ಕನ್ನಡಪ್ರಭ ವಾರ್ತೆ ನಾಗಮಂಗಲ
ಕೇಂದ್ರ ಸರ್ಕಾರವು ಹಿಂದಿಯನ್ನು ಎಲ್ಲರ ತಲೆಯ ಮೇಲೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಕನ್ನಡ ಕಾದಂಬರಿಕಾರ ಕುಂ.ವೀರಭದ್ರಪ್ಪ ದೂರಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕನ್ನಡ ಸಂಘದಿಂದ ಆಯೋಜಿಸಿದ್ದ 16ನೇ ನಾಗರಂಗ ನಾಟಕೋತ್ಸವದಲ್ಲಿ ಮಾತನಾಡಿ, ಪ್ರಪಂಚದಲ್ಲಿ ಹೆಚ್ಚು ಸಂತಸ ತರುವ ದೇಶವಿದ್ದರೆ ಅದು ಭಾರತ. ಇಲ್ಲಿ ನಾವೆಲ್ಲರೂ ನಮ್ಮ ಭಾಷೆಯಲ್ಲೇ ಮಾತನಾಡಬೇಕು. ಅಳಬೇಕು, ನಗಬೇಕು ಮತ್ತು ಸಂಭ್ರಮಿಸಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಐದು ಗ್ಯಾರಂಟಿ ನೀಡುವುದಕ್ಕಿಂತ ಕನ್ನಡ ಭಾಷೆಯ ಗ್ಯಾರಂಟಿ ನೀಡಬೇಕು. ಸರ್ಕಾರವೂ ಸಹ ಕನ್ನಡ ಲೇಖಕರ ಕೃತಿಗಳನ್ನು ಖರೀದಿಸಿ ಪ್ರಕಟಿಸುವ ಕೆಲಸ ಮಾಡಬೇಕು. ಭಾಷೆಗೆ ಪ್ರಮುಖ್ಯತೆ ನೀಡಬೇಕು ಎಂದು ಆಗ್ರಹಿಸಿದರು.ಕನ್ನಡ ಸಂಘವು ಹಲವು ವರ್ಷಗಳಿಂದ ಕನ್ನಡ ಹಬ್ಬದ ವಾತಾವರಣವನ್ನು ತಾಲೂಕಿನಲ್ಲಿ ಸೃಷ್ಟಿ ಮಾಡಿದೆ. ಸುಮಾರು 52 ವರ್ಷದ ಇತಿಹಾಸ ಇರುವ ನಾಗಮಂಗಲದ ಕನ್ನಡ ಸಂಘಕ್ಕೆ ರಾಜ್ಯ ಸರ್ಕಾರ ಒಂದು ಕಟ್ಟಡ ಮಂಜೂರು ಮಾಡದಿರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಜನರು ಇಷ್ಟು ಸಂತೋಷದಿಂದ ಕನ್ನಡ ಹಬ್ಬವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಕನ್ನಡ ಕೆಲವು ವರ್ಷಗಳಲ್ಲಿ ನಾಶವಾಗುವ ಭಾಷೆ ಎಂಬ ಅಪವಾದವಿದೆ. ಆದರೆ, ಈ ಕನ್ನಡ ಪರ ಹಬ್ಬವನ್ನು ನೋಡಿದರೆ ಕನ್ನಡಕ್ಕೆ ಉಜ್ವಲ ಭವಿಷ್ಯವಿದೆ. ಸೂರ್ಯ ಚಂದ್ರರಿರುವವರೆಗೂ ಕನ್ನಡ ಭಾಷೆ ಶಾಶ್ವತವಾಗಿರುತ್ತದೆ ಎಂದರು.ಕನ್ನಡ ಭಾಷೆಯನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಕನ್ನಡ ಭಾಷೆಯಲ್ಲಿ 52 ಸಂಬಂಧ ವಾಚಕಗಳಿವೆ. ಆದರೆ, ಇಂಗ್ಲಿಷ್‌ನಲ್ಲಿ ಕೇವಲ ಎರಡಿವೆ. ಕನ್ನಡ ಭಾಷೆಯು ಸಂಬಂಧ ಬಾಂಧವ್ಯಗಳನ್ನು ಬೆಸೆಯುತ್ತದೆ. ಆದ್ದರಿಂದ ನಮ್ಮ ಮಕ್ಕಳಿಗೆ ಕನ್ನಡ ಕಲಿಸಬೇಕು. ಕನ್ನಡ ಭಾಷೆಗೆ ಎಂದಿಗೂ ದ್ರೋಹ ಬಗೆಯಬಾರದು ಎಂದರು.
ಕನ್ನಡ ಭಾಷೆ ಉಳಿದಿದೆ ಎಂದರೆ ಅದು ಕೇವಲ ಗ್ರಾಮೀಣ ಭಾಗದ ಜನರಿಂದ ಮಾತ್ರ. ಪ್ರತಿಯೊಬ್ಬರು ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವ ಪ್ರವೃತ್ತಿ ಬೆಳಸಿಕೊಳ್ಳಬೇಕು. ಕನ್ನಡ ಭಾಷಗೆ ಅನ್ನಕೊಡುವ ಶಕ್ತಿಯಿಲ್ಲ ಎಂಬ ಮಾತಿದೆ. ಅದು ನಿಜವಾಗಿಯೂ ತಪ್ಪು. ನೀವು ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಸೇರಿಸುವ ಕೆಲಸ ಮಾಡಬೇಕು ಎಂದರು.ನಾನು ಕೂಡ ನನ್ನ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸಿದ್ದೇನೆ. ಕನ್ನಡ ಭಾಷೆ ಕಲಿತರೆ ಅದು ಎಲ್ಲಾ ಭಾಷೆಯನ್ನು ಕಲಿಸುತ್ತದೆ. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವವರಿಗೆ ಮುಂದಿನ ದಿನಗಳಲ್ಲಿ ವಿಶೇಷೆ ಸೌಲಭ್ಯ ಕಲ್ಪಿಸುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು.
ಇಂದು ಕಾಕದೋಷ ನಾಟಕ ಪ್ರದರ್ಶನನಾಗಮಂಗಲ:
ಪಟ್ಟಣದ ಕನ್ನಡ ಸಂಘವು ಸರ್ಕಾರಿ ಪದವಿ ಪೂರ್ವಕಾಲೇಜು ಆವರಣದಲ್ಲಿ ಆಯೋಜಿಸಿರುವ ನಾಗರಂಗ ನಾಟಕೋತ್ಸವದ 3ನೇ ನ.27 ರಂದು ಸಂಜೆ 7 ಗಂಟೆಗೆ ಬೆಂಗಳೂರಿನ ಥಿಯೇಟರ್ ಕಲೆಕ್ಟಿವ್ ಪ್ರಸ್ತುತ ಪಡಿಸುವ ವೆಂಕಟೇಶ್ ಪ್ರಸಾದ್ ನಿರ್ದೇಶಿಸಿರುವ ಕಾಕದೋಷ ನಾಟಕ ಪ್ರದರ್ಶನಗೊಳ್ಳಲಿದೆ.ನಾಟಕದ ಸಾರಾಂಶ: ಹಳೆ ತಲೆಮಾರಿನ ಕೊಂಡಿಯಾಗಿರುವ ಅತ್ತೆ ಮತ್ತು ಸೊಸೆ ತಲೆಮಾರಿನ ಭವಿಷ್ಯದ ಸಂಕೇತವಾಗಿರುವ ಮಗ, ಗಂಡನನ್ನು ಕಳೆದುಕೊಂಡ ತಾಯಿಗೆ ಹೀನ ಕೃತ್ಯವೊಂದರಲ್ಲಿ ಆರೋಪಿಯಾಗಿ ಮಗ ಮನೆ ಸೇರಿದಾಗ ತಾಯಿಯ ಆಯ್ಕೆಗಳನ್ನು ಕುರಿತು ವಿಶ್ಲೇಷಿಸುವ ಕಥಾನಕವೇ ಈ ನಾಟಕ. ಖ್ಯಾತ ನಾಟಕಕಾರ ಹೆನ್ರಿಕ್ ಇಬ್ಸನ್‌ನ ಪೋಸ್ಟ್ ನಾಟಕದ ಛಾಯೆಯೂ ಹೌದು.