ಕನ್ನಡಪ್ರಭ ವಾರ್ತೆ ಬೀದರ್
ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ರಾಷ್ಟ್ರಪ್ರೇಮ, ಮತ್ತು ಸಮಾಜಸೇವಾ ಮನೋಭಾವ ಬೆಳೆಸುವ ಸ್ವಯಂ ಸೇವಕರ ದಿಟ್ಟ ನಿಲುವು ನೋಡಿ ಸಂತಸವಾಗುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಸದಾಶಿವ ಬಡಿಗೇರ ತಿಳಿಸಿದರು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಿದ್ದ ಉಚಿತ ಸಿಇಟಿ ಮತ್ತು ನೀಟ್ ತರಬೇತಿ ಶಿಬಿರದ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಬಿವಿಪಿಯಂತಹ ಸ್ವಯಂ ಸೇವಕರ ಕೆಲಸ ದೊಡ್ಡದು, ರೈತ, ಸೈನಿಕ ಮತ್ತು ವಿದ್ಯಾರ್ಥಿಗಳು ದೇಶದ ಶಕ್ತಿ. ನಮ್ಮ ದೇಶಕ್ಕೆ ಇಂದು ಇಂತಹ ಸಂಘಟನೆಗಳ ಅಗತ್ಯವಿದೆ. ಎಬಿವಿಪಿ ವಿದ್ಯಾರ್ಥಿಗಳ ಧ್ವನಿಯಾಗಿ ಸೇವೆ ಸಲ್ಲಿಸುತ್ತಿದೆ. ಎಬಿವಿಪಿ ಕಾರ್ಯ ಮೆಚ್ಚುವಂಥದ್ದಾಗಿದೆ ಎಂದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಘಟಕದಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ಮತ್ತು ನೀಟ್ ತರಬೇತಿ ನೀಡಲಾಗುತ್ತಿದೆ. ಮಾ.6ರಿಂದ ಪ್ರವೇಶ ಪ್ರಾರಂಭವಾಗಿದ್ದು, ಮಾ.26ರಿಂದ ಏ.15ರವರೆಗೆ ಸಿಇಟಿ, ನೀಟ್ ತರಬೇತಿಗಳು ನಡೆಯಲಿವೆ. ಇದಕ್ಕಾಗಿ ಯಾವುದೇ ರೀತಿಯ ಶುಲ್ಕವಿಲ್ಲ. ಎಲ್ಲ ವಿಷಯಗಳ ನೋಟ್ಸ್ ಮುದ್ರಣಕ್ಕಾಗಿ 1 ಸಾವಿರ ರು.ಗಳನ್ನು ವಿದ್ಯಾರ್ಥಿಗಳು ನೀಡಬೇಕಿದೆ ಎಂದರು.ಔರಾದ್ (ಬಿ) ತಾಲೂಕು ಕಲ್ಯಾಣಾಧಿಕಾರಿ ರವೀಂದ್ರ ಸಿಇಟಿ, ನೀಟ್‌ಗಾಗಿ ಲಕ್ಷಾಂತರ ರುಪಾಯಿ ಶುಲ್ಕ ಭರಿಸಬೇಕಿದೆ. ಇದರ ಬಗ್ಗೆ ಬಡವರಿಗೆ ಅನುಕೂಲಕ್ಕಾಗಿ ಉಚಿತ ಶಿಬಿರ ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಎಬಿವಿಪಿ ಸ೦ಘಟನಾ ಕಾರ್ಯದರ್ಶಿ ಹೇಮಂತ ಮಾತನಾಡಿ, ಬೀದರ್ ನಗರದ ಸನ್ ಸಾಫ್ಟ್ ಪದವಿ ಕಾಲೇಜಿನಲ್ಲಿ ಒಂದು ತಿಂಗಳು ಉಚಿತ ತರಬೇತಿ ನಡೆಯುತ್ತಿದೆ. ಕಳೆದ 10 ವರ್ಷಗಳಿಂದ ತರಬೇತಿ ನಡೆಸಲಾಗುತ್ತಿದ್ದು, ಸುಮಾರು 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಕಳೆದ ವರ್ಷ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಇಲ್ಲಿಯವರೆಗೆ ನೂರಾರು ಜನ ತರಬೇತಿಯಿಂದ ಸಿಇಟಿ, ನೀಟ್ ಸೀಟುಗಳು ಪಡೆದಿದ್ದಾರೆ ಎಂದರು.ಜಿಲ್ಲಾ ಸಂಚಾಲಕ ಶಶಿಕಾಂತ ರಾಕಲೇ ಮಾತನಾಡಿ, ಮಾಹಿತಿಗಾಗಿ ಮೊ:7624906563, 7411312269, 741134149 ಸಂಪರ್ಕಿಸುವಂತೆ ಮನವಿ ಮಾಡಿದರು.
ಜಿಲ್ಲಾ ಕಲ್ಯಾಣಾಧಿಕಾರಿ ಅಶೋಕ, ಬಸವಕಲ್ಯಾಣದ ತಾಲೂಕು ಅಧಿಕಾರಿ ಹಿರೇಗೌಡರು, ಪವನ ಕುಂಬಾರ, ಆನಂದ, ಸಾಯಿ ಕಿರಣ, ರಾಜಕುಮಾರ, ಬಸವರಾಜ ಸೇರಿದಂತೆ ಇನ್ನಿತರರು ಇದ್ದರು.