- ಯುವಜನ ಸಮಿತಿ ಸಭೆಯಲ್ಲಿ ಎಸ್‌ಪಿ ಉಮಾ ಪ್ರಶಾಂತ ಸಲಹೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ದೇಶದ ಸದೃಢತೆಗೆ ಯುವಶಕ್ತಿ ಸನ್ನದ್ಧರಾಗಿ ಸಮಾಜಘಾತಕ ಶಕ್ತಿಗಳ ಮಾಹಿತಿಯನ್ನು ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ಯುವಜನರು ಇಂದಿನ ದಿನಗಳಲ್ಲಿ ಮೊಬೈಲ್ ಬಳಕೆಗೆ ಹೆಚ್ಚಿನ ಸಮಯ ವ್ಯಯ ಮಾಡುವ ಮೂಲಕ ತಮ್ಮ ಉತ್ತಮ ಭವಿಷ್ಯಕ್ಕೆ ಮೀಸಲಾದ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಯುವಪೀಳಿಗೆಯನ್ನು ಆವರಿಸಿರುವ ಮಾದಕ ವಸ್ತುಗಳು ದೈಹಿಕವಾಗಿ ಮಾತ್ರವಲ್ಲ, ಅವರ ಮಾನಸಿಕ ಆರೋಗ್ಯ ಹದಗೆಡಿಸುವುದು. ಕುಟುಂಬದ ಆರ್ಥಿಕತೆ ಹಾಗೂ ಸಮಾಜದ ಆರ್ಥಿಕತೆ ಮೇಲೆ ನಷ್ಟ ತರುತ್ತದೆ ಎಂದು ಎಚ್ಚರಿಸಿದರು.
ಪ್ರಗತಿ ಮತ್ತು ನಾವೀನ್ಯತೆಯನ್ನು ತರಲು ಸಾಕಷ್ಟು ಸಾಮರ್ಥ್ಯ ಹೊಂದಿರುವ ಯುವಕರಲ್ಲಿ ದೇಶದ ಆಡಳಿತ ವ್ಯವಸ್ಥೆ ಬದಲಾಯಿಸುವ ಕ್ರಿಯಾತ್ಮಕ ಶಕ್ತಿಯೂ ಆಡಗಿದೆ. ದೇಶದ ಉಜ್ವಲತೆ ಮತ್ತು ಉತ್ತುಂಗಕ್ಕೆ ಕೊಂಡೊಯ್ಯಲು ಅವರ ಶಕ್ತಿ, ಆಲೋಚನೆಗಳು ಮತ್ತು ನಾವೀನ್ಯತೆ ಇಂದಿನ ಅಗತ್ಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯುವಕರು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನೆ ನೀಡುವ ಪೋಸ್ಟ್ ಹಾಕುವುದಾಗಲಿ ಅಥವಾ ಫೇಕ್ ನ್ಯೂಸ್ ಮಾಡುವುದಾಗಲಿ ಅಥವಾ ಇನ್ಯಾವುದೇ ಅಚಾತುರ್ಯ ಘಟನೆಗಳಲ್ಲಿ ಭಾಗಿಯಾದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.ಹೆಚ್ಚುವರಿ ರಕ್ಷಣಾಧಿಕಾರಿ ವಿಜಯ್‌ಕುಮಾರ್ ಎಂ.ಸಂತೋಷ್ ಮಾತನಾಡಿ, ಸಮಾಜದಲ್ಲಿ ಕೆಡುಕು ಬಯಸುವವರ ಬಗ್ಗೆ ಇಲಾಖೆಗೆ ಮಾಹಿತಿ ನೀಡಲು ಪ್ರತಿಯೊಂದು ಗ್ರಾಮ, ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಯುವ ಸಮಿತಿ ರಚನೆ ಮಾಡಲಾಗಿದೆ. ತಮ್ಮ ಸುತ್ತಮುತ್ತ ನಡೆಯುವಂತ ಸಮಾಜಘಾತಕ ಕೃತ್ಯ, ಮಾದಕ ವಸ್ತುಗಳ ಮಾರಾಟ, ಜೂಜಾಟ, ಅಹಿತಕರ ಘಟನೆಗಳ ಬಗ್ಗೆ ನಿಖರವಾದ ಮಾಹಿತಿ ನೀಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಡಿವೈಎಸ್‌ಪಿ ಮಲ್ಲೇಶ್ ಹಾಗೂ ಇತರೆ ಅಧಿಕಾರಿಗಳು, ಯುವಕರು ಉಪಸ್ಥಿತರಿದ್ದರು.- - -
ಕೋಟ್ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಿದೇ ಇದ್ದಲ್ಲಿ ಪೊಲೀಸ್ ಠಾಣೆ ಮುಂದೆ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಅದನ್ನು ಸ್ಕ್ಯಾನ್ ಮಾಡಿ ಅವರ ಬಗ್ಗೆ ಮಾಹಿತಿ ನೀಡಿದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ಯುವಜನರು ತಮ್ಮ ಜಿಲ್ಲೆ, ತಾಲೂಕು ಮತ್ತು ಗ್ರಾಮಗಳಲ್ಲಿ ಕಾನೂನು ಉಲ್ಲಂಘನೆ, ಕಾನೂನುಬಾಹಿರ ಚಟುವಟಿಕೆ ನಡೆದಿದ್ದಲ್ಲಿ ಪೊಲೀಸ್ ಇಲಾಖೆ ಮೇಲೆ ಗೌರವ, ನಂಬಿಕೆಯಿಟ್ಟು ಧೈರ್ಯವಾಗಿ ಮಾಹಿತಿ ನೀಡಲು ಮುಂದಾಗಬೇಕು
- ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ- - -
-20ಕೆಡಿವಿಜಿ36ಃ:ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಯುವಜನ ಸಮಿತಿ ಸಭೆ ನಡೆಯಿತು.