮೂರ್ನಾಲ್ಕು ಪೈಪ್ ಹಾಕಿದರೆ ಕಾಮಗಾರಿ ಮುಗಿದ ಬಳಿಕ ತಾಲೂಕಿನ 74 ಕೆರೆಗಳಿಗೆ ನೀರು ಬರಲಿದೆ. ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಮುಗಿದಿದೆ. ಆದಷ್ಟು ಬೇಗ 74 ಕೆರೆಗಳಿಗೆ ನೀರು ತುಂಬಿಸಲಾಗುವುದು. ಇದಕ್ಕಾಗಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದ್ದಾರೆ.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ