ಸಿಂಧನೂರು: ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸಲು ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಮಾಲಕತ್ವದ ವಿರುದ್ಧ ಕಾರ್ಮಿಕ ದಂಗೆಗಳನ್ನು ಸಂಘಟಿಸಬೇಕಾಗಿದೆ. ದಂಗೆಗಳಿಗೆ ಹೆಗಲೊಡ್ಡಿ ಕಾರ್ಮಿಕ ವರ್ಗದ ಐಕ್ಯತೆ, ಹಕ್ಕುಗಳನ್ನು ದಕ್ಕಿಸಿಕೊಳ್ಳುವ ಕ್ರಾಂತಿಕಾರಿ ಕಾರ್ಯಭಾರಗಳನ್ನು ಕೈಗೊಳ್ಳಬೇಕಾಗಿದೆ ಎಂದು ಎಐಸಿಸಿಟಿಯು ರಾಜ್ಯ ಅಧ್ಯಕ್ಷ ಪಿ.ಪಿ.ಅಪ್ಪಣ್ಣ ಹೇಳಿದರು.
ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ಕೇಂದ್ರದಲ್ಲಿ ಆಳುವ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವುದರ ಮೂಲಕ ಅಪಾಯಕಾರಿ ಬೆಳವಣಿಗೆಗೆ ಕಾರಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂಡವಾಳ ಶಾಹಿಗಳ ಪರವಾದ ನೀತಿಗಳನ್ನು ಜಾರಿಗೆ ಮಾಡುವುದರ ಮೂಲಕ ಜನದ್ರೋಹ ಮಾಡುತ್ತಾ ಬಿಜೆಪಿಯೊಂದಿಗೆ ಸ್ಪರ್ಧೆಗಿಳಿದಿದೆ. ಒಟ್ಟಾರೆ ಕೇಂದ್ರ ಮತ್ತು ರಾಜ್ಯದ ಪರಿಸ್ಥಿತಿಗಳಲ್ಲಿ ಗಮನಾರ್ಹವಾದ ವ್ಯತ್ಯಾಸಗಳಿಲ್ಲದಂತಾಗಿದೆ ಎಂದು ತಿಳಿಸಿದರು.
ಎಐಸಿಸಿಟಿಯು ಜಿಲ್ಲಾ ನೂತನ ಅಧ್ಯಕ್ಷರಾಗಿ ಅಜೀಜ್ ಜಾಗೀರದಾರ, ಕಾರ್ಯದರ್ಶಿಯಾಗಿ ಬಸವರಾಜ ಎಕ್ಕಿ ಸೇರಿ 13 ಜನರನ್ನು ಸದಸ್ಯರನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಯಿತು. ಮುಖಂಡರಾದ ಬಸವರಾಜ ಬೆಳಗುರ್ಕಿ, ಆರ್.ಎಚ್.ಕಲಮಂಗಿ, ಶ್ರೀನಿವಾಸ ಬುಕ್ಕನ್ನಟ್ಟಿ, ವೀರೇಶ ಲಿಂಗಸುಗೂರು, ಬಸವರಾಜ ದೇವದುರ್ಗ ಇದ್ದರು. ಬಸವರಾಜ ಕೊಂಡೆ ನಿರೂಪಿಸಿದರು.