ಬಣ್ಣದಾಟಕ್ಕೆ ಕುಂದಾನಗರಿಯ ಯುವಜನತೆ ಸಜ್ಜು

KannadaprabhaNewsNetwork |  
Published : Mar 03, 2026, 02:45 AM IST
ಹೋಳೀ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಬಣ್ಣಗಳ ಹಬ್ಬ ಹೋಳಿಯನ್ನು ಸಂಭ್ರಮದಿಂದ ಆಚರಿಸಲು ಕುಂದಾನಗರಿ ಬೆಳಗಾವಿಯ ಯುವಜನತೆ ಸಜ್ಜಾಗಿದೆ. ಮಾರುಕಟ್ಟೆಗಳಲ್ಲಿ ಈಗಾಗಲೇ ಬಣ್ಣ, ಪಿಚಕಾರಿ, ಗುಲಾಲ್ ಹಾಗೂ ಹಬ್ಬದ ಸಾಮಗ್ರಿಗಳ ಮಾರಾಟ ಜೋರಾಗಿದೆ. ಚಂದ್ರಗ್ರಹಣದ ನಡುವೆಯೇ ಮಕ್ಕಳು, ಯುವಕರು ಎಲ್ಲರೂ ಹೋಳಿ ಸಂಭ್ರಮಕ್ಕೆ ಸಿದ್ಧರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಣ್ಣಗಳ ಹಬ್ಬ ಹೋಳಿಯನ್ನು ಸಂಭ್ರಮದಿಂದ ಆಚರಿಸಲು ಕುಂದಾನಗರಿ ಬೆಳಗಾವಿಯ ಯುವಜನತೆ ಸಜ್ಜಾಗಿದೆ. ಮಾರುಕಟ್ಟೆಗಳಲ್ಲಿ ಈಗಾಗಲೇ ಬಣ್ಣ, ಪಿಚಕಾರಿ, ಗುಲಾಲ್ ಹಾಗೂ ಹಬ್ಬದ ಸಾಮಗ್ರಿಗಳ ಮಾರಾಟ ಜೋರಾಗಿದೆ. ಚಂದ್ರಗ್ರಹಣದ ನಡುವೆಯೇ ಮಕ್ಕಳು, ಯುವಕರು ಎಲ್ಲರೂ ಹೋಳಿ ಸಂಭ್ರಮಕ್ಕೆ ಸಿದ್ಧರಾಗಿದ್ದಾರೆ.

ನಗರದ ವಿವಿಧ ಪ್ರದೇಶಗಳಲ್ಲಿ ಹೋಳಿ ದಹನ ಕಾರ್ಯಕ್ರಮಗಳಿಗೆ ಸಿದ್ಧತೆಗಳು ನಡೆಯುತ್ತಿವೆ. ಶಾಂತಿ ಹಾಗೂ ಸೌಹಾರ್ದತೆಯಿಂದ ಹಬ್ಬ ಆಚರಿಸಲು ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕೈಗೊಂಡಿದೆ. ಪ್ರಮುಖ ವೃತ್ತಗಳು ಹಾಗೂ ಜನಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ವಿಶೇಷ ಕಾವಲು ವ್ಯವಸ್ಥೆ ಮಾಡಲಾಗಿದೆ.

ಮಿಠಾಯಿ ಅಂಗಡಿಗಳಲ್ಲೂ ವ್ಯಾಪಾರ ಜೋರಾಗಿದ್ದು, ಕುಟುಂಬ ಸಮೇತವಾಗಿ ಹಬ್ಬವನ್ನು ಆಚರಿಸಲು ನಾಗರಿಕರು ಸಜ್ಜಾಗಿದ್ದಾರೆ. ಯುವಕರು ಸ್ನೇಹಿತರೊಂದಿಗೆ ಬಣ್ಣದಾಟಕ್ಕೆ ಯೋಜನೆ ಹಾಕಿಕೊಂಡಿದ್ದಾರೆ. ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು, ರಾಸಾಯನಿಕ ಬಣ್ಣಗಳನ್ನು ಬಳಸದಿರಿ ಹಾಗೂ ನೀರಿನ ವ್ಯರ್ಥ ಬಳಕೆ ತಪ್ಪಿಸಿಕೊಳ್ಳಬೇಕು ಎಂದು ಸಾಮಾಜಿಕ ಸಂಘಟನೆಗಳು ಮನವಿ ಮಾಡಿವೆ.

ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಪ್ರಾಯೋಜಕತ್ವದ ಹೋಳಿ ಮಿಲನ ಕಾರ್ಯಕ್ರಮ ನಡೆಯಲಿದ್ದು, ರಂಗಿನಾಟಕ್ಕೆ ಮೆರಗು ನೀಡಲಿದೆ. ಅಲ್ಲದೆ, ನಗರದ ವಿವಿಧ ಭಾಗಗಳಲ್ಲಿ ಸಂಘ ಸಂಸ್ಥೆಗಳು ಹೋಳಿ ಉತ್ಸವಗಳನ್ನು ಆಯೋಜಿಸಿವೆ. ಪಾಂಗೋಳ ಗಲ್ಲಿಯ ಅಶ್ವತ್ಥಾಮ ಮಂದಿರದ ಎದುರು ಉರುಳು ಸೇವೆಗೆ ಸಿದ್ಧತೆ ಮಾಡಲಾಗಿದೆ. ಒಟ್ಟಾರೆ ಕುಂದಾನಗರಿ ಬೆಳಗಾವಿಯಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆಮಾಡಿದ್ದು, ನಗರವೇ ಬಣ್ಣಗಳಿಂದ ಕಂಗೊಳಿಸಲು ಸಜ್ಜಾಗಿದೆ.

ಮದ್ಯಮಾರಾಟ ನಿಷೇಧ

ಹೋಳಿ ಹಾಗೂ ರಂಗಪಂಚಮಿ ಹಿನ್ನೆಲೆ ಬೆಳಗಾವಿ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ಉದ್ದೇಶದಿಂದ ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಈ ಅವಧಿಯಲ್ಲಿ ಮದ್ಯದ ಅಂಗಡಿಗಳು, ವೈನ್ ಶಾಪ್, ಬಾರ್, ಕ್ಲಬ್ ಹಾಗೂ ಹೊಟೇಲ್‌ಗಳಲ್ಲಿ ಮದ್ಯ ಮಾರಾಟ ಮತ್ತು ಸಾಗಣೆ ನಿಷೇಧಿಸಲಾಗಿದೆ. ಎಲ್ಲಾ ಅಬಕಾರಿ ಪರವಾನಗಿ ಅಂಗಡಿಗಳನ್ನು ಮುಚ್ಚಿ ಸೀಲ್ ಮಾಡಬೇಕು ಎಂದು ಸೂಚಿಸಲಾಗಿದೆ. ಅಗತ್ಯವಿದ್ದಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಹಾಗೂ ಉಪವಿಭಾಗ ಅಬಕಾರಿ ಅಧೀಕ್ಷಕರು ಕಾನೂನು ಪ್ರಕಾರ ಶಾಂತಿ ಪಾಲನೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ಚಂದ್ರಗ್ರಹಣ ಗೊಂದಲ

ಮಂಗಳವಾರ ಈ ವರ್ಷದ ಮೊದಲ ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ಬಣ್ಣದಾಟ ಆಡಬೇಕೋ ಬೇಡವೋ ಎಂಬ ಗೊಂದಲವೂ ಸೃಷ್ಟಿಯಾಗಿದೆ. ಕೆಲವರು ಬಣ್ಣದಾಟಕ್ಕೆ ಸಜ್ಜಾಗಿದ್ದರೆ, ಇನ್ನು ಕೆಲವರು ಜ್ಯೋತಿಷಿಗಳ ಸಲಹೆ ಪಡೆದು ಬಣ್ಣದಾಟದಿಂದ ದೂರವಿರಲು ನಿರ್ಧರಿಸಿದ್ದಾರೆ. ಚಂದ್ರಗ್ರಹಣದ ಹಿನ್ನೆಲೆಯಲ್ಲಿ ನಗರದ ವಿವಿಧ ಮಂದಿರಗಳಲ್ಲಿ ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಗರ್ಭಗುಡಿಗಳನ್ನು ಬಟ್ಟೆಯಿಂದ ಮುಚ್ಚಲಾಗುತ್ತದೆ. ಮಂದಿರದ ಅರ್ಚಕರು ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ಬಣ್ಣದಾಟ ಆಡದಂತೆ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಲಕ್ಕೆ ಬೇಕಾಗುವ ಚಿಂತನೆ ಮಾಡೋದು ಸಾಹಿತ್ಯದ ಕೆಲಸ; ವೈ.ಎಂ.ಯಾಕೊಳ್ಳಿ
ನಿಡಗುಂದಿಯಲ್ಲಿ ಬೃಹತ್‌ ಶೋಭಾಯಾತ್ರೆ, ಕೇಸರಿಮಯ