ಕನ್ನಡಪ್ರಭ ವಾರ್ತೆ ಪಾವಗಡ
ವೆಂಕಟಾಪುರ ರಸ್ತೆ ಮಾರ್ಗದಲ್ಲಿ ಬೃಹತ್ ವಾಲ್ ಕಾಮಗಾರಿ ನಿರ್ಮಾಣಕ್ಕೆ ರಸ್ತೆ ಪಕ್ಕದಲ್ಲಿಯೆ 15ಅಡಿ ಉದ್ದ ಹಾಗೂ 15ಅಡಿ ಆಳಕ್ಕೆ ಜೆಬಿಸಿಯಿಂದ ಗುಂಡಿ ಬಗೆದು ಕಾಮಗಾರಿ ಸ್ಥಗಿತಗೊಳಿಸಿ ಹಾಗೆ ಬಿಟ್ಟಿದ್ದು, ಇದೇ ರಸ್ತೆ ಮೂಲಕ ರಾತ್ರಿ ವೇಳೆ ನಿವಾಸಿಗಳು ಹಾಗೂ ಬೇರೆ ವಾಹನ ಸವಾರರು, ಮನೆಗಳಿಗೆ ಒಡಾಡುವ ಪಾದಚಾರಿಗಳು ಆಯತಪ್ಪಿ ಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ.
ಇದೇ ರಸ್ತೆ ಮಾರ್ಗದ ಪಕ್ಕದಲ್ಲಿ ಚಿಲ್ಲರೆ ಅಂಗಡಿ, ತಿಂಡಿ, ಟೀ ಹಾಗೂ ಇತರೆ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಪ್ರತಿ ತಿಂಗಳು ಮಳಿಗೆಗಳಿಗೆ ಬಾಡಿಗೆ ಹಣ ಕಟ್ಟಿ ಜೀವನ ನಡೆಸುತ್ತಿದ್ದಾರೆ. ಈ ಗುಂಡಿಯಿಂದಾಗಿ ಅಂಗಡಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ವ್ಯಾಪಾರ ನಿರತ ಮಾಲಿಕರಿಗೆ ವ್ಯಾಪಾರವಿಲ್ಲದೇ ನಷ್ಟಕ್ಕಿಡಾಗಿದ್ದಾರೆ.