ಮಹಾವೀರರ ವಿಶ್ವಶಾಂತಿ ಸಂದೇಶ ಜಗತ್ತು ಒಪ್ಪಿಕೊಳ್ಳಬೇಕು-ಅಶೋಕ ಜೈನ

KannadaprabhaNewsNetwork | Published : Apr 22, 2024 2:21 AM

ಸಾರಾಂಶ

ಹಿಂಸಾಕೃತ್ಯಗಳಿಂದ ಪ್ರಸ್ತುತ ವಾತಾವರಣ ನಲುಗಿ ಹೋಗಿದೆ, ಭಗವಾನ್ ಮಹಾವೀರರ ವಿಶ್ವಶಾಂತಿಗಾಗಿ ಸಾರಿದ ‘ಅಹಿಂಸಾ ಪರಮೋದ್ಧರ್ಮ’ ಎನ್ನುವ ಸಾರ್ವತ್ರಿಕ ಸತ್ಯವನ್ನು ಇನ್ನಾದರೂ ಪ್ರಸ್ತುತ ಜಗತ್ತು ಒಪ್ಪಿಕೊಳ್ಳಲೇಬೇಕು ಎಂದು ಶ್ವೇತಾಂಬರ ಜೈನ್ ಸಮಾಜದ ಮುಖಂಡ ಅಶೋಕ ಜೈನ್ ಕರೆ ನೀಡಿದರು.

ಬ್ಯಾಡಗಿ: ಹಿಂಸಾಕೃತ್ಯಗಳಿಂದ ಪ್ರಸ್ತುತ ವಾತಾವರಣ ನಲುಗಿ ಹೋಗಿದೆ, ಭಗವಾನ್ ಮಹಾವೀರರ ವಿಶ್ವಶಾಂತಿಗಾಗಿ ಸಾರಿದ ‘ಅಹಿಂಸಾ ಪರಮೋದ್ಧರ್ಮ’ ಎನ್ನುವ ಸಾರ್ವತ್ರಿಕ ಸತ್ಯವನ್ನು ಇನ್ನಾದರೂ ಪ್ರಸ್ತುತ ಜಗತ್ತು ಒಪ್ಪಿಕೊಳ್ಳಲೇಬೇಕು ಎಂದು ಶ್ವೇತಾಂಬರ ಜೈನ್ ಸಮಾಜದ ಮುಖಂಡ ಅಶೋಕ ಜೈನ್ ಕರೆ ನೀಡಿದರು.

ಪಟ್ಟಣದ ಪಾರ್ಶ್ವನಾಥ ಶ್ವೇತಾಂಬರ್ ಜೈನ್ ಸಂಘ ಹಾಗೂ ದಿಗಂಬರ ಜೈನ್ ಸಂಘದ ಸಂಯುಕ್ತಾಶ್ರಯದಲ್ಲಿ ಜರುಗಿದ ತೀರ್ಥಂಕರ ಭಗವಾನ್ ಮಹಾವೀರ್ ಜಯಂತಿ ಮೆರವಣಿಗೆ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಗವಾನ್ ಮಹಾವೀರರು ನಾವು ಪ್ರತಿ ಜೀವಿಗಳಿಗೂ ದಯೆ ತೋರಿಸೋಣ, ‘ಅಹಿಂಸೆ ಮತ್ತು ದಯೆಯಿಂದ ವಿಶ್ವದಲ್ಲಿ ಶಾಂತಿ ನೆಲಸುವಂತೆ ಮಾಡಲು ಸಾಧ್ಯ, ಸದಾಚಾರದ ಮಾರ್ಗದಿಂದ ಪ್ರತಿಯೊಬ್ಬರೂ ಬದುಕಬೇಕಾಗಿದೆ. ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವ ಬಹುತೇಕ ರಾಷ್ಟ್ರಗಳು ಸಾರ್ವಭೌಮತ್ವ ಸಾಧಿಸಲು ಹಿಂಸೆಯ ಮಾರ್ಗವನ್ನು ಹಿಡಿದಿರುವುದು ದುರದೃಷ್ಟಕರ ಎಂದರು.

ಸಿಪಿಐ ಮಹಾಂತೇಶ ಲಂಬಿ ಮಾತನಾಡಿ, ಭಗವಾನ್ ಮಹಾವೀರರ ನೈತಿಕ ಬೋಧನೆಗಳು ವ್ಯಕ್ತಿಯ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ, ಭಗವಾನ್ ಮಹಾವೀರರು ತಮ್ಮ ಮೂವತ್ತನೇ ವಯಸ್ಸಿನಲ್ಲಿಯೇ ಎಲ್ಲಾ ಲೌಕಿಕ ಬದುಕು ತ್ಯಜಿಸಿದರು. ಆಧ್ಯಾತ್ಮಿಕ ಜಾಗೃತಿ ಮೂಡಿಸಲು ಅನ್ವೇಷಣೆ ಆರಂಭಿಸಿ ಮನೆಯನ್ನು ತೊರೆದರು, ಸತತ ಮೂರು ದಶಕಗಳ ಕಾಲ ಧರ್ಮ ಬೋಧನೆಯಲ್ಲಿ ತೊಡಗಿ ಬಳಿಕ ಮೋಕ್ಷವನ್ನು ಪಡೆದಿದ್ದಾಗಿ ತಿಳಿಸಿದರು.

ಭಗವಾನ್ ಮಹಾವೀರರ ವಿಗ್ರಹವನ್ನು ರಥಯಾತ್ರೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಇದಕ್ಕೂ ಮುನ್ನ ಮಹಾವೀರರ ಪ್ರತಿಮೆಗಳಿಗೆ ವಿಧ್ಯುಕ್ತವಾದ ಅಭಿಷೇಕ ಕರ‍್ಯಕ್ರಮ ಜರುಗಿತು, ಇದೇ ಸಂದರ್ಭದಲ್ಲಿ ಜೈನ ಸಮುದಾಯದ ಸದಸ್ಯರು ದಾನಧರ್ಮ ಕಾರ್ಯಗಳು, ಪ್ರಾರ್ಥನೆ, ಪೂಜೆ ಮತ್ತು ವ್ರತಗಳಲ್ಲಿ ತೊಡಗಿದ್ದರು.

ಈ ಸಂದರ್ಭದಲ್ಲಿ ಪಿಎಸ್‌ಐ ಅರವಿಂದ, ಎಎಸ್‌ಐ ನಿಂಗೇನಹಳ್ಳಿ, ಅಂಬಾಲಾಲ್ ಜೈನ್, ಆನಂದ ಜೈನ್, ಉಮೇಶ್ ಜೈನ್, ಸಂಜಯ ಜೈನ್, ತೀರತ್ ಜೈನ್, ಭರತ ಜೈನ್, ಅಜಯ್ ಜೈನ್, ಪ್ರವೀಣ ಜೈನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article