ಕನ್ನಡಪ್ರಭ ವಾರ್ತೆ ಮುಧೋಳ
ವಿಜಯದಶಮಿ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಧೋಳ ಘಟಕದಿಂದ ಭಾನುವಾರ ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಆರ್‌ಎಸ್‍ಎಸ್ ಗಣವೇಷಧಾರಿ ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಈ ವೇಳೆ ಭಾಗವಹಿಸಿ ಮಾತನಾಡಿದ ಅವರು, ಸಂಘ ಸ್ಥಾಪನೆಯಾಗಿ 100 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ಕುಟುಂಬ ಪದ್ಧತಿ ಎಲ್ಲರೊಂದಿಗೆ ಸಾಮರಸ್ಯದಿಂದ ಬಾಳುವುದು. ಪರಿಸರ ಸಂರಕ್ಷಣೆ ಹಾಗೂ ನಾಗರಿಕ ಪ್ರಜ್ಞೆಗಳಂತಹ ಹಲವು ವಿಚಾರ ನಾವೆಲ್ಲರೂ ಅಳವಡಿಸಿಕೊಂಡು ದೇಶ ಮುನ್ನಡೆಸಬೇಕಾಗಿದೆ. ಇಡೀ ಜಗತ್ತು ಭಾರತದೆಡೆ ಅಶಾಭಾವದಿಂದ ನೋಡುತ್ತಿದೆ. ಜಗತ್ತು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಭಾರತೀಯ ಜೀವನ ಪದ್ಧತಿಯಲ್ಲಿ ಪರಿಹಾರವಿದೆ ಎಂದರು.
ನಿವೃತ್ತ ಸರ್ಕಾರಿ ನೌಕರ ಡಾ.ಅಶೋಕ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಭಾರತ ಶಾಂತಿ ಹಾಗೂ ಸೌಹಾರ್ದತೆಯಿಂದ ಕೂಡಿದ ದೇಶವಾಗಿದೆ. ಸಂಘಟನೆಯಲ್ಲಿ ಶಕ್ತಿ ಇದೆ. ಯುವಕರು ಈ ಶಕ್ತಿಯನ್ನು ದೇಶದ ರಕ್ಷಣೆಗೆ ಬಳಸಿಕೊಳ್ಳಿರಿ ಎಂದರು.ಸಂಘದ ಸಾಂಪ್ರದಾಯಿಕ ಉಡುಗೆ, ಟೊಪ್ಪಿ ಧರಿಸಿದ ಸಾವಿರಾರು ಸ್ವಯಂ ಸೇವಕರು ಕೈಯಲ್ಲಿ ಲಾಠಿ ಹಿಡಿದು ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ಚಿಕ್ಕಮಕ್ಕಳು ಸಹ ಗಣವೇಷದಲ್ಲಿ ಭಾಗವಹಿಸಿ ಹಿರಿಯ ಸ್ವಯಂ ಸೇವಕರೊಂದಿಗೆ ಉತ್ಸಾಹದ ಹೆಜ್ಜೆ ಹಾಕಿದರು.
ಗಾಂಧೀ ಸರ್ಕಲ್, ಕಲ್ಮೇಶ್ವರ ಸರ್ಕಲ್, ಜಡಗಾಬಾಲಾ ಸರ್ಕಲ್, ಶಿವಾಜಿ ಸರ್ಕಲ್ ಮಾರ್ಗದಲ್ಲಿ ಬಣ್ಣಬಣ್ಣದ ರಂಗೋಲಿ ಗಣವೇಷಧಾರಿಗಳಿಗೆ ಅಭೂತಪೂರ್ವ ಸ್ವಾಗತ ಕೋರಲಾಯಿತು. ನಂತರ ಹೇಮರಡ್ಡಿ ಮಲ್ಲಮ್ಮ ಆವರಣಕ್ಕೆ ಪಥಸಂಚಲನ ತಲುಪಿ ಸಂಪನ್ನಗೊಂಡಿತು. ಪ್ರಕಾಶ ರಾಮತೀರ್ಥ ಸ್ವಾಗತಿಸಿ, ಅತಿಥಿ ಪರಿಚಯಿಸಿದರು, ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.