ಜಗತ್ತು ನಿಂತಿರುವುದು ಕಾಯಕ, ದಾಸೋಹ, ಲಿಂಗನಿಷ್ಠೆಯ ಮೇಲೆ

KannadaprabhaNewsNetwork |  
Published : Mar 04, 2026, 01:15 AM IST
ಪೋಟೋ, 3ಎಚ್‌ಎಸ್‌ಡಿ2: ಮಲೇಷಿಯಾದ ಎಂ ಸಿ ಆರ್ ಸಭಾಂಗಣದಲ್ಲಿ ನಡೆದ ಬಸವತತ್ವ  ಚಿಂತನಾ ಗೋಷ್ಠಿಯಲ್ಲಿ ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ  ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಮಲೇಷಿಯಾದ ಎಂಸಿಆರ್ ಸಭಾಂಗಣದಲ್ಲಿ ನಡೆದ ಬಸವತತ್ವ ಚಿಂತನಾಗೋಷ್ಠಿಯಲ್ಲಿ ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಇಡೀ ಜಗತ್ತು ನಿಂತಿರುವುದು ಕಾಯಕ, ದಾಸೋಹ, ಇಷ್ಟಲಿಂಗನಿಷ್ಠೆಯ ಮೂಲಕ. ಈ ಮೂರನ್ನು ಸರಿಯಾಗಿ ಪ್ರಯೋಗ ಮಾಡಿದರೆ ಭಾರತ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಲು ಸಾಧ್ಯ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಮಲೇಷಿಯಾದ ಎಂಸಿಆರ್ ಸಭಾಂಗಣದಲ್ಲಿ ನಡೆದ ಬಸವತತ್ವ ಚಿಂತನಾಗೋಷ್ಠಿಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರ ಇಹಲೋಕದಲ್ಲಿ ನೆಮ್ಮದಿಯಿಂದ ಬಾಳಬೇಕಾದರೆ ಪ್ರಸ್ತುತ ನಮ್ಮ ಬದುಕು ಹೇಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲು ಶರಣರು ಅವಕಾಶ ಮಾಡಿಕೊಟ್ಟರು. ಮನುಷ್ಯ ಯಾವಾಗಲೂ ಬಹಿರ್ಮುಖಿಯಾಗಲು ಇಷ್ಟಪಡುತ್ತಾನೆಯೇ ಹೊರತು ಅಂತರ್ಮುಖಿಯಾಗಲು ಇಷ್ಟಪಡುವುದಿಲ್ಲ. ಹೊರಗಿನ ನೋಟ ತುಂಬ ಖುಷಿಕೊಡುತ್ತದೆ. ಆದರೆ ಹೊರಗಿಂತ ಹೆಚ್ಚು ಖುಷಿ ಕೊಡುವುದು ಒಳಗಡೆ ಇದೆ. ಒಳಗಡೆ ಏನಿಲ್ಲವೋ ಖಂಡಿತ ಅದು ಹೊರಗಡೆ ಇಲ್ಲ ಎನ್ನುವುದು ಶರಣ ಅಭಿಪ್ರಾಯ. ಹಾಗಾಗಿ ಅಂತರಂಗದ ನೋಟವನ್ನು ಕಲಿಸುವುದೇ ಅನುಭವ ಮಂಟಪ. ಅಲ್ಲಿ ಅನುಭವ ಮತ್ತು ಅನುಭಾವ ಎರಡರ ಸಂಗಮ ಇರುತ್ತದೆ ಎಂದರು.

ಈ ನಾಡಿನಲ್ಲಿ ಭವ್ಯವಾದ ಕಟ್ಟಡಗಳಿಗೇನು ಕೊರತೆಯಿಲ್ಲ. ಆದರೆ ಕಟ್ಟಡದ ಒಳಗಡೆ ನಡೆಯುವ ಕ್ರಿಯೆಗಳಿಂದ ವ್ಯಕಿಯ ವ್ಯಕ್ತಿತ್ವ ಅರಳುವಂತಿರಬೇಕು. ಅನುಭವ ಮಂಟಪಕ್ಕೆ ಪ್ರವೇಶಿಸಿದಾಗ ನಮ್ಮತನವನ್ನು ಸಂಪೂರ್ಣವಾಗಿ ಕಳೆದುಕೊಂಡು ಎಲ್ಲರೊಳಗೊಬ್ಬ ನಾನು ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು.

ವಿನ್ಯಾಸಕಾರ ಡಾ.ಬಾಬಾ ಸಾಹೇಬ ಗೆಡ್ಡೆ ಮಾತನಾಡಿ, ಬಸವಕಲ್ಯಾಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪದ ಕಟ್ಟಡದಲ್ಲಿ ನಿಜಸ್ವರೂಪ ತಿಳಿಸುವ ಕಾರ್ಯ ನಡೆಯುತ್ತಿದೆ. ಇನ್ನೊಂದು ವರ್ಷದಲ್ಲಿ ಅನುಭವ ಮಂಟಪ ಪೂರ್ಣಗೊಳ್ಳುವುದು ಎಂದರು. ಮಹಿಳೆಯರನ್ನು ಭೋಗದ ವಸ್ತು ಎಂದು ತಿಳಿದುಕೊಂಡಿದ್ದ ಕಾಲದಲ್ಲಿ ಅನುಭವ ಮಂಟಪದಲ್ಲಿ ಸ್ಥಾನವನ್ನು ಕೊಟ್ಟು ಕನ್ನಡ ಭಾಷೆಯಲ್ಲಿ ವಚನ ರಚಿಸುವಂತೆ ಮಾಡಿದ್ದು ಶರಣ ಪರಂಪರೆ. ಅಂದಿನ ಕಾಲದ ಆಧ್ಯಾತ್ಮಿಕ ಜ್ಞಾನವನ್ನು ಸರಳ ಕನ್ನಡ ಭಾಷೆಯಲ್ಲಿ ತಿಳಿಸಿದ್ದು ವಚನ ಸಾಹಿತ್ಯ. ಎಲ್ಲ ಕನ್ನಡಿಗರು ಬಸವತತ್ವವನ್ನು ಆಚರಿಸದೇ ಇರಬಹುದು, ಲಿಂಗಾಯತ ಧರ್ಮದ ಬಗ್ಗೆ ಗೊತ್ತಿಲ್ಲದೇ ಇರಬಹುದು. ಅದನ್ನು ಹೊರತುಪಡಿಸಿ ಕನ್ನಡಿಗರು ಹೆಮ್ಮೆ ಪಡುವ ವಿಷಯ ಎಂದರೆ ಜಗತ್ತಿಗೆ ಮಹಿಳಾ ಕವಿಯತ್ರಿ ಕೊಟ್ಟಿರುವುದು ಜಗತ್ತೇ ಹೆಮ್ಮೆ ಪಡುವಂಥದ್ದು ಎಂದರು.

ಕಾರ್ಯಕ್ರಮದಲ್ಲಿ ಬಸವ ಟಿವಿ ಮುಖ್ಯಸ್ಥ ಸಿದ್ದು ಯಾಪಲಪರವಿ, ಮಲೇಷಿಯಾದ ವಲಸಿ ಕನ್ನಡಿಗ ಹರ್ಷಿತ್ ಗೌಡ ಮಾತನಾಡಿದರು. ಕಾರ್ಯಕ್ರಮವನ್ನು ಟಿಸಿಎಸ್ ಡ್ರೀಮ್ ಹಾಲಿಡೇಸ್ ಮುಖ್ಯಸ್ಥ ಸುರೇಶ್ ಎಸ್ ಎಂ ಸ್ವಾಗತಿಸಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ನಿರೀಕ್ಷೆಗಳೇನು?
ಕೇಂದ್ರ ಸರ್ಕಾರದ 4 ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಆಗ್ರಹಿಸಿ ಸಿಐಟಿಯು ಪ್ರತಿಭಟನೆ