ಕನ್ನಡಪ್ರಭ ವಾರ್ತೆ, ಫಿಲಡೆಲ್ಫಿಯಾ
ಅಮೆರಿಕದ ವಿವಿಧ ರಾಜ್ಯಗಳು ಹಾಗೂ ನಗರಗಳ ಕನ್ನಡ ಕೂಟಗಳಿಗೆ ಸೇರಿದ ಮೂರು ಸಾವಿರಕ್ಕೂ ಹೆಚ್ಚು ಕನ್ನಡಿಗರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿವಿಧ ಕನ್ನಡ ಸಂಘಟನೆಗಳ ಪ್ರತಿನಿಧಿಗಳು, ಕುಟುಂಬ ಸಮೇತ ಆಗಮಿಸಿದ್ದ ಕನ್ನಡಿಗರು, ಮಕ್ಕಳು ಹಾಗೂ ಯುವಕರು ಮೆರವಣಿಗೆಯಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕಿದರು. ಕನ್ನಡದ ಬಾವುಟಗಳು, ಘೋಷಣೆಗಳು ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.ವೀರಗಾಸೆಯ ವೈಭವಮೆರವಣಿಗೆಯಲ್ಲಿ ವೀರಗಾಸೆ ಕಲಾವಿದರ ನರ್ತನ ವಿಶೇಷ ಆಕರ್ಷಣೆಯಾಗಿತ್ತು. ವೀರಗಾಸೆಯ ಸಾಂಪ್ರದಾಯಿಕ ವೇಷಭೂಷಣ, ಹೆಜ್ಜೆ ಹಾಗೂ ನೃತ್ಯದ ಮೂಲಕ ಕನ್ನಡದ ಜಾನಪದ ಸಂಸ್ಕೃತಿಯನ್ನು ಅಮೆರಿಕದ ನೆಲದಲ್ಲಿ ಅನಾವರಣಗೊಳಿಸಲಾಯಿತು. ಕಲಾವಿದರ ಪ್ರದರ್ಶನಕ್ಕೆ ಕನ್ನಡಿಗರು ಚಪ್ಪಾಳೆ, ಘೋಷಣೆಗಳ ಮೂಲಕ ಉತ್ತೇಜನ ನೀಡಿದರು.ರೇಷ್ಮೆ ಸೀರೆಯಲ್ಲಿ ಕನ್ನಡದ ಬಣ್ಣಮೆರವಣಿಗೆಯಲ್ಲಿ ಕನ್ನಡತಿಯರ ಉಪಸ್ಥಿತಿಯೂ ಗಮನ ಸೆಳೆಯಿತು. ವಿವಿಧ ಬಗೆಯ ರೇಷ್ಮೆ ಸೀರೆಗಳನ್ನುಟ್ಟು ಆಗಮಿಸಿದ್ದ ಮಹಿಳೆಯರು ಕನ್ನಡದ ಸಾಂಪ್ರದಾಯಿಕ ಸೊಬಗನ್ನು ಪ್ರದರ್ಶಿಸಿದರು. ಸಾಂಪ್ರದಾಯಿಕ ಉಡುಗೆ, ಕನ್ನಡದ ಬಾವುಟ ಹಾಗೂ ಆಭರಣಗಳೊಂದಿಗೆ ಪಾಲ್ಗೊಂಡ ಮಹಿಳೆಯರಿಂದ ಮೆರವಣಿಗೆಗೆ ಮತ್ತಷ್ಟು ಕಳೆ ಬಂದಿತ್ತು.ವಿದೇಶದ ನೆಲದಲ್ಲಿ ನೆಲೆಸಿದ್ದರೂ ಭಾಷೆ ಮತ್ತು ಸಂಸ್ಕೃತಿಯ ನಂಟನ್ನು ಕಳೆದುಕೊಂಡಿಲ್ಲ ಎಂಬುದನ್ನು ಮೆರವಣಿಗೆ ಸಾರಿತು. ವಿವಿಧ ದೇಶ, ರಾಜ್ಯ ಹಾಗೂ ನಗರಗಳಿಂದ ಬಂದ ಕನ್ನಡಿಗರು ಒಂದೇ ವೇದಿಕೆಯಡಿ, ಒಂದೇ ಭಾಷೆಯ ಹೆಸರಿನಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದ್ದು ಅಕ್ಕ ರಜತ ಮಹೋತ್ಸವದ ವಿಶೇಷತೆಯಾಗಿ ಕಂಡುಬಂತು.ಕನ್ನಡ ಕೇವಲ ಭಾಷೆಯಲ್ಲ; ಅದು ಭಾವನೆ, ಬದುಕಿನ ಬಂಧ ಮತ್ತು ಸಂಸ್ಕೃತಿಯ ಗುರುತು ಎಂಬ ಸಂದೇಶವನ್ನು ಹೊತ್ತು ಸಾಗಿದ ಈ ಮೆರವಣಿಗೆ, ಅಕ್ಕ ಸಮ್ಮೇಳನದ ರಜತ ಮಹೋತ್ಸವಕ್ಕೆ ಅದ್ಧೂರಿ ಮುನ್ನುಡಿಯಾಯಿತು.ಕನ್ನಡ ಪ್ರೀತಿಯ ಪ್ರತೀಕ ಅಕ್ಕ ಸಮ್ಮೇಳನ; ತಂಗಡಗಿ:
ಅಮೆರಿಕದ ನೆಲದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ಅಕ್ಕ ಸಮ್ಮೇಳನದ ರಜತ ಮಹೋತ್ಸವ ಐತಿಹಾಸಿಕ ಸಂದರ್ಭವಾಗಿದ್ದು, ವಿಶ್ವದಾದ್ಯಂತ ಇರುವ ಕನ್ನಡಿಗರ ಕನ್ನಡ ಪ್ರೀತಿ, ಒಗ್ಗಟ್ಟು ಹಾಗೂ ತಾಯ್ನಾಡಿನ ಮೇಲಿನ ಅಭಿಮಾನಕ್ಕೆ ಇದು ಸಾಕ್ಷಿಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಅಮೆರಿಕದಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೇಳನದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇದು ಬಹಳ ವಿಶೇಷವಾದ ವೇದಿಕೆ. ನನ್ನ ಮಟ್ಟಿಗೆ ಅಕ್ಕ ಸಮ್ಮೇಳನದಲ್ಲಿ ಎರಡನೇ ಅವಧಿಯಲ್ಲಿ, ಎರಡನೇ ವರ್ಷ ಪಾಲ್ಗೊಳ್ಳುತ್ತಿರುವುದು. ಇಂತಹ ಅದ್ಭುತ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯ ಸಂಗತಿ’ ಎಂದರು.ಅಕ್ಕ ಸಮ್ಮೇಳನ 25 ವರ್ಷಗಳನ್ನು ಪೂರೈಸಿರುವುದು ಸಾಮಾನ್ಯ ಸಾಧನೆಯಲ್ಲ. ಅಮೆರಿಕ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಹೊಂದಿರುವ ಗಾಢ ಸಂಬಂಧದ ಪ್ರತೀಕವಾಗಿದೆ ಎಂದು ಅವರು ಹೇಳಿದರು.ಕರ್ನಾಟಕದ ನೆಲದಲ್ಲಿ ಹುಟ್ಟಿ, ಬೆಳೆದು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ತಾವು ವಾಸಿಸುವ ದೇಶಕ್ಕೆ ಗೌರವ ನೀಡುವುದರ ಜೊತೆಗೆ, ತಮ್ಮ ತಾಯ್ನಾಡು ಕರ್ನಾಟಕದ ಬಗ್ಗೆಯೂ ಅಭಿಮಾನವನ್ನು ಉಳಿಸಿಕೊಂಡು ಕನ್ನಡದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಂಗಡಗಿ ಮೆಚ್ಚುಗೆ ವ್ಯಕ್ತಪಡಿಸಿದರು.‘ನಮ್ಮ ಮುಖ್ಯಮಂತ್ರಿಗಳು ಈಗಾಗಲೇ ಕನ್ನಡದ ನೆಲೆ, ಕನ್ನಡದ ವಿಚಾರ ಮತ್ತು ಅಮೆರಿಕದ ಕನ್ನಡಿಗರ ಕೊಡುಗೆ ಕುರಿತು ಬಹಳ ಚೆನ್ನಾಗಿ ಮಾತನಾಡಿದ್ದಾರೆ. ನೀವು ಹುಟ್ಟಿದ ನಾಡಿನೊಂದಿಗೆ ಇರುವ ಸಂಬಂಧವನ್ನು ಉಳಿಸಿಕೊಂಡು, ಇಲ್ಲಿ ನಿಮಗೆ ಅನ್ನ ನೀಡುತ್ತಿರುವ ದೇಶವನ್ನೂ ಗೌರವಿಸುತ್ತಾ, ಕರ್ನಾಟಕದ ಹೆಸರನ್ನು ಎತ್ತಿಹಿಡಿಯುತ್ತಿರುವುದು ನಿಜಕ್ಕೂ ಅಭಿನಂದನಾರ್ಹ’ ಎಂದು ಹೇಳಿದರು.ಇಂತಹ ಬೃಹತ್ ಕಾರ್ಯಕ್ರಮವನ್ನು ನಿರಂತರವಾಗಿ 25 ವರ್ಷಗಳ ಕಾಲ ಆಯೋಜಿಸುವುದು ಸುಲಭದ ಕೆಲಸವಲ್ಲ. ಇದಕ್ಕೆ ಅಮೆರಿಕದ ಕನ್ನಡಿಗರ ಪರಿಶ್ರಮ, ಸಂಘಟನಾ ಶಕ್ತಿ ಮತ್ತು ಕನ್ನಡದ ಮೇಲಿನ ಅಪಾರ ಪ್ರೀತಿ ಕಾರಣವಾಗಿದೆ ಎಂದರು.