ಹಾನಗಲ್ಲ: ಮಾನವೀಯ ಮೌಲ್ಯಗಳು ನಾಶವಾಗುತ್ತಿವೆ. ಭಕ್ತಿ, ಶ್ರದ್ಧೆ ಕಣ್ಮರೆಯಾಗುತ್ತಿವೆ. ಇಂಥ ಸಂದಿಗ್ಧ ಸನ್ನಿವೇಶದಲ್ಲಿ ಸಮಾಜವನ್ನು ತಿದ್ದಿ, ಸರಿದಾರಿಗೆ ಕರೆತರುವ ಕೆಲಸ ಸಾಧು, ಸಂತರಿಂದ ನಡೆಯಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಹೋತನಹಳ್ಳಿ ಗ್ರಾಮದ ಸಿದ್ದಾರೂಢ ಮಠದಲ್ಲಿ ಆಯೋಜಿಸಲಾಗಿದ್ದ ಸಿದ್ದಾರೂಢ ಸ್ವಾಮೀಜಿ ಪಾದಾರ್ಪಣೆಯ ಶತಮಾನೋತ್ಸವ, ಸದ್ಗುರು ಶಂಕರಾನಂದ ಸ್ವಾಮೀಜಿಯ ಷಷ್ಠಬ್ಧಿ ಮಹೋತ್ಸವ ಹಾಗೂ ಸಿದ್ಧಾರೂಢರ ನೂತನ ಮಹಾರಥ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಕ್ತರನ್ನು ಉದ್ಧರಿಸಲು, ಸಮಾಜವನ್ನು ಬಡಿದೆಬ್ಬಿಸಲು ನೂರು ವರ್ಷಗಳ ಹಿಂದೆಯೇ ಸಿದ್ಧಾರೂಢರು ದೇಶ ಪರ್ಯಟನೆ ಮಾಡಿದ್ದಾರೆ. ತಾಲೂಕಿನ ಹೋತನಹಳ್ಳಿ, ಬಾಳಂಬೀಡ, ಕಾಲ್ವೆಯಲ್ಲಾಪುರ ಗ್ರಾಮಗಳಿಗೆ ಭೇಟಿ ನೀಡಿ ಈ ಭೂಮಿ ಪವಿತ್ರಗೊಳಿಸಿದ್ದಾರೆ. ಹೋತನಹಳ್ಳಿಯ ಸಿದ್ಧಾರೂಢ ಮಠ ಸಿದ್ಧಾರೂಢರ ಪಾದಾರ್ಪಣೆಯ ಶತಮಾನೋತ್ಸವಕ್ಕೆ ಸಾಕ್ಷಿಯಾಗುತ್ತಿದೆ. ಸಂಸ್ಕೃತಿ, ಸಂಪ್ರದಾಯಗಳ ಪುನರ್ ಪ್ರತಿಷ್ಠಾಪನೆಯಾಗಬೇಕಿದ್ದು, ಆಗ ಮಾತ್ರ ಸಂಕಷ್ಟಗಳು ದೂರಾಗಿ ಪ್ರತಿಯೊಬ್ಬರೂ ಸಹ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ ಎಂದರು. ಯಳವಟ್ಟಿಯ ಸಿದ್ದಾಶ್ರಮದ ಯೋಗಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಸೆಗಳಿಗೆ ಬೆನ್ನು ಹತ್ತಿ ನೆಮ್ಮದಿ ಕಳೆದುಕೊಂಡು ಬದುಕುತ್ತಿದ್ದೇವೆ. ದಿಢೀರ ಶ್ರೀಮಂತರಾಗುವ ದಾವಂತದಲ್ಲಿ ತಪ್ಪು ಮಾರ್ಗದತ್ತ ಮುಖಮಾಡಿದ್ದೇವೆ. ಇಂದಿನ ಜಂಜಾಟದ ದಿನಮಾನಗಳಲ್ಲಿ ಭಾವನೆ ಕಳೆದುಕೊಂಡು ಭಾವುಕರಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ಬದುಕನ್ನು ರೂಪಿಸಿಕೊಳ್ಳುವಲ್ಲಿ ಪ್ರತಿಯೊಬ್ಬರೂ ಗಮನ ನೀಡಬೇಕಿದೆ. ಸನ್ಮಾರ್ಗದಲ್ಲಿ ಗುರಿ ಮುಟ್ಟುವಲ್ಲಿ ಶ್ರಮ ವಹಿಸಿದರೆ ಯಶಸ್ಸು ಸುಲಭ ಸಾಧ್ಯವಾಗಲಿದೆ. ಸಂತ, ಶರಣ, ಮಹಾತ್ಮರ ನಡೆ, ನುಡಿ, ತತ್ವಗಳನ್ನು ಮೈಗೂಡಿಸಿಕೊಂಡು ಮಾನಸಿಕ ಶಾಂತಿ ಕಂಡುಕೊಳ್ಳುವಂತೆ ಕರೆ ನೀಡಿದರು. ಹೋತನಹಳ್ಳಿಯ ಸದ್ಗುರು ಶಂಕರಾನಂದ ಸ್ವಾಮೀಜಿ, ತಂಗಡಗಿಯ ಹಡಪದ ಅಪ್ಪಣ್ಣ ಪೀಠದ ಅನ್ನದಾನಿ ಭಾರತಿ ಸ್ವಾಮೀಜಿ, ಕೂಸನೂರಿನ ತಿಪ್ಪಯ್ಯಸ್ವಾಮಿ ಆಶ್ರಮದ ಜ್ಯೋತಿರ್ಲಿಗಾನಂದ ಸ್ವಾಮೀಜಿ, ಬೆನಕನಕೊಪ್ಪದ ಸದ್ಗುರು ಆಶ್ರಮದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅರಳೇಶ್ವರ ಗ್ರಾಪಂ ಅಧ್ಯಕ್ಷ ರಾಮಣ್ಣ ಕುರಿಯವರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಎನ್.ಬಿ. ಪೂಜಾರ, ಚಂದ್ರಶೇಖರ ಗೂಳಿ, ಕೊಟ್ರಪ್ಪ ಅಂಗಡಿ, ಎಂ.ಪಿ. ಮೂಡೂರ, ಸಿದ್ದಲಿಂಗಪ್ಪ ಶಂಕರಿಕೊಪ್ಪ, ಶಿವಾನಂದ ಸಂಗೂರಮಠ, ದಯಾನಂದ ಕನ್ನಕ್ಕನವರ, ಸಿದ್ದಪ್ಪ ತಳವಾರ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.