ರೋಣ: ತಮ್ಮ ಪ್ರಾಣವನ್ನೇ ಲೆಕ್ಕಿಸದೇ ದೇಶ ರಕ್ಷಣೆಗೆ ಹೋರಾಡುವ ನಮ್ಮ ಹೆಮ್ಮೆಯ ಸೈನಿಕರು ಹಾಗೂ ದೇಶಕ್ಕೆ ಅನ್ನ ನೀಡುವ ರೈತರ ಕಾರ್ಯ ಶ್ಲಾಘನಿಯವಾಗಿದ್ದು, ಇವರೀರ್ವರನ್ನು ಸದಾ ನೆನೆಯಬೇಕು ಎಂದು ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ,ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಅವರು ಶನಿವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ರೋಣ ತಾಲೂಕ ಘಟಕ ವತಿಯಿಂದ 26 ನೇ ವರ್ಷದ ಕಾರ್ಗಿಲ್ ವಿಜಯೋತ್ಸವ, ಜೈ ಜವಾನ, ಜೈ ಕಿಸಾನ್ ಆಚರಣೆ ಮತ್ತು ಸಂಘದ ವರ್ಷಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ದೇಶದೊಳಕ್ಕೆ ಶತ್ರುಗಳು ನುಸುಳದಂತೆ, ದೇಶವಾಸಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬಿಸಿಲು, ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೇ ಹಗಲಿರುಳೆನ್ಮದೇ ತಮ್ಮ ಜೀವದ ಹಂಗು ತೊರೆದು ಗಡಿ ಕಾಯುವ ಸೈನಿಕರ ಸೇವೆಯನ್ನು ಎಷ್ಟು ನೆನೆದರೂ ಸಾಲದು. ಅವರಿಂದಲೇ ದೇಶದೊಳಗೆ ನಾವು ಸಂತಸ, ನೆಮ್ಮದಿಯಿಂದ ಇದ್ದೆವೆ. ಭಾರತ ದೇಶ ಈಗಾಗಲೇ ಅನೇಕ ಯುದ್ದಗಳನ್ನು ಎದುರಿಸಿ ವಿಜಯಶಾಲಿಯಾಗಿದೆ. ಇದಕ್ಕೆ ನಮ್ಮ ಹೆಮ್ಮೆಯ ಸೈನಿಕರ ತ್ಯಾಗ, ಬಲಿದಾನವೇ ಕಾರಣವಾಗಿದೆ. ಕಾರ್ಗಿಲ್ ನೆಲದಲ್ಲಿ ನುಗ್ಗಿದ ಪಾಕಿಸ್ತಾನದ ಸೈನಿಕರ ಹಿಮ್ಮೆಟ್ಟಿಸಿ ದಿಟ್ಟತನದಿಂದ ಹೋರಾಡಿದ ಕಾರ್ಗಿಲ್ ವಿಜಯಕ್ಕೆ ಇಂದಿಗೆ 26 ವರ್ಷ ಗತಿಸಿದೆ. ಕಾರ್ಗಿಲ್ ವಿಜಯವು ನಮ್ಮ ಸೈನಿಕರಿಗೆ ಎಂದೆಂದಿಗೂ ಸ್ಫೂರ್ತಿಯಾಗಿದೆ. ಸೈನಿಕರಂತೆಯೇ ಅಮೋಘ ಸೇವೆ ಸಲ್ಲಿಸುತ್ತಿರುವ ನಮ್ಮ ರೈತರ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ. ಬಿಸಿಲು, ಮಳೆ ಎನ್ನದೇ ಹೊಲದಲ್ಲಿ ಬೆವರು ಸುರಿಸಿ ಅನ್ನ ನೀಡುವ ರೈತರ ಕಾಯಕ ಶ್ರೇಷ್ಠವಾಗಿದೆ. ಸೈನಿಕರು ಮತ್ತು ರೈತರು ನಮ್ಮ ಎರಡು ಕಣ್ಣುಗಳಿದ್ದಂತೆ ಎಂದರು.
ಅದ್ದೂರಿ ಮೇರವಣಿಗೆಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಸಿದ್ದಾರೂಢ ಮಠದಿಂದ ಪ್ರಾರಂಭಗೊಂಡ ಕಾರ್ಗಿಲ್ ವಿಜಯೋತ್ಸವ ಮೆರವಣಿಗೆ ತಹಶೀಲ್ದಾರ ನಾಗರಾಜ.ಕೆ ಚಾಲನೆ ನೀಡಿದರು. ಸಿದ್ದಾರೂಢ ಮಠದಿಂದ ಸೂಡಿ ವೃತ್ತ, ಮುಲ್ಲನಬಾವಿ ವೃತ್ತ, ಬಸ್ ನಿಲ್ದಾಣ, ಪೋತರಾಜನ ಕಟ್ಟೆ ಸೇರಿದಂತೆ ಪ್ರಮುಖ ಡೊಳ್ಳು ಕುಣಿತ, ನೃತ್ಯ, ದೇಶ ಭಕ್ತಿಗೀತೆಗಳೊಂದಿಗೆ ಸಡಗರ, ಸಂಭ್ರಮದಿಂದ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪ್ರಭುಗೌಡ ಪಾಟೀಲ ವಹಿಸಿದ್ದರು.ಸಾನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಸ್ವಾಮಿಜಿ ವಹಿಸಿದ್ದರು. ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ರಂಗಪ್ಪ ತಳವಾರ ಉಪನ್ಯಾಸ ನೀಡಿದರು.
ಮಾಜಿ ಸಂಸದ ಆರ್.ಎಸ್.ಪಾಟೀಲ, ಪುರಸಭೆ ಸದಸ್ಯ ಮಲ್ಲಯ್ಯ ಗುರುಬಸಪ್ಪನಮಠ ಸೇರಿದಂತೆ ತಾಲೂಕಿನ ಅರಹುಣಸಿ, ಚಿಕ್ಕಮಣ್ಣೂರ, ಮಲ್ಲಾಪೂರ, ಸವಡಿ, ಕೊತಬಾಳ, ಶಾಂತಗೇರಿ, ಮಾಡಲಗೇರಿ, ಗುಳಗಂದಿ,ಕರ್ಕಿಕಟ್ಟಿ, ಹಿರೇಹಾಳ, ಕುರಹಟ್ಟಿ, ಕರಮುಡಿ, ಅಸೂಟಿ, ಸಂದಿಗವಾಡ, ಹಿರೇಹಾಳ, ಮುಗಳಿ, ತಳ್ಳಿಹಾಳ ಸೇರಿದಂತೆ ವಿವಿದ ಗ್ರಾಮದ ರೈತರಿಗ ಉತ್ತಮ ಕೃಷಿಕ- 2025 ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್.ಪಾಟೀಲ, ಶಿವರಾಜ ದೇಸಾಯಿ, ಡಾ. ಬಸವರಡ್ಡಿ ರಡ್ಡೇರ, ಸಿಪಿಐ ಎಸ್.ಎಸ್.ಬಿಳಗಿ, ವಿಶ್ವನಾಥ ಜಿಡ್ಡಿಬಾಗಿಲ, ಸಂಜಯ ರಡ್ಡೇರ, ಎ.ಎಸ್.ಖತೀಬ, ಬಸವರಾಜ ಸುಂಕದ, ರೇಣುಕಾಗೌಡ ದಾನಪ್ಪಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಿಕ್ಷಕ ಎಸ್. ಐ.ದಿಂಡೂರ, ರೂಪಾ ಸೋಮಶೇಖರ ನಿರೂಪಿಸಿದರು. ಸಿ.ಎಸ್.ನೆಲಗುಡ್ಡ ವಂದಿಸಿದರು.