ಆರ್‌ಎಸ್‌ಎಸ್‌ನಿಂದ ಸಮಾಜ-ದೇಶದ ಅಸ್ಮಿತೆ ಉಳಿಸುವ ಕೆಲಸ

KannadaprabhaNewsNetwork | Published : Feb 28, 2024 2:30 AM

ಸಾರಾಂಶ

ಸಮಾಜ ಹಾಗೂ ದೇಶದ ಅಸ್ಮಿತೆ ಉಳಿಸಿ ಬೆಳೆಸುವ ಕೆಲಸ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳಿಂದ ಆಗುತ್ತಿದೆ.

ಕಾರವಾರ:

ಸಮಾಜ ಹಾಗೂ ದೇಶದ ಅಸ್ಮಿತೆ ಉಳಿಸಿ ಬೆಳೆಸುವ ಕೆಲಸ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳಿಂದ ಆಗುತ್ತಿದೆ ಎಂದು ಸಂಘದ ಪ್ರಾಂತ ಸೇವಾ ಪ್ರಮುಖ ಡಾ. ಸುರೇಶ ಹೆಗಡೆ ಹೇಳಿದರು.

ಕೈಗಾದ ರಾಮಲಿಂಗೇಶ್ವರ ಶಾಖೆಯ ಶಾಖಾ ವಾರ್ಷಿಕೋತ್ಸವದಲ್ಲಿ ಮುಖ್ಯ ವಕ್ತಾರಾಗಿ ಅವರು ಪಾಲ್ಗೊಂಡು ಮಾತನಾಡಿದರು.

ಸಂಘ ಒಂದು ಶಾಲೆಯಿದ್ದಂತೆ ಈ ಶಾಲೆಯಲ್ಲಿ ವ್ಯಕ್ತಿಯಿಂದ ಸಮಾಜಕ್ಕೆ ಅಗತ್ಯವಾಗುವ ಎಲ್ಲ ರೀತಿಯ ಸಂಸ್ಕಾರಗಳು ಸಿಗುತ್ತವೆ. ಈ ಶಾಲೆಯ ತರಗತಿ ಅಂದರೆ ಅದು ಶಾಖೆ. ಸಂಘದ ಸ್ವಯಂಸೇವಕರು ನಿತ್ಯ ಶಾಖೆಯ ಮೂಲಕ ಸಂಸ್ಕಾರ ಪಡೆಯುತ್ತಿದ್ದಾರೆ. ಒಂದುಗಂಟೆಯ ಶಾಖಾ ಅವಧಿಯಲ್ಲಿ ವ್ಯಕ್ತಿತ್ವ ನಿರ್ಮಾಣದ ಸಂಸ್ಕಾರ ಪಡೆಯುತ್ತಾನೆ. ತನ್ಮೂಲಕ ಸಮಾಜದ ಹಾಗೂ ದೇಶದ ಅಸ್ಮಿತೆ ಉಳಿಸಿ-ಬೆಳೆಸುವ ಕೆಲಸ ಆಗುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ, ಎಲ್ಲಾ ಸಂಘಗಳಂತೆ ಅಲ್ಲ, ಇದು ತೀರಾ ಭಿನ್ನ, ಇದಕ್ಕೆ ಒಂದು ನಿಶ್ಚಿತ ಗುರಿ ಇದೆ, ನಿಗದಿತ ಪಥ ಇದೆ, ನಿಖರವಾದ ಧ್ಯೇಯ ಇದೆ, ಅದರಂತೆಯೇ ಮುನ್ನಡೆಯುತ್ತಿದೆ ಎಂದು ಹೇಳಿದರು.ಯಾವುದೇ ಮತ, ಪಂಥದವರಾಗಿರಲಿ ಅವರು ನಮ್ಮ ಅಣ್ಣ-ತಮ್ಮಂದಿರು, ಅವರೂ ಸಹ ಹಾಗೆಯೇ ತಿಳಿದರೆ ಈ ದೇಶದ ಮೂಲ ತತ್ವ ಉಳಿಯುತ್ತದೆ. ಅದನ್ನು ಸಂಘ ಮಾಡುತ್ತಿದೆ. ನಾವು ಸರ್ವ ವ್ಯಾಪಿ ಮತ್ತು ಸರ್ವಸ್ಪರ್ಷಿ ಸಂಕಲ್ಪ ಮಾಡೋಣ ಎಂದು ಅವರು ಕರೆ ನೀಡಿದರು.

ಪ್ರತಿನಿತ್ಯ ಸುದ್ದಿಯನ್ನು ಮನೆ-ಮನೆಗೆ ಪತ್ರಿಕೆಗಳ ಮೂಲಕ ತಲುಪಿಸುವ ಕಾಯಕ ಮಾಡುತ್ತಿರುವ ಸದಾಶಿವಗಡದ ದುರ್ಗಾಪ್ರಸಾದ್ ವಾಘ್ ಮತ್ತು ಮಲ್ಲಾಪುರ ಲಕ್ಷ್ಮೀನಗರ ಭಾಗದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಬಾಣಸಿಗನಾಗಿ ಭೋಜನ ಪ್ರಸಾದ ತಯಾರಿಸುವ ದಾನೇಶ್ವರ ಕೃಷ್ಣಾಚಂದ್ರ ಸಾಹು ಹಾಗೂ ಸ್ವಸ್ಥ ಸಮಾಜಕ್ಕೆ ಅಗತ್ಯವಾದ ಸ್ವಚ್ಛತಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ವೆಂಕಣ್ಣ ಹನುಮಂತಪ್ಪ ಇಳಿಗೇರ ಅವರನ್ನು ಸನ್ಮಾನಿಸಲಾಯಿತು.

Share this article